ಜನಪದ ಹಾಡುಗಳಲ್ಲಿ ತುಳುವಿಗೆ ಶಕ್ತಿ: ಡಾ. ನವೀನ ಕುಮಾರ ಮರಿಕೆ
ಪುತ್ತೂರು: ಉಳಿದ ಭಾಷೆಗಳಿಗೆ ಹೋಲಿಸಿದರೆ ತುಳು ಭಾಷೆಯಲ್ಲಿ ಗ್ರಂಥಗಳು ಕಡಿಮೆ. ಅದು ಮೌಖಿಕ ಸಾಹಿತ್ಯದ ಕೈಗನ್ನಡಿ. ತುಳು ಬರಹ ಕಡಿಮೆಯೆಂದು ಚಿಂತಿಸ ಬೇಕಿಲ್ಲ ಭೂತದ ನುಡಿ, ಹಲವಾರು ಜನಪದ ತುಳು ಹಾಡುಗಳಿಂದ ತುಳು ಬೆಳೆಯುತ್ತದೆ. ಜನಪದ ಹಾಡುಗಳಲ್ಲಿ ತುಳುವಿಗೆ ಶಕ್ತಿ ದೊರೆಯುತ್ತದೆ. ತುಳುವಿಗೆ ಲಿಪಿ ಇದೆ. ಅದು ಯಾರಿಗೂ ತಿಳಿದಿಲ್ಲ. ಲಿಪಿ ಇಲ್ಲದೆಯೂ ಭಾಷೆ ಬೆಳೆಯಬಹುದು ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ ನವೀನ ಕುಮಾರ ಮರಿಕೆ ತಿಳಿಸಿದರು.
ಅವರು ವಿವೇಕಾನಂದ ಕಾಲೇಜಿನಲ್ಲಿ ತುಳು ಸಂಘದ ೨೦೧೪-೧೫ನೇ ಸಾಲಿನ ಕಾರ್ಯ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಒಂದು ಬಾಷೆ ಬೆಳೆಯ ಬೇಕಾದರೆ ಕಲಿಯಬೇಕು. ಅದರಿಂದ ಆ ಭಾಷೆ ಎಲ್ಲೆಡೆ ಪಸರಿಸುತ್ತದೆ. ಪ್ರಸ್ತುತ ತುಳು ಭಾಷೆಯ ಬೆಳವಣಿಗೆಯ ಬಗೆಗೆ ಭಯವಿದೆ. ಆದರೆ ಆತಂಕ ತುಳು ಭಾಷೆಗೆ ಮಾತ್ರವಲ್ಲ ಹಿಂದಿ, ಇಂಗ್ಲೀಷ್ ಮಲಯಾಳಂ ಹೀಗೆ ಹಲವಾರು ಭಾಷೆಗಳಿಗೆ ಅಳಿವಿನ ಭಯವಿದೆ. ಆದರೆ ಒಂದು ಭಾಷೆಯನ್ನು ಹಾಗೂ ಸಂಸ್ಕೃತಿಯನ್ನು ಸೋಲಿಸುವುದು ಅಷ್ಟು ಸುಲಭವಲ್ಲ ಎಂದರು.
ತುಳು ಭಾಷೆ ಬೆಳವಣಿಗೆಗೆ ಅದರ ಉಪಭಾಷೆಗಳನ್ನು ಸಂಗ್ರಹಿಸಿ ಕಥಾಸಂಕಲನ ಮಾಡಬೇಕು. ಅಂತರ್ಜಾಲ ತಾಣವಾದ ಫೇಸ್‌ಬುಕ್‌ನಲ್ಲಿ ತುಳುವಿನ ಒಂದು ಬ್ಲಾಗ್‌ನ್ನು ಮಾಡಿ ತುಳು ಬಾಷೆಯ ಕಥೆ, ಕವನವನ್ನು ರಚಿಸಿ ಅದರಲ್ಲಿ ಪ್ರಕಟಿಸಬೇಕು. ಇದರಿಂದ ತುಳು ಹರಡುತ್ತದೆ. ಹೀಗಾದಲ್ಲಿ ಸೂರ್‍ಯ ಚಂದ್ರರಿರುವ ವರೆಗೆ ತುಳಿವಿಗೆ ಅಳಿವಿಲ್ಲ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಶಪಾಲ ಡಾ.ಎಚ್ ಮಾಧವ ಭಟ್ ತುಳುವಿಗೆ ಅಪಾರ ಶಕ್ತಿ ಇದೆ. ತುಳು ಭಾಷೆಯ ಬೀಜವನ್ನು ದೇಶದಾದ್ಯಂತ ಬಿತ್ತಿ ಅದು ಅದಕ್ಕೆ ನೀರೆರೆದು ಚಿಗುರೊಡೆಯುವಂತೆ ಮಾಡಬೇಕು. ಪ್ರತಿಯೊಂದು ಭಾಷೆಗೆ ಅದರದೇ ಆದ ಇತಿಹಾಸವಿದೆ ಎಂದರು.
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎನ್ ನರಸಿಂಹ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತುಳು ಸಂಘದ ಅಧ್ಯಕ್ಷ ಅತುಲ್ ಕಶ್ಯಪ್ ಸ್ವಾಗತಿಸಿದರು. ಕಾರ್‍ಯದರ್ಶಿ ಶೃತಿ ಆರ್ ವಂದಿಸಿದರು. ವಿದ್ಯಾರ್ಥಿನಿ ಶಬರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.