ಜೀವನದ ಅನುಭವಗಳೇ ಸಾಹಿತ್ಯ: ವಿದ್ಯಾ ಎಸ್
ಪುತ್ತೂರು : ಸಾಹಿತ್ಯ ಇಂತದ್ದೇ ಸನ್ನಿವೇಶದಲ್ಲಿ ಹುಟ್ಟುವುದಲ್ಲ, ಜೀವನದ ಅನುಭವಗಳು ತೀವ್ರತೆಯ ಸ್ವರೂಪವನ್ನು ಪಡೆದಾಗ ಸಾಹಿತ್ಯದ ರೂಪವನ್ನು ತಾಳುತ್ತದೆ ಎಂದು ವಿವೇಕಾನಂದ ಮಹಾವಿದ್ಯಾಲಯದ ಸಮಾಜಶಾಸ್ತ್ರ ಉಪನ್ಯಾಸಕಿ ವಿದ್ಯಾ ಎಸ್. ಹೇಳಿದರು.
ಅವರು ಕಾಲೇಜಿನ ತೃತೀಯ ಐಚ್ಛಿಕ ಕನ್ನಡ ವಿದ್ಯಾರ್ಥಿಗಳು ಕನ್ನಡ ವಿಭಾಗದ ಸಹಯೋಗದಲ್ಲಿ ಆಯೋಜಿಸುತ್ತಿರುವ ಸಾಹಿತ್ಯ ಮಂಟಪ – ಸಾಹಿತ್ಯ ಪ್ರಿಯಮನಗಳ ಸಂಮಿಲನ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಷ್ಟಗಳೇ ಇಲ್ಲದಿರುವಾಗ ಸುಖದ ಅನುಭವವಾಗಲು, ಕತ್ತಲೆಯೇ ಇಲ್ಲದಿದ್ದಾಗ ಬೆಳಕಿನ ಅನುಭವವಾಗಲು ಹೇಗೆ ಸಾಧ್ಯವಿಲ್ಲವೋ ಅದರಂತೆ ಸಾಹಿತ್ಯ ಕೂಡ. ಹೀಗಿರುವಾಗ ಜೀವನದ ಕಹಿ ಅನುಭವಗಳನ್ನು ವಿಶಾದದಿಂದ ದಾಖಲಿಸುವುದಕ್ಕಿಂತ ಧನಾತ್ಮಕವಾಗಿ ಪರಿಣಮಿಸುವಂತೆ ಚಿತ್ರಿಸಬೇಕೆಂದು ನುಡಿದರು.ಅವರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಎಚ್.ಜಿ. ಶ್ರೀಧರ್ ಮಾತನಾಡಿ ಸಾಹಿತ್ಯ ರಚಿಸುವ ಸ್ಫೂರ್ತಿ ಮಿಂಚಿ ಮರೆಯಾಗುವಂತದ್ದು. ಆ ಸ್ಫೂರ್ತಿ ಬಂದಾಗ ಬಳಸಿಕೊಳ್ಳಬೇಕು. ನೋಡುವ ಕಣ್ಣು, ಗ್ರಹಿಸುವ ಶಕ್ತಿ ಸಾಹಿತಿಗಿರಬೇಕಾದ ಮುಖ್ಯ ಲಕ್ಷಣ. ಇದನ್ನು ಆದಿಕವಿ ಪಂಪನು ಮಾಮರ ಹಾಗು ಮಲ್ಲಿಗೆಯನ್ನು ವರ್ಣಿಸುವಲ್ಲಿ ಕಾಣಬಹುದಾಗಿದೆ. ಮಾತ್ರವಲ್ಲದೇ ಜೀವನವನ್ನು ತೆರೆದ ಕಣ್ಣಿನಿಂದ ನೋಡುವುದನ್ನು ಸಾಹಿತ್ಯದ ವಿದ್ಯಾರ್ಥಿಗಳು ಮೈಗೂಡಿಸಬೇಕು ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಪ್ರಿಯಶ್ರೀ ಕೆ.ಎಸ್, ಯಾಮಿನಿ ಕೆ.ಎಲ್, ಅಕ್ಷತಾ ಡಿ. ಸಾಲ್ಯಾನ್, ಜಯಶ್ರೀ ಇಡ್ಕಿದು, ಮಹಮ್ಮದ್ ಆಝಾದ್, ದೀನವಿ, ಕ್ಷಮಾದೇವಿ ಕೆ, ಹರೀಶ ಕೆ. ತಮ್ಮ ಸ್ವರಚಿತ ಬರಹಗಳ ನಿವೇದನೆಯನ್ನು ಮಾಡಿದರು.
ಉಪನ್ಯಾಸಕಿ ಡಾ. ಗೀತಾ ಕುಮಾರಿ ಟಿ. ಸ್ವಾಗತಿಸಿದರು. ವಿದ್ಯಾರ್ಥಿನಿ ಭವ್ಯಶ್ರೀ ವಂದಿಸಿ, ಕಾವ್ಯಶ್ರೀ ಕಾರ್ಯಕ್ರಮವನ್ನು ನಿರ್ವಹಿಸಿದರು.