ವಿವೇಕಾನಂದ ಕ್ಯಾಂಪಸ್ನಲ್ಲಿ ಬೃಹತ್ ಉದ್ಯೋಗ ಮೇಳಕ್ಕೆ ಸಿದ್ಧತೆ – ಮುನ್ನೂರಕ್ಕೂ ಅಧಿಕ ಕಂಪೆನಿಗಳ ಸಂಪರ್ಕ ; ನೋಂದಾವಣೆ ಆರಂಭ
ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘವು ಇದೇ ಪ್ರಥಮ ಬಾರಿಗೆ ನೆಹರು ನಗರದ ತನ್ನ ವಿಶಾಲ ಕ್ಯಾಂಪಸ್‌ನಲ್ಲಿ ಉದ್ಯೋಗ ಮೇಳವೊಂದನ್ನು ಆಯೋಜಿಸುತ್ತಿದೆ. ಗ್ರಾಮೀಣ ಪ್ರದೇಶದ ಯುವ ಸಮೂಹ ಎದುರಿಸುತ್ತಿರುವ ನಿರುದ್ಯೋಗದ ಸಮಸ್ಯೆಯನ್ನು ಲಕ್ಷಯದಲ್ಲಿರಿಸಿ ಈ ಔದ್ಯೋಗಿಕ ಮೇಳವನ್ನು ರೂಪಿಸಲಾಗಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಮೂಲ ಆಶಯವಾದ ಗ್ರಾಮಾಭಿವೃದ್ಧಿಯ ಕನಸು ಈ ಉದ್ಯೋಗ ಮೇಳದ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈಗಾಗಲೇ ಈ ಶಿಕ್ಷಣ ಕೇಂದ್ರ ವಿವಿಧ ಗ್ರಾಮಗಳನ್ನು ದತ್ತು ತೆಗೆದುಕೊಂಡು ಅಲ್ಲಿನ ಸಮಗ್ರ ಅಭ್ಯುದಯಕ್ಕೆ ಪಣ ತೊಟ್ಟು ಕಾರ್ಯಪ್ರವೃತ್ತವಾಗಿದೆ. ಅದರ ಮುಂದುವರಿದ ಭಾಗವಾಗಿ ಉದ್ಯೋಗ ಕ್ಷೇತ್ರದ ಬಗೆಗೆ ಸರಿಯಾದ ಮಾಹಿತಿ, ಜ್ಞಾನ ದೊರಕದೆ ಉದ್ಯೋಗಹೀನರಾಗಿ ಗ್ರಾಮಗಳಲ್ಲುಳಿದ ಯುವ ಸಮೂಹವನ್ನು ಗಮನದಲ್ಲಿರಿಸಿ ಈ ಮೇಳ ಆಯೋಜನೆಗೊಂಡಿದೆ.
೨೦೧೭ರ ಜನವರಿ ೧೩ರಂದು ಈ ಉದ್ಯೋಗಮೇಳ ಆಯೋಜನೆಗೊಳ್ಳುತ್ತಿದ್ದು, ಸುಮಾರು ಮುನ್ನೂರಕ್ಕೂ ಅಧಿಕ ಕಂಪೆನಿಗಳನ್ನು ಸಂಪರ್ಕಿಸಲಾಗಿದೆ. ರಾಜ್ಯ ಹಾಗೂ ಹೊರರಾಜ್ಯದ ಅನೇಕ ಸಂಸ್ಥೆಗಳು ಈ ಉದ್ಯೋಗಮೇಳದಲ್ಲಿ ಭಾಗವಹಿಸಿ ಈ ಭಾಗದ ಯುವಕ ಯುವತಿಯರಿಗೆ ಉದ್ಯೋಗ ಕೊಡುವುದಕ್ಕೆ ಉತ್ಸಾಹ ತೋರಿಸಿವೆ. ಮಾಹಿತಿ ತಂತ್ರಜ್ಞಾನ, ರಿಯಲ್ ಎಸ್ಟೇಟ್, ಬ್ಯಾಂಕಿಂಗ್, ರಿಟೇಲ್ ಕ್ಷೇತ್ರದ ಉದ್ಯಮ, ಉತ್ಪಾದನಾ ಘಟಕಗಳೇ ಮೊದಲಾದ ಅನೇಕ ಉದ್ಯಮಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ.
ಯಾರು ಭಾಗವಹಿಸಬಹುದು?
ಪ್ರಾಥಮಿಕ, ಪ್ರೌಢಶಾಲಾ ಮಟ್ಟದಿಂದ ತೊಡಗಿ ಪಾರಂಪರಿಕ ಪದವಿಗಳಾದ ಬಿ.ಎ, ಬಿ.ಎಸ್ಸಿ, ಬಿ.ಕಾಂ ನಂತಹ ಪದವೀಧರರು, ಐಟಿಐ, ಡಿಪ್ಲಮೋದಂತಹ ವಿಷಯವನ್ನು ಓದಿದವರು, ಇಂಜಿನಿಯರಿಂಗ್, ಎಂ.ಬಿ.ಎ ಮೊದಲಾದ ವೃತ್ತಿಪರ ಶಿಕ್ಷಣ ಹೊಂದಿದವರು ಹೀಗೆ ವಿವಿಧ ಬಗೆಗೆ ವಿಷಯಗಳನ್ನು ಓದಿದವರೆಲ್ಲರೂ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು. ರಾಜ್ಯದ ಯಾವುದೇ ಭಾಗದ ಉದ್ಯೋಗಾರ್ಥಿಗಳು ಈ ಮೇಳದಲ್ಲಿ ಭಾಗವಹಿಸಬಹುದು.
ಏನು ಮಾಡಬೇಕು?
ಈಗಾಗಲೇ ಈ ಉದ್ಯೋಗ ಮೇಳದ ಹಿನ್ನಲೆಯಲ್ಲಿ ವೆಬ್ ಸೈಟ್ ಒಂದನ್ನು ರೂಪಿಸಲಾಗಿದೆ. ಆ ವೆಬ್ ಸೈಟ್‌ನಲ್ಲಿರುವ ಅರ್ಜಿಯನ್ನು ತುಂಬಿ ಭಾಗವಹಿಸುವ ಉಮೇದುಗಾರಿಕೆಯನ್ನು ನೋಂದಾವಣೆ ಮಾಡಬೇಕು. ವೆಬ್ ಸೈಟ್ ವಿಳಾಸ : www. vivekaudyoga.com ವೆಬ್‌ಸೈಟ್‌ನಲ್ಲಿ ದಾಖಲೆ ಮಾಡಲು ಸಾಧ್ಯವಾಗದವರು ನೆಹರುನಗರದ ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ರೂಪಿಸಲಾಗಿರುವ ಉದ್ಯೋಗ ಮೇಳದ ಮಾಹಿತಿ ಕೇಂದ್ರಕ್ಕೆ ನೇರವಾಗಿ ಆಗಮಿಸಿ ಅಥವ +91 87628 37499 ಈ ಸಂಖ್ಯೆಗೆ ಕರೆ ಮಾಡಿ ಹೆಸರು ನೋಂದಾವಣೆ ಮಾಡಿಕೊಳ್ಳಬಹುದು. ತಮ್ಮ ಹೆಸರನ್ನು ದಾಖಲೆ ಮಾಡಿಕೊಂಡವರಿಗೆ ಕೆಲವು ದಿನಗಳ ನಂತರ ಅಗತ್ಯ ಮಾಹಿತಿ, ಉದ್ಯೋಗ ಮೇಳಕ್ಕೆ ಆಗಮಿಸುವಾಗಿನ ಸಿದ್ಧತೆ ಬಗೆಗೆ ಮಾಹಿತಿ ನೀಡಲಾಗುತ್ತದೆ. ಈ ಮಾಹಿತಿ ಕೇಂದ್ರ ಬೆಳಗ್ಗೆ 9ರಿಂದ ಸಂಜೆ5ರವರೆಗೆ ತೆರೆದಿರುತ್ತದೆ ಎಂದು ಉದ್ಯೋಗ ಮೇಳ ಸಮಿತಿಯ ಅಧ್ಯಕ್ಷ ಎಸ್.ಆರ್.ರಂಗಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.