ಲಲಿತಕಲೆ ಭಾವನೆಗಳ ಸಂಗಮ: ಧನರಾಜ್ ಎಸ್ ಆರ್
ಪುತ್ತೂರು: ರಂಗ ಭೂಮಿಯಲ್ಲಿ ನಾವು ಒಂದು ದೊಡ್ಡ ಆಕಾಂಕ್ಷೆಯನ್ನು ಇಟ್ಟ್ಟುಕೊಂಡು ಕೆಲಸಮಾಡಬೇಕು. ಆಗ ಯಶಸ್ಸುಗಳಿಸಲು ಸಾಧ್ಯ. ರಂಗಭೂಮಿಯಲ್ಲಿ ಪ್ರಯೋಗಾತ್ಮಕ ನಾಟಕ ಮಾಡಲು ಅವಕಾಶಗಳಿವೆ. ನಾಟಕ ಅಥವಾ ಯಾವುದೇ ಕಲೆಯಿಂದ ನಮ್ಮ ಭಾವನೆಗಳನ್ನು ಪ್ರಕಟಗೊಳಿಸಬಹುದು ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ರಂಗಕರ್ಮಿ ಧನರಾಜ್ ಎಸ್ ಆರ್ ತಿಳಿಸಿದರು.
ಅವರು ಮಂಗಳವಾರ ಕಾಲೇಜಿನ ಲಲಿತಕಲಾ ಸಂಘದ ೨೦೧೪-೧೫ನೇ ಸಾಲಿನ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತಾಡಿದರು.
ಒಬ್ಬ ನಟನ ನಟನೆ ಹೇಗಿರಬೇಕೆಂದರೆ ಲೋಟಕ್ಕೆ ನೀರು ತುಂಬಿಸಿದಂತೆ ಇರಬೇಕು. ಆ ನೀರು ಲೋಟದಿಂದ ತುಂಬಿ ತುಳುಕಿದಾಗ ನಟನೆಯ ಪರಿಪಕ್ವತೆ ಹೊರಬರುತ್ತದೆ. ಒಬ್ಬ ಕಲಾಕಾರನಿಗೆ ನಟನೆ ಅನ್ನುವಂತದ್ದನ್ನು ಹೇಳಿ ಕೊಡುವಂತದ್ದಲ್ಲ, ಅದು ಆತನ ಒಳಗಿಂದ ಬರಬೇಕು. ನಟನೆ ಅನ್ನುವಂತದ್ದು ಸಾಗರದಂತೆ. ಅದರ ಆಳ ಹಾಗೂ ವಿಸ್ತೀರ್ಣವನ್ನು ಅಳೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ಎಚ್ ಜಿ ಮಾಥನಾಡಿ ಒಂದು ಗುಲಾಬಿಯನ್ನು ಕಲಾವಿದನ ಕೈಗೆ ನೀಡಿದರೆ ಅದನ್ನು ಆತ ವಿವಿಧ ರೀತಿಯಲ್ಲಿ ಕಲ್ಪನೆ ಮಾಡುತ್ತಾನೆ. ಅಂತೆಯೇ ಯಾವುದೇ ವಿಚಾರವೊಂದು ಕಲಾವಿದನಿಗೆ ವಿಭಿನ್ನವಾಗಿ ಕಾಣಲು ಸಾಧ್ಯ. ನಮ್ಮ ಸ್ಮೃತಿಯನ್ನು ಹಿಡಿದಿರುವುದಕ್ಕೆ ಕಲೆ ಸಹಕಾರವಾಗುತ್ತದೆ. ಲಲಿತಕಲೆಗಳು ನಮ್ಮ ಬದುಕಿನ ಅತ್ಯಂತ ವಿಶಿಷ್ಟತೆಯನ್ನು ಸೂಚಿಸುತ್ತದೆ. ಕಲೆಯಿಂದ ಏನನ್ನು ಬೇಕಾದರೂ ಸಾಧಿಸಲು ಸಾಧ್ಯ ಎಂದು ತಿಳಿಸಿದರು.
ವಿದ್ಯಾರ್ಥಿನಿಯರಾದ ಮಾನಸ ಎನ್ ಮತ್ತು ಬಳಗ ಪ್ರಾರ್ಥಿಸಿದರು. ಲಲಿತ ಕಲಾ ಸಂಘದ ಕಾರ್ಯದರ್ಶಿ ಸ್ಮಿತಾ ಮಾಧವಿ ಸ್ವಾಗತಿಸಿದರು. ಉಪನ್ಯಾಸಕ ಹಾಗೂ ಸಂಯೋಜಕ ಎಚ್ ಬಾಲಕೃಷ್ಣ ಪ್ರಸ್ತಾವನೆಗೈದರು. ಉಪಕಾರ್ಯದರ್ಶಿ ಪ್ರಜ್ವಲ್ ಕಾವೇರಪ್ಪ ವಂದಿಸಿದರು. ವಿದ್ಯಾಥಿಗಳಾದ ಶ್ರೀವತ್ಸಾ ಮತ್ತು ಎಸ್ ನಿಸರ್ಗ ಕಾರ್ಯಕ್ರಮ ನಿರೂಪಿಸಿದರು.