ಸಾಹಿತ್ಯದ ಭಾವ ಅರಿಯಬೇಕು : ಡಾ.ಪೀಟರ್ ವಿಲ್ಸನ್ ಪ್ರಭಾಕರ್
ಪುತ್ತೂರು : ಯಾವುದೇ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಬೇಕಾದರೆ ಅದರ ಭಾವವನ್ನು ತಿಳಿದುಕೊಳ್ಳಬೇಕು. ಯಾವ ಉದ್ದೇಶದೊಂದಿಗೆ ವಿಚಾರವೊಂದು ಉಕ್ತವಾಗಿದೆಯೋ ಅದೇ ಹಿನ್ನಲೆಯಲ್ಲಿ ಓದುಗನಿಗೆ ಅದು ಪ್ರಾಪ್ತವಾದಾಗ ಮಾತ್ರ ಸಾಹಿತ್ಯವೊಂದು ಹೆಚ್ಚಿನ ಪರಿಣಾಮವನ್ನು ಬೀರಬಲ್ಲದು ಎಂದು ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಹೇಳಿದರು.
ಅವರು ಕಾಲೇಜಿನ ಇಂಗ್ಲಿಷ್ ವಿಭಾಗ ಹಾಗೂ ಲಿಟರರಿ ಕ್ಲಬ್ನ ಆಶ್ರಯದಲ್ಲಿ ಇಂಗ್ಲಿಷ್ ಸಾಹಿತ್ಯದ ಬಗೆಗಿನ ವಿಶ್ವವಿದ್ಯಾನಿಲಯ ಮಟ್ಟದ ಒಂದು ದಿನದ ಕಾರ್ಯಾಗಾರ ಲಿಟ್ ಲೈಟ್ ನಲ್ಲಿ ಭಾಗವಹಿಸಿ ಶನಿವಾರ ಮಾತನಾಡಿದರು.
ಸಂಗತಿಯೊಂದನ್ನು ಮನನ ಮಾಡಿಕೊಳ್ಳಭೇಕಾದರೆ ಅದರ ಬಗೆಗಿನ ಹಿನ್ನಲೆ ಮಾಹಿತಿಯೂ ಗೊತ್ತಾಗಬೇಕು. ಕೇವಲ ವಿಷಯವನ್ನಷ್ಟೇ ತಿಳಿದು, ಅದಕ್ಕೆ ಪೂರಕವಾದ ವಸ್ತುಗಳನ್ನು ಅರಿಯದೇ ಹೋದರೆ ನಮ್ಮ ಓದು ಪರಿಪೂರ್ಣ ಎನಿಸುವುದಿಲ್ಲ. ಒಂದು ವಿಷಯಕ್ಕೆ ನಾವು ಎಷ್ಟು ಪ್ರೌಢಿಮೆಯಿಂದ ಅಡಿಯಿಡುತ್ತೇವೆ ಎನ್ನುವುದೂ ನಮ್ಮ ಅರ್ಥೈಸುವಿಕೆಯ ಮಟ್ಟವನ್ನು ನಿರ್ಧರಿಸುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಮಾತನಾಡಿ ಯಾವುದೇ ಒಂದು ಅಭ್ಯಾಸಕ್ಕೆ ನಾವು ತೊಡಗುವುದಾದರೂ ಅದರ ಬಗೆಗಿನ ಅರ್ಥೈಸುವಿಕೆ ಪ್ರಾಮುಖ್ಯತೆಯನ್ನು ಪಡೆಯುತ್ತದೆ. ಅದಕ್ಕಿಂತಲೂ ಮುಖ್ಯವಾಗಿ ಆವಿಷಯದ ಬಗೆಗೆ ಶ್ರದ್ಧೆಯನ್ನು ಹೊಂದಿರಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಲಿಟರರಿ ಕ್ಲಬ್ ಸಂಯೋಜಕಿ ಮೋತಿ ಬಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರಥಮ ಪ್ರಾರ್ಥಿಸಿದರು. ಇಂಗ್ಲಿಷ್ ವಿಭಾಗ ಮುಖ್ಯಸ್ಥ ಬಾಲಕೃಷ್ಣ ಎಚ್ ಪ್ರಸ್ತಾವನೆಗೈದರು. ಉಪನ್ಯಾಸಕಿ ಅಂಬಿಕಾ ಸ್ವಾಗತಿಸಿ, ರೇಖಾ ನಾಯರ್ ವಂದಿಸಿದರು. ಉಪನ್ಯಾಸಕಿ ಸರಸ್ವತಿ ಸಿ.ಕೆ. ಕಾರ್ಯಕ್ರಮ ನಿರ್ವಹಿಸಿದರು.