ವಿವೇಕಾನಂದದಲ್ಲಿ ವಿಶ್ವವಿದ್ಯಾನಿಲಯದಿಂದ ಉಪನ್ಯಾಸ ಮಾಲಿಕೆ : ಕಾಯಕಲ್ಪದ ಕವಿ ಅಮೃತ ಸೋಮೇಶ್ವರ : ಡಾ. ಸಂಪೂರ್ಣಾನಂದ ಬಳ್ಕೂರ್
ಪುತ್ತೂರು: ಯಕ್ಷಗಾನಕ್ಕೆ ಒಂದು ಕಾಯಕಲ್ಪವನ್ನು ನೀಡಿದವರು ಡಾ. ಅಮೃತ ಸೋಮೇಶ್ವರರು. ಅನೇಕ ಯಕ್ಷಗಾನ ಪ್ರಸಂಗಗಳನ್ನು ರಚಿಸುವ ಮೂಲಕ ಯಕ್ಷಗಾನ ಕವಿಯಾಗಿ ತಮ್ಮನ್ನು ಗುರುತಿಸಿಕೊಂಡವರು. ಅವರು ತಮ್ಮ ಸಾಮಾಜಿಕ ಸಂದೇಶವನ್ನು ತಮ್ಮ ರಚನೆಯ ಮೂಲಕ ನೀಡುತ್ತಾರೆ ಎಂಬುವುದು ವಿಶೇಷ ಎಂದು ಮಂಗಳೂರಿನ ಸಂತ ಆಗ್ನೆಸ್ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಸಂಪೂರ್ಣಾನಂದ ಬಳ್ಕೂರ್ ಹೇಳಿದರು.
ಅವರು ಇಲ್ಲಿ ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಕನ್ನಡ ಸಂಘದ ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ. ದಯಾನಂದ ಪೈ ಮತ್ತು ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಆಯೋಜಿಸಿದ ಯಕ್ಷಗಾನ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಡಾ. ಅಮೃತ ಸೋಮೇಶ್ವರ ಹಾಗೂ ಯಕ್ಷಗಾನ ಎಂಬ ವಿಷಯದ ಕುರಿತು ಗುರುವಾರ ವಿಶೇಷ ಉಪನ್ಯಾಸ ನೀಡಿದರು.
ಅಮೃತ ಸೋಮೇಶ್ವರು ಪರಂಪರೆ ಹಾಗೂ ಆಧುನೀಕತೆಯನ್ನು ಒಂದಾಗಿಸಿಕೊಂಡು ಯಕ್ಷಗಾನ ಕಥೆಗಳನ್ನು ಹೆಣೆಯುತ್ತಾರೆ. ಪ್ರತಿ ಪ್ರಸಂಗದ ಆರಂಭದಲ್ಲಿ ಹಾಗೂ ಮಂಗಳ ಪದಗಳಲ್ಲಿ ದೇವರನ್ನು ಸ್ತುತಿಸುವ ಬದಲಾಗಿ ಬೆಳಕು ಹಾಗೂ ಜ್ಞಾನವನ್ನು ಸ್ತುತಿಸುವುದನ್ನು ಅಮೃತ ಸೋಮೇಶ್ವರ ರಚಿಸಿದ ಪ್ರಸಂಗಗಳಲ್ಲಿ ಕಾಣಬಹುದಾಗಿದೆ. ಅವರ ಪ್ರಸಂಗಗಳಲ್ಲಿ ಶ್ಲೋಕ ರೀತಿ ಪದಗಳನ್ನು ಹಾಗೆಯೇ ಜಾನಪದ ಹಾಗೂ ಹಳೆಗನ್ನಡ ಶೈಲಿಯ ಪದ್ಯ ರಚನೆಗಳೂ ಇವೆ. ಅವರು ಕಥಾವಸ್ತು ಆರಿಸುವ ವಿಧಾನವೂ ವೈಶಿಷ್ಟ್ಯವಾಗಿದೆ. ವೈವಿದ್ಯಮಯ ಕಥೆ ಹಾಗೂ ಪಾತ್ರಗಳಿಂದ ಕೂಡಿರುವ ಅಮೃತ ಸೋಮೇಶ್ವರರ ಯಕ್ಷಗಾನ ಪ್ರಸಂಗಗಳು ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವುದರೊಂದಿಗೆ, ಪರಿಸರ ರಕ್ಷಣೆ, ಕಾಯಿಲೆಗಳ ಬಗ್ಗೆ, ವಿಕಲಚೇತನರ ಸಾಧನೆ, ಮಧ್ಯಪಾನದ ದುರಂತ ಕುರಿತಂತೆ ಸಂದೇಶ ನೀಡುತ್ತದೆ. ಹಾಗೆಯೇ ಮಕ್ಕಳಿಗಾಗಿಯೂ ಅನೇಕ ಪ್ರಸಂಗಗಳನ್ನು ರಚಿಸಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ವಿವೇಕಾನಂದ ಕಾಲೇಜಿನಲ್ಲಿ ’ಯಕ್ಷರಂಜಿನಿ’ ಯಕ್ಷಗಾನ ತಂಡವನ್ನು ಆರಂಭಿಸುವ ಮೂಲಕ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗೆ ಒಂದು ವೇದಿಕೆ ನೀಡಿದವರು ಡಾ.ಅಮೃತ ಸೋಮೇಶ್ವರರು. ವಿವೇಕಾನಂದ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿ ಇಲ್ಲಿಯೇ ನಿವೃತ್ತರಾದವರು. ಅವರ ಕರ್ಮಭೂಮಿ ಪುತ್ತೂರು. ಅವರ ಸಾಹಿತ್ಯ ಕೊಡುಗೆ ಕೇವಲ ಕನ್ನಡಕ್ಕೆ ಮಾತ್ರ ಸೀಮಿತಗೊಳ್ಳದೆ ತುಳುವಿಗೂ ವಿಸ್ತರಿಸಿತ್ತು. ಯುವ ಜನತೆ ಸಿನೆಮಾ ಪ್ರಪಂಚದಲ್ಲಿ ಮುಳುಗಿ ಹೋಗುತ್ತಿರು ಸಂದರ್ಭದಲ್ಲಿ, ಈ ನಾಡಿನ ಸಮೃದ್ಧ ಲಲಿತ ಕಲೆಯಾಗಿ ಯಕ್ಷಗಾನ ರೂಪುಗೊಳ್ಳುವಲ್ಲಿ ಅಮೃತ ಸೋಮೇಶ್ವರರ ಕೊಡುಗೆಯೂ ಪ್ರಮುಖವಾಗಿದೆ ಎಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿ ಶಿವಶಂಕರ ಮಯ್ಯ ಪ್ರಾರ್ಥಿಸಿದರು. ಮಂಗಳ ಗಂಗೋತ್ರಿ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಧನಂಜಯ್ ಕುಂಬ್ಳೆ ಪ್ರಸ್ತಾವನೆಗೈದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಹೆಚ್.ಜಿ. ಶ್ರೀಧರ್ ಸ್ವಾಗತಿಸಿ, ಉಪನ್ಯಾಸಕ ಡಾ. ರೋಹಿಣಾಕ್ಷ ಶಿರ್ಲಾಲು ವಂದಿಸಿದರು. ಡಾ. ಮನಮೋಹನ್ ಕಾರ್ಯಕ್ರಮ ನಿರೂಪಿಸಿದರು.