ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಟಿವೃಕ್ಷ ಆಂದೋಲನಕ್ಕೆ ಭಾರೀ ಜನಮನ್ನಣೆ – ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ದಿನಪೂರ್ತಿ ನಡೆದ ಗಿಡನೆಡುವ ಕಾರ್ಯಕ್ರಮ
ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘ ಹಾಗೂ ಸಮರ್ಥ ಭಾರತ ಪುತ್ತೂರು ಘಟಕಗಳು ಸಂಯುಕ್ತಾರ್ಶರಯದಲ್ಲಿ ಶುಕ್ರವಾರ ಆಯೋಜನೆ ಮಾಡಿದ ಕೋಟಿವೃಕ್ಷ ಆಂದೋಲನ ಅಭೂತಪೂರ್ವ ಯಶಸ್ಸನ್ನು ದಾಖಲಿಸಿತು. ವಿವೇಕಾನಂದ ವಿದ್ಯಾವರ್ಧಕ ಸಂಘ ಮುನ್ನಡೆಸುವ ನಾನಾ ವಿದ್ಯಾಸಂಸ್ಥೆಗಳ ಶಿಕ್ಷಕರು, ಶಿಕ್ಷಕೇತರರು, ವಿದ್ಯಾರ್ಥಿಗಳು ಈ ಆಂದೋಲನದಲ್ಲಿ ಭಾಗಿಯಾಗಿ ಪುತ್ತೂರು ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ಗಿಡನೆಡುವ ಮೂಲಕ ಜಾಗೃತಿ ಮೂಡಿಸಿದರು. ಮುಂದಿನ ತಲೆಮಾರಿಗೆ ಪರಿಸರ ಉಳಿಸುವ ಹಾಗೂ ಬೆಳೆಸುವ ಕಲ್ಪನೆ ನೀಡುವಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಈ ವಿಶೇಷ ಆಂದೋಲನ ಸಹಕಾರಿಯಾಯಿತು.
ವಿವೇಕಾನಂದ ವಿದ್ಯಾವರ್ಧಕ ಸಂಘ ನಡೆಸುತ್ತಿರುವ ವಿವಿಧ ವಿದ್ಯಾಸಂಸ್ಥೆಗಳಿಗೆ ಗಿಡ ನಡುವ ಆಂದೋಲನದ ಜವಾಬ್ಧಾರಿಗಳನ್ನು ಹಂಚಲಾಗಿತ್ತು. ಬೆಟ್ಟಂಪಾಡಿಯ ಪ್ರಿಯದರ್ಶಿನಿ ವಿದ್ಯಾಸಂಸ್ಥೆ, ಕಡಬದ ಸರಸ್ವತಿ ವಿದ್ಯಾಲಯ ಪ್ರೌಢಶಾಲೆ ಮತ್ತು ಸರಸ್ವತಿ ಪದವಿಪೂರ್ವ ಕಾಲೇಜು, ನೆಹರು ನಗರದ ವಿವೇಕಾನಂದ ಪಾಲಿಟೆಕ್ನಿಕ್, ವಿವೇಕಾನಂದ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳು, ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ಷಣ್ಮುಖ ದೇವ ಪ್ರೌಢಶಾಲೆ, ವಿವೇಕಾನಂದ ಕಾಲೇಜ್ ಆಫ್ ಎಜುಕೇಶನ್, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಆಲಂಕಾರಿನ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ, ಈಶ್ವರಮಂಗಿಲದ ಶ್ರೀ ಗಜಾನನ ವಿದ್ಯಾಸಂಸ್ಥೆ, ವಿವೇಕಾನಂದ ಕಾನೂನು ಕಾಲೇಜು, ನರೇಂದ್ರ ಪದವಿಪೂರ್ವ ಕಾಲೇಜು, ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು, ನೆಲ್ಯಾಡಿಯ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಕಾಣಿಯೂರಿನ ಪ್ರಗತಿ ವಿದ್ಯಾಸಂಸ್ಥೆಗಉ ಗಿಡನೆಡುವ ಉಸ್ತುವಾರಿಯನ್ನು ವಹಿಸಿದ್ದವು.
ಬೆಳಗ್ಗೆ ೯ ಕ್ಕೆ ಆರಂಭಗೊಂಡ ಈ ಗಿಡನೆಡುವ ಕಾರ್ಯಕ್ರಮ ಸಂಜೆಯವರೆಗೂ ನಡೆಯಿತು. ತಾಲೂಕಿನ ೬೮ ಗ್ರಾಮಗಳಲ್ಲಿಯೂ ವೃಕ್ಷಾಂದೋಲನ ನಡೆದು ಜನಜಾಗೃತಿ ಮೂಡಿತು. ವಿವಿಧ ಸಂಸ್ಥೆಗಳು ತಮಗೆ ವಹಿಸಿಕೊಟ್ಟ ಗ್ರಾಮಗಳಲ್ಲಿ ಸ್ಥಳೀಯರೊಂದಿಗೆ, ಉದ್ಘಾಟನಾ ಸಮಾರಂಭವನ್ನೂ ಆಯೋಜಿಸಿ ಜನಬೆಂಬಲ ಗಳಿಸಿದವು. ವಿದ್ಯಾರ್ಥಿಗಳು ಅತ್ಯಂತ ಹುರುಪಿನಿಂದ ಭಾಗವಹಿಸಿ ಸಾರ್ಥಕತೆಯನ್ನು ಪಡೆದರು.
ವಿವೇಕಾನಂದ ಕಾಲೇಜು: ವಿವೇಕಾನಂದ ಕಾಲೇಜಿನ ವತಿಯಿಂದ ಕೊಡಿಪ್ಪಾಡಿ, ಚಿಕ್ಕಮೂಡ್ನೂರು, ಕೋಡಿಂಬಾಡಿ, ಬೆಳ್ಳಿಪ್ಪಾಡಿ, ೩೪ ನೆಕ್ಕಿಲಾಡಿ, ಸರ್ವೆ, ಕಬಕ, ಮುಂಡೂರು ಹಾಗೂ ಸಾಂತಿಗೋಡು ಗ್ರಾಮಗಳಲ್ಲಿ ಗಿಡನೆಡಲಾಯಿತು. ಕೋಡಿಂಬಾಡಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಸದಸ್ಯೆ ಶಯನಾ ಜಯಾನಂದ ಮಾತನಾಡಿ ಗಿಡ ನೆಡುವುದಷ್ಟೇ ಮುಖ್ಯವಲ್ಲ, ಅದನ್ನು ಬೆಳೆಸುವ ಜವಾಬ್ಧಾರಿಯೂ ನಮ್ಮ ಮೇಲಿದೆ. ಗಿಡಗಳನ್ನು ರಕ್ಷಿಸುವುದು ಇಂದಿನ ಅಗತ್ಯ. ನಮಗೀಗ ಉಂಟಾಗಿರುವ ನೀರಿನ ಸಮಸ್ಯೆಗೆ ಸಸ್ಯನಾಶವೇ ನೇರ ಕಾರಣ ಎಂಬುದನ್ನು ಅರಿಯಬೇಕು. ವಿದ್ಯಾಥಿಗಳು ಗಿಡನೆಡುವ ಕಾಯಕದಲ್ಲಿ ನಿರತರಾಗಿರುವುದು ಶ್ಲಾಘನೀಯ ಎಂದರು.
ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ನಾವು ತಲೆತಲಾಂತರಗಳಿಂದ ಪ್ರಾಕೃತಿಕ ಹಾಗೂ ಭೌಗೋಳಿಕ ಸಂಪತ್ತನ್ನು ಬಳಸಿಕೊಳ್ಳುತ್ತಾ ಬಂದಿದ್ದೇವೆ. ಆದರೆ ಪಡೆದದ್ದಕ್ಕೆ ಸರಿಸಮನಾಗಿ ಮರಳಿ ನೀಡುವ ಕಾರ್ಯ ಆಗುತ್ತಿಲ್ಲ. ಹಾಗಾಗಿಯೇ ಅಲ್ಲಲ್ಲಿ ಭೀಕರ ಕ್ಷಾಮ ಬರತೊಡಗಿದೆ. ಮುಂದಿನ ಪೀಳಿಗೆ ಚೆನ್ನಾಗಿರಬೇಕಾದರೆ ಗಿಡಸಂರಕ್ಷಣೆ, ನೆಡುವಿಕೆ ಆಗಬೇಕು. ಇದು ಕೇವಲ ಸಾಂಕೇತಿಕವಾಗಿ ಒಂದು ದಿನಕ್ಕೆ ಮಾತ್ರ ಮೀಸಲಾಗದೆ ಪ್ರತಿದಿನಕ್ಕೂ ಪ್ರೇರಣೆಯಾಗಬೇಕು ಎಂದು ಕರೆನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸಂಧ್ಯಾ ರಾಮಚಂದ್ರ ಗೌಡ, ಕೋಡಿಂಬಾಡಿ ಶಾಲಾ ಮುಖ್ಯೋಪಾಧ್ಯಾಯಿನಿ ಕಮಲಾ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕೃಷ್ಣ ನಾಯ್ಕ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಜಯಾನಂದ, ಸಾಮಾಜಿಕ ಕಾರ್ಯಕರ್ತರುಗಳಾದ ಜಯಪ್ರಕಾಶ್ ದೇವಸ್ಯ, ಲಿಂಗಪ್ಪ ಕಾಪಿಕಾಡು, ಭವಾನಿ ಸುಂದರ್, ಪ್ರವೀಣ್, ಪ್ರದೀಪ್ ಶೆಟ್ಟಿ, ರಾಮಣ್ಣ ಗುಂಡೋಲೆ, ಲೀಲಾವತಿ ಲಕ್ಷ್ಮಣ ಗೌಡ, ದೇವದಾಸ್ ಗೌಡ, ಮೋಹನ್ ಪಕ್ಕಳ, ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕರುಗಳಾದ ಯತೀಶ್ ಕುಮಾರ್, ಗಣೇಶ್ ಪ್ರಸಾದ್, ಡಾ.ಶ್ರೀಧರ ಎಚ್.ಜಿ, ರಾಕೇಶ್ ಕುಮಾರ್ ಕಮ್ಮಜೆ, ಸರಸ್ವತಿ ಸಿ.ಕೆ, ಮಲ್ಲಿಕಾ, ಈಶ್ವರ ಪ್ರಸಾದ್, ದಿವ್ಯಶ್ರೀ, ದೀಪಿಕಾ ಮೊದಲಾದವರು ಹಾಜರಿದ್ದರು. ವಿವೇಕಾನಂದ ಕಾಲೇಜಿನ ಪ್ರಾಧ್ಯಾಪಕ ಡಾ.ರೋಹಿಣಾಕ್ಷ ಶಿರ್ಲಾಲು ಕಾರ್ಯಕ್ರಮ ನಿರ್ವಹಿಸಿದರು. ಕಾಳೇಜಿನ ಎನ್ ಎಸ್ ಎಸ್ ಘಟಕ ಇಲ್ಲಿನ ಉಸ್ತುವಾರಿಯನ್ನು ನಿರ್ವಹಿಸಿತು.
ನೆಕ್ಕಿಲಾಡಿಯಲ್ಲಿ ಕಾರ್ಯಕ್ರಮ ಉದ್ಘಾಟಿಸಿದ ದ.ಕ.ಜಿ.ಪ. ಶಾಲೆಯ ಮುಖ್ಯೋಪಾಧ್ಯಾಯಿನಿ ರಂಜಿನಿ ಎಸ್ ರಾವ್ ಮಾತನಾಡಿ ಪರಿಸರ ನಮ್ಮ ಬದುಕಿಗೆ ಅತ್ಯಂತ ಅವಶ್ಯಕ. ಎಳೆಯ ವಯಸ್ಸಿನಿಂದಲೇ ಗಿಡ ಮರಗಳ ಬಗೆಗೆ ಪ್ರೀತಿ ಬೆಳೆಯಬೇಕು ಎಂದು ನುಡಿದರು. ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಧರ್ಣಪ್ಪ ಗೌಡ, ವಿವೇಕಾನಂದ ಕಾಲೇಜಿನ ಎನ್.ಎಸ್.ಎಸ್ ಸಂಯೋಜಕಿ ಅನಿತಾ ಕಾಮತ್, ಉಪನ್ಯಾಸಕರಾದ ಸುಹಾಸ್ ಕೃಷ್ಣ, ದೀಕ್ಷಿತ್, ಶಮಿತಾ, ಅಶ್ವಿನಿ ಮೊದಲಾದವರು ಹಾಜರಿದ್ದರು.
ವಿವೇಕಾನಂದ ಪದವಿಪೂರ್ವ ಹಾಗೂ ಪಾಲಿಟೆಕ್ನಿಕ್ ಕಾಲೇಜು: ಈ ಕಾಲೇಜುಗಳ ವತಿಯಿಂದ ಪಡ್ನೂರು, ಸವಣೂರು, ಪುಣ್ಚಪ್ಪಾಡಿ, ಪಾಲ್ತಾಡಿ, ಬಲ್ನಾಡು, ಬನ್ನೂರು, ಉಪ್ಪಿನಂಗಡಿ, ಬಜತ್ತೂರು ಹಾಗೂ ಹಿರೇ ಬಂಡಾಡಿಗಳಲ್ಲಿ ಗಿಡ ನೆಡಲಾಯಿತು. ಈ ಸಂದರ್ಭದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜೀವನ್ ದಾಸ್, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಗೋಪಿನಾಥ್ ಶೆಟ್ಟಿ ಮೊದಲಾದವರು ಹಾಜರಿದ್ದರು.
ವಿವೇಕಾನಂದ ಇಂಜಿನಿಯರಿಂಗ್, ಕಡಬ ಸರಸ್ವತಿ ವಿದ್ಯಾಲಯ, ಪ್ರಿಯದರ್ಶಿನಿ ವಿದ್ಯಾ ಸಂಸ್ಥೆ : ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಕುಳದಲ್ಲಿ ಹಾಗೂ ಕಡಬದ ಸರಸ್ವತಿ ವಿದ್ಯಾಸಂಸ್ಥೆಗಳ ವತಿಯಿದ ತಾಲೂಕಿನ ನಾನಾ ಭಾಗಗಳಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಬಲ್ಯ, ಕುಟ್ರುಪಾಡಿ, ನೂಜಿಬಾಳ್ತಿಲ, ರೆಂಜಿಲಾಡಿ, ಕಡಬ, ಕೋಡಿಂಬಾಳ, ಬಿಳಿನೆಲೆ, ಕೊಂಬಾರು, ಸಿರಿಬಾಗಿಲು, ಐತ್ತೂರು, ಬಂಟ್ರ, ಕೊಣಾಜೆ, ೧೦೨ ನೆಕ್ಕಿಲಾಡಿಗಳಲ್ಲಿ ಗಿಡ ನೆಡುವುದರ ಮೂಲಕ ಜನಜಾಗೃತಿ ಮೂಡಿಸಲಾಯಿತು. ಬೆಟ್ಟಂಪಾಡಿಯ ಪ್ರಿಯದರ್ಶಿನಿ ಸಂಸ್ಥೆಯ ವತಿಯಿಂದ ಪಡುವನ್ನೂರು ಹಾಗೂ ನಿಡ್ಪಳ್ಳಿಯಲ್ಲಿ ಕಾರ್ಯನಿರ್ವಹಿಸಲಾಯಿತು.
ವಿವೇಕಾನಂದ ಆಂಗ್ಲ ಮಾಧ್ಯಮ, ಕನ್ನಡ ಮಾಧ್ಯಮ ಹಾಗೂ ಬಿಎಡ್ ಕಾಲೇಜು: ಈ ಸಂಸ್ಥೆಗಳ ವತಿಯಿಂದ ಬಡಗನ್ನೂರು, ಕೆಮ್ಮಿಂಜೆ, ಬೆಟ್ಟಂಪಾಡಿ,ಕೆಮ್ಮಿಂಜೆ, ನರಿಮೊಗರು, ಇರ್ದೆ, ಆರ್ಲಪದವು, ಪಾಣಾಜೆ, ವಿಟ್ಲ ಮೂಡ್ರೂರು, ಅರಿಯಡ್ಕ, ಒಳಮೊಗ್ರು, ಕೆದಂಬಾಡಿ, ಕುರಿಯ, ಕಲ್ಲಾರ್ಪೆ ಗ್ರಾಮಗಳಲ್ಲಿ ವೃಕ್ಷಾಂದೋಲನ ನಡೆಸಲಾಯಿತು.
ಷಣ್ಮುಖ ದೇವ ಪ್ರೌಢಶಾಲೆ, ಭಾರತಿ ಹಿರಿಯ ಪ್ರಾಥಮಿಕ ಶಾಲೆ, ಗಜಾನನ ವಿದ್ಯಾಸಂಸ್ಥೆ: ಈ ಸಂಸ್ಥೆಗಳ ವತಿಯಿಂದ ಕೊಳ್ತಿಗೆ, ಕೆಯ್ಯೂರು, ಪೆರಾಬೆ, ಕುಂತೂರು, ಕೊಲ್ಯ, ಹಳೆನರೆಂಕಿ, ನೆಟ್ಟಣಿಗೆ ಮೂಡ್ನೂರು ಹಾಗೂ ಮಾಡ್ನೂರುಗಳಲ್ಲಿ ಸಸ್ಯಸಂವರ್ಧನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಯಶಸ್ವಿಗೊಳಿಸಲಾಯಿತು.
ವಿವೇಕಾನಂದ ಕಾನೂನು ಕಾಲೇಜು, ನರೇಂದ್ರ ಪದವಿಪೂರ್ವ ಕಾಲೇಜು, ಶ್ರೀರಾಮ ಪ್ರಾಥಮಿಕ ಶಾಲೆ: ಚಾರ್ವಾಕ, ಪುತ್ತೂರು ಕಸಬಾ, ಗೋಳಿತೊಟ್ಟು, ಕೋಣಲು, ಆಲಂತಾಯ, ನೆಲ್ಯಾಡಿ, ಕೌಕ್ರಾಡಿ, ಇಚಿಲಂಪಾಡಿ ಹಾಗೂ ಶಿರಾಡಿಯಲ್ಲಿ ಗಿಡಗಳನ್ನು ನೆಟ್ಟು ಪರಿಸರ ಪ್ರೀತಿಯನ್ನು ಪಸರಿಸಲಾಯಿತು.
ಹೀಗೆ ತಾಲೂಕಿನ ಎಲ್ಲಾ ಗ್ರಾಮಗಳಲ್ಲೂ ನಡೆದ ಈ ಕೋಟಿವೃಕ್ಷ ಆಂದೋಲನಕ್ಕೆ ವಿವಿಧ ಗ್ರಾಮಗಳ ಮಂದಿ ಬೆಂಬಲವನ್ನು ನೀಡಿದರು. ಸ್ಥಳೀಯ ಗ್ರಾಮಪಂಚಾಯತ್ ಧುರೀಣರು, ಸರ್ಕಾರಿ ಶಾಲಾ ಮುಖ್ಯಸ್ಥರುಗಳು, ಶಿಕ್ಷಕರು, ಸಮಾಜಸೇವಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗನ್ನಿತ್ತರು.
ನಮ್ಮ ಮುಂದಿನ ದಿನಗಳ ಬದುಕು ಕ್ಷೇಮಕರವಾಗಿರಬೇಕೆಂದರೆ ಗಿಡಗಳಿಗೆ ಬದುಕು ನೀಡುವ ಕಾರ್ಯ ಆಗಬೇಕು. ವಿದ್ಯಾರ್ಥಿಗಳಿಂದಲೇ ಅಂತಹ ಜಾಗೃತಿ ಒಡಮೂಡುವುದು ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘ ಕೋಟಿ ವೃಕ್ಷ ಆಂದೋಲನವನ್ನು ಕೈಗೆತ್ತಿಕೊಂಡಿದೆ. ಇಂತಹ ಸಮಾಜಮುಖಿ ಕಾರ್ಯಗಳು ಶಿಕ್ಷಣ ಸಂಸ್ಥೆಗಳಿಂದ ಆಗುತ್ತಲೇ ಇರಬೇಕು.
– ಡಾ.ಕೆ.ಎಂ.ಕೃಷ್ಣ ಭಟ್, ಕಾರ್ಯದರ್ಶಿಗಳು
ವಿವೇಕಾನಂದ ವಿದ್ಯಾವರ್ಧಕ ಸಂಘ
ಸಸ್ಯಗಳು ಚೆನ್ನಾಗಿ ಬೆಳೆದು ಮರವಾಗಿ ಬೆಳೆದರೆ ಮಾತ್ರ ಮನುಷ್ಯ ಒಳ್ಳೆಯ ರೀತಿಯಲ್ಲಿ ಜೀವನ ಸಾಗಿಸುವುದಕ್ಕೆ ಸಾಧ್ಯ. ನಾವು ಎಳೆಯ ಮಕ್ಕಳಿಂದಲೇ ಜಾಗೃತಿ ಕಾರ್ಯಕ್ರಮವನ್ನು ಜಾರಿಗೊಳಿಸಬೇಕಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘ ಕೈಗೊಂಡ ಈ ಕೋಟಿವೃಕ್ಷ ಆಂದೋಲನಕ್ಕೆ ಸಮಾಜದ ಬಂಧುಗಳು ಕೈಜೋಡಿಸಿರುವುದು ಅಪಾರ ಆನಂದ ತಂದಿದೆ.
– ಶಿವಪ್ರಸಾದ್ ಇ, ನಿರ್ದೇಶಕರು
ವಿವೇಕಾನಂದ ವಿದ್ಯಾವರ್ಧಕ ಸಂಘ
ಶಾಲಾ ಕಾಲೇಜಿನ ಮಕ್ಕಳು ಈ ರೀತಿ ಪರಿಸರ ಪ್ರೀತಿ ತೋರಿಸುತ್ತಿರುವುದು ಸ್ವಾಗತಾರ್ಹ. ಇದು ರಾಜ್ಯ ಮಾತ್ರವಲ್ಲದೆ ಇಡೀ ರಾಷ್ಟ್ರಕ್ಕೇ ಮಾದರಿ. ಶಿಕ್ಷಣ ಸಂಸ್ಥೆಗಳು ಕೇವಲ ಪಾಠಕ್ಕೆ ಮಾತ್ರ ಸೀಮಿತ ಆಗಬಾರದು. ಇಂತಹ ಸಮಾಜಮುಖಿ ಕಾರ್ಯಗಳು ನಡೆದಾಗ ಮಾತ್ರ ಶಿಕ್ಷಣಕ್ಕೂ ಒಂದು ಅರ್ಥ ಬರುತ್ತದೆ.
– ನಾರಾಯಣ ಗೌಡ, ನಾಗರಿಕರು, ಕೋಡಿಂಬಾಳ