ಭಾವನೆಗಳ ಅಭಿವ್ಯಕ್ತಿಗೆ ಮಾಧ್ಯಮದ ಅವಶ್ಯಕತೆಯಿದೆ : ಚಾರ್ಲ್ಸ್ ಫ್ಯುಟಾಡೋ
ಪುತ್ತೂರು : ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಸೂಕ್ತ ಮಾಧ್ಯಮದ ಅವಶ್ಯಕತೆಯಿದೆ. ಅದಕ್ಕಾಗಿ ಒಂದು ಪ್ರಕಟಣೆಯನ್ನು ಹೊರತರುವ ಆಲೋಚನೆ ಅತ್ಯುತ್ತಮವಾದದ್ದು. ಲಿಟ್ ಆರ್ಟ್ ಬುಲೆಟಿನ್ ಇದಕ್ಕೆ ಸೂಕ್ತ ಉದಾಹರಣೆ ಎಂದು ವಿದ್ಯಾರ್ಥಿಗಳು ಇದನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದು ಸೈಂಟ್ ಅಲೋಷಿಯಸ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಚಾರ್ಲ್ಸ್ ಫ್ಯುಟಾಡೋ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಲಿಟರರಿ ಕ್ಲಬ್ ಹಾಗೂ ಇಂಗ್ಲೀಷ್ ವಿಭಾಗದ ವತಿಯಿಂದ ಆಯೋಜಿಸಿದ ಲಿಟ್ ಆರ್ಟ್ ಎಂಬ ವಿಭಾಗದ ಮುಖವಾಣಿಯ ಬಿಡುಗಡೆ ಹಾಗೂ ಕಾಲೇಜಿನಲ್ಲಿ ಆಯೋಜಿಸಲಾದ ಜರ್ಮನ್ ಬಾಷೆ ಕಲಿಕೆ ಕೋರ್ಸ್‌ನ ಪ್ರಶಸ್ತಿಪತ್ರ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಜರ್ಮನಿ ಭಾಷೆಯು ಅತ್ಯಂತ ಆಕರ್ಷಕವಾದ ಭಾಷೆ. ಇತರ ಭಾಷೆಗಳೊಂದಿಗೆ ಇದನ್ನೂ ಕಲಿಯುವುದು ಅವಶ್ಯಕ. ಮಾತೃಭಾಷೆಯೊಂದಿಗೆ ಇತರ ಭಾಷಾ ಜ್ಞಾನದ ಅಗತ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಉತ್ತಮ ಸ್ಥಾನಗಳಿಸಲು ಅನೇಕ ಭಾಷೆಗಳ ತಿಳುವಳಿಕೆ ಇರಬೇಕು. ವಿದ್ಯಾರ್ಥಿಗಳು ಅನೇಕ ಭಾಷೆಗಳನ್ನು ಕಲಿಯುವತ್ತ ಗಮನಹರಿಸಬೇಕು ಎಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್‍ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ಎಲ್ಲಾ ವಿಭಾಗಗಳಲ್ಲೂ ಸಂಶೋಧನಾಧಾರಿತ ಕೈಪಿಡಿಗಳನ್ನು ರಚಿಸುವ ಅಗತ್ಯತೆಯಿದೆ. ಇದು ಭಾಷಾ ಸೌಂದರ್‍ಯದ ಜೊತೆಗೆ ಬರವಣಿಗೆಗಳನ್ನು ಪ್ರದರ್ಶಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಲಿಟ್ ಆರ್ಟ್ ಬುಲೆಟಿನ್ ವಿದ್ಯಾರ್ಥಿಗಳ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಮಹತ್ವದ ಪಾತ್ರ ವಹಿಸುವುದು. ವಿದ್ಯಾರ್ಥಿಗಳಿಗೆ ಉತ್ತಮ ವಿಚಾರಗಳ ಕಡೆಗೆ ಗಮನಹರಿಸಲು ಇದು ಅತ್ಯಂತ ಸಹಕಾರಿ ಎಂದರು.
ಲಿಟರರಿ ಕ್ಲಬ್‌ನ ಸಂಚಾಲಕಿ ಮೋತಿ ಬಾ ಜರ್ಮನಿ ತರಗತಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ನೀಡಿದರು. ಜರ್ಮನಿ ತರಗತಿಯ ವಿದ್ಯಾರ್ಥಿಗಳಾದ ಅನುಷಾ.ಎ, ಲೋಕೇಂದರ್ ಸಿಂಗ್ ಅನಿಸಿಕೆಯನ್ನು ಹಂಚಿಕೊಂಡರು. ಇಂಗ್ಲೀಷ್ ವಿಭಾಗ ಮುಖ್ಯಸ್ಥ ಬಾಲಕೃಷ್ಣ ಎಚ್ ಪ್ರಸ್ತಾವಿಸಿದರು, ಇಂಗ್ಲಿಷ್ ವಿಭಾಗ ಉಪನ್ಯಾಸಕ ಆದಿತ್ಯ ಶರ್ಮ ಸ್ವಾಗತಿಸಿದರು, ವಿದ್ಯಾರ್ಥಿ ರಂಗನಾಥ್ ಪ್ರಸಾದ್ ವಂದಿಸಿದರು, ವಿದ್ಯಾರ್ಥಿನಿ ಜೆನಿಫರ್ ಮೋರಸ್ ನಿರ್ವಹಿಸಿದರು.