ಕನ್ನಡಕ್ಕೆ ಸದಾಶಿವ ರಾಯರ ಕೊಡುಗೆ ಅನನ್ಯ: ಜನಾರ್ದನ ಭಟ್
ಪುತ್ತೂರು: ಪೇಜಾವರ ಸದಾಶಿವ ರಾಯರು ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡವರು. ಕನ್ನಡ, ಹಿಂದಿ, ಸಂಸೃತ ಮಾತ್ರವಲ್ಲದೇ ಇಟಲಿಯನ್ ಭಾಷೆಯಲ್ಲಿ ಬರೆಯುತ್ತಿದ್ದವರು. ಪಂಜೆಮಂಗೇಶರಾಯ, ಮುಳಿಯ ತಿಮ್ಮಪ್ಪ ಭಟ್ಟರಂತ ಮಹಾನ್ ಲೇಖಕರಿಂದ ಸ್ಫೂರ್ತಿ ಪಡೆದುಕೊಂಡು ಪ್ರೌಢ ಶಾಲಾ ಜೀವನದಲ್ಲಿಯೇ ಸಾಹಿತ್ಯವನ್ನು ಸಂಪಾದಿಸಿದವರು ಎಂದು ಕಾರ್ಕಳದ ಬೆಳ್ಮಣ್ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಜನಾರ್ದನ ಭಟ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಪೇಜಾವರ ಸದಾಶಿವ ರಾಯರ ಸಾಹಿತ್ಯ ಎಂಬ ವಿಷಯದ ಬಗೆಗೆ ಶುಕ್ರವಾರ ಮಾತನಾಡಿದರು.
ಕವಿ, ವಿಮರ್ಶಕ, ನಾಟಕಕಾರ, ಕತೆಗಾರರಾದ ಸದಾಶಿವರಾಯರು ಕನ್ನಡ ಸಾಹಿತ್ಯದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರು. ಕಾವ್ಯದಲ್ಲಿ ನಾನು ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಿದ ನವ್ಯ ಸಾಹಿತ್ಯದ ಮೊದಲನೆಯ ಕವಿಯಾಗಿದ್ದು ಇವರ ನಾಟ್ಯೋತ್ಸವವೇ ಮೊದಲ ನವ್ಯ ಕವಿತೆ ಎಂದು ಖ್ಯಾತ ವಿಮರ್ಶಕ ಕೀತೀನಾಥ ಕುರ್ತಕೋಟಿ ಅಭಿಪ್ರ್ರಾಯವನ್ನು ವ್ಯಕ್ತ ಪಡಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಎಚ್. ಮಾಧವ ಭಟ್ ಮಾತನಾಡಿ ವಿದ್ಯಾರ್ಥಿಗಳಿಗೆ ಪೇಜಾವರ ಸದಾಶಿವರಾಯರಂತಹ ಮಹಾನ್ ಸಾಹಿತಿಗಳ ಪರಿಚಯವಾಗಬೇಕು. ಸದಾಶಿವರಾಯರು ಕನ್ನಡ ಸಾಹಿತ್ಯವನ್ನು ಹೊಸ ದಿಕ್ಕಿನತ್ತ ತಿರುಗಿಸಿದವರು. ವ್ಯಾಕುಲತೆಗೆ ಒಳಗಾದ ಮನಸ್ಸು ಮತ್ತು ಆಧುನಿಕತೆಗೆ ಒಳಪಟ್ಟ ಸಮಾಜದ ನಡುವಣ ಸಂಘರ್ಷವನ್ನು ಇವರ ಬರಹಗಳಲ್ಲಿ ಕಾಣಬಹುದು ಎಂದರು. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ. ಎಚ್.ಜಿ. ಶ್ರೀಧರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕನ್ನಡ ವಿಭಾಗದ ಉಪನ್ಯಾಸಕ ರೋಹಿಣಾಕ್ಷ ಶಿರ್ಲಾಲು ಸ್ವಾಗತಿಸಿ, ಕನ್ನಡ ಸಂಘದ ಕಾರ್ಯದರ್ಶಿ ಚೈತ್ರ .ಕೆ ವಂದಿಸಿದರು. ವಿದ್ಯಾರ್ಥಿನಿ ಭುವನ ಬಾಬು ಕಾರ್ಯಕ್ರಮ ನಿರ್ವಹಿಸಿದರು.