VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದದಲ್ಲಿ ಕೃಷಿ-ಖುಷಿ ಸರಣಿಯ ಎರಡನೇ ಕಾರ್ಯಕ್ರಮ – ಯೋಜನಾಬದ್ಧ ಕೃಷಿಯಿಂದ ಅಲ್ಪ ಜಾಗದಲ್ಲೂ ಅಧಿಕ ವರಮಾನ: ಜನಾರ್ದನ ಭಟ್

ಪುತ್ತೂರು: ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ವೈವಿಧ್ಯಮಯ ಕೃಷಿಯಲ್ಲಿ ತೊಡಗಿದರೆ ಕೃಷಿ ಬದುಕು ಖಂಡಿತವಾಗಿಯೂ ಖುಷಿ ಕೊಡಬಲ್ಲುದು. ಯಾವುದೇ ಬೆಳೆಯನ್ನು ಬೆಳೆಸುವ ಮೊದಲು ಯಾವ ರೀತಿಯ ಗೊಬ್ಬರ ಆ ಬೆಳೆಗೆ ನೀಡಬಹುದು ಮತ್ತು ನೀಡಬಾರದು ಎಂಬುದನ್ನು ಕೃಷಿಕ ಚೆನ್ನಾಗಿ ಅರಿತಿರಬೇಕು ಎಂದು ಅನುಭವಿ ಕೃಷಿಕ ಸೇಡಿಯಾಪು ಜನಾರ್ದನ ಭಟ್ ಹೇಳಿದರು.

          ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಸೋಮವಾರ ಆಯೋಜಿಸಲಾದ ಕೃಷಿ-ಖುಷಿ ಸರಣಿ ಕಾರ್ಯಕ್ರಮದ ಎರಡನೇ ಕಂತಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

Sediyaapu J Bhat

          ಕೆಲವು ವರ್ಷಗಳ ಹಿಂದೆ ವೆನಿಲ್ಲಾ ಕೃಷಿಗೆ ಸಾಕಷ್ಟು ಬೇಡಿಕೆ ಇತ್ತು. ಆ ಸಂದರ್ಭದಲ್ಲಿ ಅನೇಕರು ಅದರಿಂದ ಲಾಭ ಗಳಿಸಿದ್ದಾರೆ. ತದನಂತರ ಅದಕ್ಕೆ ಬೇಡಿಕೆ ಇಲ್ಲದಾದದ್ದೂ ಉಂಟು. ಪ್ರಸ್ತುತ ಮತ್ತೆ ತುಸು ಬೇಡಿಕೆ ಬರಲಾರಂಭಿಸಿದೆ. ಈಗ ರಂಬುಟಾನ್‌ನಂತಹ ಹಣ್ಣಿನ ಬೆಳೆಗೆ ಸಾಕಷ್ಟು ಬೆಲೆ ಮಾರುಕಟ್ಟೆಯಲ್ಲಿ ದೊರಕುತ್ತಿದೆ. ಕೃಷಿಕರು ಈ ಬಗೆಗೆ ಅಧ್ಯಯನ ನಡೆಸಿ ಕೃಷಿಯಲ್ಲಿ ತೊಡಗಬೇಕು. ಕೇವಲ ಪಾರಂಪರಿಕ ಕೃಷಿಯನ್ನಷ್ಟೇ ಅವಲಂಬಿಸಬಾರದು. ಯೋಜನಾಬದ್ಧ ಕೃಷಿ ಕಡಿಮೆ ಜಾಗದಲ್ಲೂ ಅಧಿಕ ಲಾಭವನ್ನು ತರಬಲ್ಲುದು ಎಂದು ನುಡಿದರು.

          ಕೆಲವೊಂದು ಕೃಷಿಗಳು ಸಾಕಷ್ಟು ಆದಾಯ ತರಬಲ್ಲವು. ಉದಾಹರಣೆಗೆ ಥಾಲೆಂಡ್   ಅಲಸಂಡೆ. ಈ ಕೃಷಿಯಲ್ಲಿ ಸಾಕಷ್ಟು ಮುತುವರ್ಜಿ ವಹಿಸಿ ತೊಡಗಿದರೆ ಕೇವಲ ಒಂದು ಎಕರೆಯಲ್ಲೇ ಉತ್ಪಾದನಾ ವೆಚ್ಚ ವನ್ನು ಹೊರತುಪಡಿಸಿ ಲಕ್ಷಗಳ ಲೆಕ್ಕದಲ್ಲಿ ಸಂಪಾದಿಸಬಹುದು. ಆದರೆ ಮೂಲ ಬಂಡವಾಳ ಹೂಡಲು ತಯಾರಿರಬೇಕು. ಮಾತ್ರವಲ್ಲದೆ ನಿಗದಿತ ರೀತಿಯಲ್ಲೇ ಕೃಷಿ ಮಾಡಬೇಕು. ಅಂತೆಯೇ ಸೂಜಿಮೆಣಸಿನಂತಹ ಕೃಷಿಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬೆಳೆಸಿದಲ್ಲಿ ವರಮಾನ ಗಳಿಕೆ ಸಾಧ್ಯವಾದೀತು. ಅಲ್ಪ ಕೃಷಿ ಭೂಮಿ ಇರುವವರು ಒಂದಾದ ಮೇಲೊಂದರಂತೆ ವಿವಿಧ ತರಕಾರಿಗಳನ್ನು ಬೆಳೆಸಿ ಹಣ ಗಳಿಸಲು ಸಾಧ್ಯ. ಹಾಗೆಂದು ಒಂದೇ ತೆರನಾದ ತರಕಾರಿ ಬೆಳೆಸಿದರೆ ಕ್ರಮೇಣ ಇಳುವರಿ ಕಡಿಮೆಯಾಗುತ್ತದೆ ಎಂದು ನುಡಿದರು.

          ಕೆಲವೊಂದು ಬೆಳೆಗಳಿಗೆ ಸಸ್ಯಜನ್ಯ ಗೊಬ್ಬರವೇ ಬೇಕಾಗುತ್ತದೆ. ಉದಾಹರಣೆಗೆ ಕಾಳುಮೆಣಸು. ಅಂತಹ ಬೆಳೆಗಳಿಗೆ ಪ್ರಾಣಿಜನ್ಯ ಗೊಬ್ಬರ ಉಣಿಸುವುದರಿಂದ ಗಿಡ, ಬಳ್ಳಿಗಳು ಸೊರಗುತ್ತವೆ. ಆದರೆ ಅನೇಕರಲ್ಲಿ ಈ ಮಾಹಿತಿ ಇರುವುದಿಲ್ಲ. ಹಾಗಾಗಿ ಆಸಕ್ತಿಯಿಂದ ಕೃಷಿ ಮಾಡಿದರೂ ಬೆಳೆ ಬರದೆ ಬೇಸರವಾಗುತ್ತದೆ ಎಂದರಲ್ಲದೆ ನಮ್ಮ ನಮ್ಮ ಭೂಮಿಯಲ್ಲಿ ಔಷಧೀಯ ಗಿಡಗಳನ್ನೂ ನೆಡುವುದು ಉತ್ತಮ ಎಂದು ಸಲಹೆ ನೀಡಿದರು. ನಂತರ ಸಂವಾದ ಹಾಗೂ ಕೆಲವು ಬೆಳೆಗಳ ಪ್ರಾತ್ಯಕ್ಷಿಕೆ ನಡೆಯಿತು. ವೇದಿಕೆಯಲ್ಲಿ ಕೃಷಿ-ಖುಷಿ ಕಾರ್ಯಕ್ರಮದ ಕಾರ್ಯದರ್ಶಿ ಭುವನೇಶ್ವರಿ ಉಪಸ್ಥಿತರಿದ್ದರು.

          ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿದರು. ಉಪನ್ಯಾಸಕಿ ಭವ್ಯಾ ಪಿ.ಆರ್ ವಂದಿಸಿದರು. ವಿದ್ಯಾರ್ಥಿನಿ ರಕ್ಷಿತಾ ಕುಮಾರಿ ಎಂ.ಎನ್ ಕಾರ್ಯಕ್ರಮ ನಿರ್ವಹಿಸಿದರು.