ಜವಾಬ್ಧಾರಿಯನ್ನರಿತು ರಾಜಕೀಯಕ್ಕೆ ಪ್ರವೇಶಿಸಬೇಕು: ಹರಿಣಿ
ಪುತ್ತೂರು: ದೇಶದ ಸಮಸ್ಯೆಗಳಿಗೆ ಶಿಕ್ಷಣದ ಕೊರತೆಯೇ ಕಾರಣ. ವಿದ್ಯೆ ಮತ್ತು ಯುವಜನತೆ ಒಟ್ಟು ಸೇರಿದಾಗ ದೇಶವನ್ನೇ ಬದಲಾಯಿಸಬಹುದು. ಸ್ವಾತಂತ್ರ್ಯ ಪೂರ್ವದಲ್ಲೇ ವಿದ್ಯಾರ್ಥಿಗಳ ಚಳುವಳಿಗೆ ಬೆಂಬಲ ಸಿಕ್ಕಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣವನ್ನು ಬೆಳೆಸುವ ಕಾಲೇಜು ವಿದ್ಯಾರ್ಥಿ ಸಂಘಗಳನ್ನು ಸಹಕಾರಿಯಾಗಿವೆ ಎಂದು ವಿವೇಕಾನಂದ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಉಪನ್ಯಾಸಕಿ ಹರಿಣಿ ಹೇಳಿದರು.
ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ವಿದ್ಯಾರ್ಥಿಗಳು ರೂಪಿಸಿದ ಚರ್ಚಾ ಕಾರ್ಯಕ್ರಮ ’ಮಾತು ಮಥನ’ದಲ್ಲಿ ಭಾಗವಹಿಸಿ ’ವಿದ್ಯಾರ್ಥಿಗಳ ರಾಜಕೀಯ ಪ್ರವೇಶ’ ವಿಚಾರದ ಬಗೆಗೆ ಸಮನ್ವಯ ಭಾಷಣ ಮಾಡಿದರು.
ಇಂದು ರಾಜಕೀಯ ಕ್ಷೇತ್ರ ವಿದ್ಯಾರ್ಥಿಗಳನ್ನು ಬಹಳ ಸೆಳೆಯುತ್ತಿದೆ. ಅವುಗಳು ವಿದ್ಯಾರ್ಥಿಗಳಲ್ಲಿನ ಕುತೂಹಲತೆಯನ್ನು, ಕ್ರೀಯಶೀಲತೆಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದೆ. ಆದರೆ ವಿದ್ಯಾರ್ಜನೆಯ ಹಂತದಲ್ಲಿ ವಿದ್ಯಾರ್ಥಿಗಳು ರಾಜಕೀಯಕ್ಕೆ ಪ್ರವೇಶಿಸುವುದು ಸಮಂಜಸವಲ್ಲ. ವಿದ್ಯಾರ್ಥಿಗಳು ಮೊದಲು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಂತರವೇ ರಾಜಕೀಯಕ್ಕೆ ಅಡಿಯಿಡಬೇಕು ಎಂದರು.
ವಿದ್ಯಾರ್ಥಿಗಳಾದ ಸ್ವಾತಿ ಸುಬ್ರಹ್ಮಣ್ಯ, ಪೂಜಾ ಪಕ್ಕಳ, ಹರ್ಷಿತ್.ಎನ್ ವಿಷಯದ ಪರವಾಗಿ ವಾದ ಮಂಡಿಸಿದರೆ, ವಿಷಯದ ವಿರುದ್ಧವಾಗಿ ಸೃಜನಿ ಎಸ್.ರೈ, ರಕ್ಷಿತ್ ರೈ.ಪಿ, ಪ್ರಣವ್.ಕೆ ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾರ್ಥಿನಿ ಕಾವೇರಿ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ವಂದಿಸಿದರು.