VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದದಲ್ಲಿ ದ.ರಾ.ಬೇಂದ್ರೆ ಕಾವ್ಯಾನುಭವ ಕಾರ್ಯಕ್ರಮ – ಬೇಂದ್ರೆ ಕಾವ್ಯಗಳಲ್ಲಿ ಜಾಗತಿಕ ಸಂವೇದನೆಯಿದೆ : ಡಾ. ಬಿದಿರ ಕುಂದಿ

ಪುತ್ತೂರು: ಆಧುನಿಕ ಕನ್ನಡ ಭಾವಗೀತೆಯ ಆದಿ ಕವಿ ದ.ರಾ.ಬೇಂದ್ರೆ. ಅವರು ಕವನ, ಕಾವ್ಯಗಳನ್ನು ಕೇವಲ ಹವ್ಯಾಸದ ಕಾಯಕವಾಗಿರಿಸಿಕೊಳ್ಳದೆ ಅದನ್ನೇ ಜೀವನವನ್ನಾಗಿ ಸೇವಿಸಿದವರು. ಅಂತಹವರ ಸಾಹಿತ್ಯ ಹಾಗೂ ಬದುಕಿನ ಬಗೆಗಿನ ಓದು ನಮ್ಮನ್ನು ಜ್ಞಾನ ಹಾಗೂ ಅನುಭವ ಶ್ರೀಮಂತರನ್ನಾಗಿಸುತ್ತದೆಯಲ್ಲದೆ ಬದುಕಿಗೊಂದು ಆತ್ಮವಿಶ್ವಾಸವನ್ನು ಒದಗಿಸುತ್ತದೆ ಎಂದು ಧಾರವಾಡದ ಬೇಂದ್ರೆ ಟ್ರಸ್ಟ್‌ನ ಅಧ್ಯಕ್ಷ ಡಾ.ಶ್ಯಾಮ ಸುಂದರ ಬಿದಿರ ಕುಂದಿ ಹೇಳಿದರು.

ಅವರು ವಿವೇಕಾನಂದ ಕಾಲೇಜಿನಲ್ಲಿ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಬೇಂದ್ರೆ ಟ್ರಸ್ಟ್  ಸಹಯೋಗದೊಂದಿಗೆ ಆಯೋಜಿಸಲಾದ ದ.ರಾ.ಬೇಂದ್ರೆ ಕಾವ್ಯಾನುಭವ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೇಂದ್ರೆ ಬದುಕು-ಬರಹದ ಬಗೆಗೆ ಗುರುವಾರ ಉಪನ್ಯಾಸ ನೀಡಿದರು.

News Photo - Udghaatane - Dr.Peter Wilson Prabhakar

ಬೇಂದ್ರೆ ಗೀತೆಗಳಲ್ಲಿ ಕೇವಲ ವೈಯಕ್ತಿಕ ಸಂವೇದನೆ ಮಾತ್ರವಲ್ಲದೆ ಜಾಗತಿಕ ಸಂವೇದನೆಯನ್ನೂ ಗುರುತಿಸಬಹುದು. ದೇಶದ ನಾನಾ ಭಾಗಗಳಲ್ಲಾಗುವ ಸಂಗತಿ, ಘಟನೆಗಳಿಗೆ ಬೇಂದ್ರೆ ಸ್ಪಂದಿಸುತ್ತಿದ್ದರು. ಬಿಹಾರದಲ್ಲಿ ತೀವ್ರ ಬರ ಬಂದಿದ್ದ ಸಂದರ್ಭದಲ್ಲಿ ಬೇಂದ್ರೆಯವರ ಗಂಗಾವತರಣ ಕಾವ್ಯ ಸೃಷ್ಟಿಯಾಯಿತು. ಅವರ ಮನೆ ಭಾಷೆ ಮರಾಠಿಯಾಗಿದ್ದರೂ ಸಾಹಿತ್ಯ ಭಾಷೆ ಕನ್ನಡವಾಯಿತು. ಅವರಂತೆ ಸಾಮಾನ್ಯರ ಭಾಷೆಯನ್ನು ಅದ್ಬುತ ಕಾವ್ಯ ಸೃಷ್ಟಿಗೆ ಬಳಸಿದ ಬೇರೆ ಕವಿಗಳ ಉದಾಹರಣೆ ಇಲ್ಲ ಎಂದು ನುಡಿದರು.

ಪ್ರೀತಿ, ಒಲುಮೆಗಳ ಬಗೆಗೆ ಅಪಾರ ನಂಬಿಕೆ ಇಟ್ಟಿದ್ದವರು ಬೇಂದ್ರೆ. ಅವರೊಬ್ಬ ಪ್ರಾಮಾಣಿಕ, ದ್ವಂದ್ವವಿಲ್ಲದ ವ್ಯಕ್ತಿತ್ವ. ಜೀವನದಲ್ಲಿನ ನಿರಾಸೆಗೆ ಆತ್ಮಹತ್ಯೆ ಪರಿಹಾರವಲ್ಲ ಎಂಬ ಬಲವಾದ ನಂಬಿಕೆ ಅವರಲ್ಲಿತ್ತು. ಆದುದರಿಂದ ಅವರು ಆತ್ಮಹತ್ಯೆಯನ್ನು ಪುರಸ್ಕರಿಸುತ್ತಿರಲಿಲ್ಲ. ಕಾಮವನ್ನು ಸಕಾರಾತ್ಮಕ ದೃಷ್ಟಿಯಲ್ಲಿ ಪ್ರತಿಪಾದಿಸಿದವರು ಅವರು. ಸಮಾಜದ ಅಧಃಪತನಗಳಿಗೆಲ್ಲಾ ಕಾಮವನ್ನು ತಪ್ಪಾಗಿ ತಿಳಿದುದೇ ಕಾರಣ ಎಂದು ಸ್ಪಷ್ಟವಾಗಿ ಅವರು ತಿಳಿದಿದ್ದರು ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್  ಪ್ರಭಾಕರ್ ಮಾತನಾಡಿ ಬೇಂದ್ರೆಯವರೆಂದರೆ ವಿದ್ಯಾ ಸರಸ್ವತಿ ಮತ್ತು ಸಾಹಿತ್ಯ ಸರಸ್ವತಿಯ ಸಮ್ಮಿಲನ. ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಅವರು. ಸಾಹಿತ್ಯಕ್ಕೆ ಐತಿಹಾಸಿಕವಾಗಿಯೂ ಅಪಾರ ಮನ್ನಣೆಯಿದೆ. ಹತ್ತೊಂಬತ್ತನೆಯ ಶತಮಾನದ ಹಿಂದಿನ ಸಂಗತಿಗಳನ್ನು ಅರಿಯಲು ಇರುವ ಮಾರ್ಗ ಸಾಹಿತ್ಯ ಮಾತ್ರ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ ನಮ್ಮ ಸಮಾಜದಲ್ಲಿ ವ್ಯವಸ್ಥೆಯನ್ನು ಸಮತಟ್ಟು ಮಾಡಿ ಆಕಾಂಕ್ಷೆಯ ಮೋಡ ಬಿತ್ತುವ ಕಾರ್ಯ ನಡೆಯುತ್ತಿದೆ. ನಮ್ಮ ಪರಂಪರೆ, ಜೀವನ ಪದ್ಧತಿಯ ಬಗೆಗೆ ಅವಜ್ಞೆ ಮೂಡುತ್ತಿರುವುದು ಆತಂಕದ ವಿಚಾರ. ನಟನೊಬ್ಬನ ಸಿನೆಮಾ ಬಿಡುಗಡೆಯಾದಾಗ ಬೆಂಗಳೂರಿನ ಐಟಿ ಕಂಪೆನಿಯೊಂದು ಕಛೇರಿಗೆ ರಜೆ ನೀಡುತ್ತದೆ. ಆದರೆ ಸ್ವಚ್ಛ ಭಾರತಕ್ಕೋ, ಕೋಟಿ ವೃಕ್ಷ ಅಭಿಯಾನಕ್ಕೋ ಇಂತಹ ವರ್ತನೆ ತೋರುವುದಿಲ್ಲ. ಇದು ನಮ್ಮಲ್ಲಿ ಕುಸಿಯುತ್ತಿರುವ ಮೌಲ್ಯಗಳನ್ನು ಕಾಣಿಸುತ್ತದೆ. ನಮ್ಮ ಜೀವನ ಹಿಂದಿನವರ ಜೀವನದೊಂದಿಗೆ ಮೇಳೈಸಿದಾಗ ಉತ್ತಮ ಭವಿಷ್ಯ ನಿರ್ಮಾಣವಾಗುತ್ತದೆ. ಈ ಹಿನ್ನಲೆಯಲ್ಲಿ ಬೇಂದ್ರೆಯವರಂತಹ ಕವಿಗಳ ಬಗೆಗೆ ಅಧ್ಯಯನ ನಡೆಸಬೇಕು ಎಂದರು.

ಈ ಸಂದರ್ಭದಲ್ಲಿ ವಿದ್ಯಾಥಿಗಳಾದ ಶಿವಶಂಕರ ಮಯ್ಯ, ಅಖಿಲಾ ಪಜಿಮಣ್ಣು, ಪ್ರಥಮಾ ಉಪಾಧ್ಯಾಯ ಬೇಂದ್ರೆಯವರ ವಿವಿಧ ಗೀತೆಗಳನ್ನು ಪ್ರಸ್ತುತಪಡಿಸಿದರು. ವೇದಿಕೆಯಲ್ಲಿ ಕಲಾವಿದ ಅನಂತ್ ಕೆ ದೇಶಪಾಂಡೆ ಉಪಸ್ಥಿತರಿದ್ದರು.

ಕನ್ನಡ ವಿಭಾಗ ಮುಖ್ಯಸ್ಥ ಡಾ.ಎಚ್.ಜಿ.ಶ್ರೀಧರ ಪ್ರಸ್ತಾವನನೆಗೈದು ಸ್ವಾಗತಿಸಿದರು. ತಾಲೂಕು ಕ.ಸಾ.ಪ ಅಧ್ಯಕ್ಷ ಬಿ.ಐತ್ತಪ್ಪ ನಾಯ್ಕ್ ವಂದಿಸಿದರು.