ಪ್ರತಿಭೆಯನ್ನು ಗುರುತಿಸಿ ಒರೆಗೆ ಹಚ್ಚಬೇಕು : ಶ್ರೀನಿವಾಸ ಪೈ
ಪುತ್ತೂರು: ಜ್ಞಾನ ಸಂಪಾದನೆ ಮತ್ತು ಕೌಶಲ್ಯ ವೃದ್ಧಿ ವಿದ್ಯಾಲಯಗಳಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳ ಉದ್ದೇಶ. ನಮ್ಮಲ್ಲಿರುವ ಸುಪ್ತ ಪ್ರತಿಭೆಯನ್ನು ನಾವೇ ಗುರುತಿಸಬೇಕು. ನಂತರ ಒರೆಗೆ ಹಚ್ಚಬೇಕು. ಈ ತೆರೆನಾದ ಪ್ರಕ್ರಿಯಿಂದ ಮಾತ್ರ ಯಶಸ್ಸು ಗಳಿಸಲು ಸುಲಭ ಸಾಧ್ಯವಾಗುವುದು ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ. ಶ್ರೀನಿವಾಸ ಪೈ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಜಾಗೃತಿ ಭಿತ್ತಿಪತ್ರಿಕೆ ಮತ್ತು ಲಿಟರರಿ ಕ್ಲಬ್ ವತಿಯಿಂದ ಆಯೋಜಿಸಲಾದ ’ಲಿಟ್ ಆರ್ಟ್ ಬುಲೆಟಿನ್’ ಎಂಬ ವಿಭಾಗದ ಮುಖವಾಣಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ನಿರಂತರವಾದ ಓದುವುದರಿಂದ ಬರೆಯಲು ಪ್ರೇರಣೆ ದೊರೆಯುತ್ತದೆ. ಬಿಡುವಿನ ಸಮಯದಲ್ಲಿ ಬರೆಯಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳು ಬೇರೆ ಬೇರೆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.
ಅತಿಥಿಯಾಗಿ ಆಗಮಿಸಿದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿಘ್ನೇಶ್ವರ ವರ್ಮುಡಿ ಮಾತನಾಡಿ ಸಂಶೋಧನೆ ಎಂಬುದು ಅಡಗಿದ ವಿಷಯಗಳ ಅನ್ವೇಷಣೆ. ಲಿಟ್ ಆರ್ಟ್ ಬುಲೆಟಿನ್ ಎಂಬುದು ಒಂದು ಸಣ್ಣ ಮಟ್ಟಿನ ಅನ್ವೇಷಣೆಯಾಗಿದೆ. ಇದರಲ್ಲಿ ಕೆಲವೊಂದು ಅವಿತಿರುವ ವಿಷಯಗಳು ಇವೆ. ನಾವು ಬರೆಯುವಾಗ ಸರಳವಾಗಿ ಬರೆಯಬೇಕು. ನಾವು ನಮಗೋಸ್ಕರ ಮಾತ್ರವಲ್ಲದೇ ಓದುಗರಿಗೋಸ್ಕರ ಬರೆಯಬೇಕು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಶಂಕರನಾರಾಯಣ ಭಟ್ ಮಾತನಾಡಿ , ನಮ್ಮ ಭಾವನೆ, ವಿಷಯವನ್ನು ತಿಳಿಸಲು ಭಾಷೆ ಅತ್ಯಗತ್ಯ, ನುಡಿಚಿತ್ರವೆಂಬುದು ಸಣ್ಣ ಮಟ್ಟಿನ ಸಂಶೋಧನೆ, ಇದಕ್ಕೆ ಪೂರ್ವತಯಾರಿ ಅತ್ಯಗತ್ಯ ಇದು ವಿದ್ಯಾರ್ಥಿಗಳಿಗೆ ತುಂಬಾ ಸಹಕಾರಿಯಾಗಿದೆ. ಉತ್ತಮ ಬರಹಗಾರನಾಗಲು ಅತಿ ಹೆಚ್ಚು ಓದಬೇಕು ಎಂದು ಅಭಿಪ್ರಾಯ ಹೇಳಿದರು.
ಲಿಟರರಿ ಕ್ಲಬ್‌ನ ಸಂಚಾಲಕಿ ಸರಸ್ವತಿ ಸಿ.ಕೆ. ಉಪಸ್ಥಿತರಿದ್ದರು. ಇಂಗ್ಲಿಷ್ ವಿಭಾಗ ಮುಖ್ಯಸ್ಥ ಬಾಲಕೃಷ್ಣ. ಎಚ್. ಸ್ವಾಗತಿಸಿದರು, ಜಾಗೃತಿ ಭಿತ್ತಿ ಪತ್ರಿಕೆಯ ಸಂಚಾಲಕಿ ಮೋತಿ ಬಾ ವಂದಿಸಿದರು, ಇಂಗ್ಲಿಷ್ ಉಪನ್ಯಾಸಕಿ ಅಂಬಿಕಾ ಕಾರ್ಯಕ್ರಮ ನಿರ್ವಹಿಸಿದರು, ವಿದ್ಯಾರ್ಥಿನಿಯರಾದ ಸುಕನ್ಯಾ ಮತ್ತು ಬಳಗ ಪ್ರಾರ್ಥಿಸಿದರು.