VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ಕಲೆಗೆ ಪ್ರತಿಭೆಯ ಸ್ಪರ್ಶ ಅಗತ್ಯ : ಡಾ.ಎಂ. ಪ್ರಭಾಕರ ಜೋಷಿ

ಪುತ್ತೂರು: ಯಾವುದೇ ಕಲೆಯನ್ನು ಅಭ್ಯಸಿಸುವಾಗ ಅದನ್ನು ನಿರ್ದಿಷ್ಟ ಮಿತಿಗೆ ಒಳಪಡಿಸದೇ ಅದರೊಳಗೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು. ಈ ರೀತಿ ತೊಡಗಿಸಿಕೊಳ್ಳುವಿಕೆಯ ಪರಿಣಾಮದಿಂದಲಾಗಿ ಯಕ್ಷಗಾನ ಕಲೆ ಪ್ರಸಿದ್ಧಿಯನ್ನು ಪಡೆದಿದೆ. ಇತ್ತೀಚಿನ ದಿನಗಳಲ್ಲಿ ಯಕ್ಷಗಾನವನ್ನು ಒಳಗೊಂಡಂತೆ ಎಲ್ಲಾ ಕಲೆಗಳಲ್ಲಿಯೂ ಆಧುನಿಕತೆಯ ಪರಿಣಾಮವನ್ನು ಕಾಣಬಹುದಾಗಿದೆ ಎಂದು ಯಕ್ಷಗಾನ ಕಲಾವಿದ, ವಿಮರ್ಶಕ ಡಾ. ಎಂ ಪ್ರಭಾಕರ ಜೋಷಿ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಯಕ್ಷರಂಜಿನಿ ಸಂಘಟನೆಯ ಆಶ್ರಯದಲ್ಲಿ ನಡೆದ ಯಕ್ಷಗಾನ ನಾಟ್ಯ ತರಬೇತಿ ತರಗತಿ ಹಾಗೂ ಸಂಘದ ಚಟುವಟಿಕೆಗಳನ್ನು ಉದ್ಘಾಟಿಸಿ ಸೋಮವಾರ ಮಾತನಾಡಿದರು.

News Photo - Dr. P.Joshi

ಪ್ರಸ್ತುತ ದಿನಗಳಲ್ಲಿ ಕಲೆಯನ್ನು ಆದಾಯದ ಮೂಲವೆಂದೇ ಭಾವಿಸಲಾಗಿದೆ. ಆಧುನಿಕ ಸಿನಿಮಾಗಳಿಂದಾಗಿ, ಮಾಧ್ಯಮದಿಂದಲಾಗಿ ಕಲೆ ವ್ಯವಹಾರವಾಗುತ್ತಿರುವುದು ಬೇಸರದ ಸಂಗತಿ. ಯಕ್ಷಗಾನದಲ್ಲಿ ಬಾಹ್ಯವಾಗಿ ಅನೇಕ ಬದಲಾವಣೆಗಳನ್ನು ಕಂಡರೂ ಆಂತರ್ಯದಲ್ಲಿ ಏಕತೆಯ ವೈಖರಿಯನ್ನು ಕಾಣಬಹುದು ಎಂದರು.

ಅಭಿರುಚಿಯಲ್ಲಿ, ಶಿಕ್ಷಣ ಕ್ರಮದಲ್ಲಿ ಅನೇಕ ಬದಲಾವಣೆಗಳು ಬಂದಿರುವ ಕಾರಣದಿಂದಲಾಗಿ ಅಳಿವಿನ ಅಂಚಿನಲ್ಲಿರುವ ಕಲೆಗಳಿಗೆ ರಾಜಾಶ್ರಯ ಲಭಿಸಿದಂತಾಗಿದೆ. ಆ ನಿಟ್ಟಿನಲ್ಲಿ ಬಹುಭಾಷಾ ಪಾರಂಗತರಾದ ಕರಾವಳಿಯ ಜನ ಯಕ್ಷಗಾನದಲ್ಲಿ ತಮ್ಮನ್ನು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಬೇಕಾದ ಅವಶ್ಯಕತೆ ಇದೆ ಎಂದು ಆಶಯ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಇಂದಿನ ಕಾಲದಲ್ಲಿ ಸಿನಿಮಾ ಆಕ್ರಮಿಸಿಕೊಂಡ ಸ್ಥಾನವನ್ನು ಹಿಂದೆ ಯಕ್ಷಗಾನ, ನಾಟಕಗಳು ಆವರಿಸಿತ್ತು. ಅಂದಿನ ಕಾಲದಲ್ಲಿ ಸಂಜೆಯ ಹೊತ್ತಿಗೆ ಯಕ್ಷಪ್ರೇಮಿಗಳ ಸಂಚಾರವನ್ನು ಕಾಣಬಹುದಾಗಿತ್ತು ಎಂದು ತಿಳಿಸಿದರು.

ಯಕ್ಷಗಾನ ಅಮೂರ್ತ ಪರಂಪರೆಗೆ ಸೇರಿದ್ದಾಗಿದ್ದು ಪ್ರಸ್ತುತ ವ್ಯವಹಾರದ ದೃಷ್ಠಿಕೋನವನ್ನು ಪಡೆದಿದೆ. ತುಳುನಾಡಿನ ಸಂಸ್ಕೃತಿಯಲ್ಲಿ ಪಾರಂಪರಿಕವಾಗಿ ಯಕ್ಷಗಾನ ಬಂದಿದ್ದು ಈಗಿನ ಯುವ ಜನತೆ ಮುಂದುವರಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಪೆರ್ಲದ ಶ್ರೀ ಪಡ್ರೆಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ ಯಕ್ಷಗುರು ಸಬ್ಬಣಕೋಡಿ ರಾಮ ಭಟ್ ಹಾಗೂ ಯಕ್ಷರಂಜಿನಿಯ ಕಾರ್ಯದರ್ಶಿ ಸೂರಜ್ ಪದ್ಯಾಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಯಕ್ಷರಂಜಿನಿಯ ಸಂಚಾಲಕ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿ, ಕನ್ನಡ ವಿಭಾಗ ಮುಖ್ಯಸ್ಥ ಡಾ. ಎಚ್.ಜಿ. ಶ್ರೀಧರ್ ಪ್ರಾಸ್ತಾವನೆಗೈದರು. ಕನ್ನಡ ಉಪನ್ಯಾಸಕರಾದ ರೋಹಿಣಾಕ್ಷ ಎಸ್. ವಂದಿಸಿ, ಡಾ. ಗೀತಾ ಕುಮಾರಿ ಟಿ. ಕಾರ್ಯಕ್ರಮ ನಿರ್ವಹಿಸಿದರು.