ಸಾಹಿತ್ಯ ನಮ್ಮೊಳಗಿನ ಪ್ರಪಂಚವನ್ನು ನಮಗೆ ಪರಿಚಯಿಸಿಕೊಡುತ್ತದೆ: ಡಾ. ಅಮ್ಮಲು ಕುಟ್ಟಿ
ಪುತ್ತೂರು: ನಮಗೆ ಮಾರ್ಗದರ್ಶನವನ್ನು ನೀಡುವ ಪ್ರತಿಯೊಂದು ಬರವಣಿಗೆಯೂ ಸಾಹಿತ್ಯವೆಂದೆನಿಸಿಕೊಳ್ಳುತ್ತದೆ. ಸಾಹಿತ್ಯ ನಮ್ಮೊಳಗೆ ಅವಿತಿರುವ ವೈಶಿಷ್ಟ್ಯಪೂರ್ಣ ಪ್ರಪಂಚದ ಪರಿಚಯವನ್ನು ನಮಗೆ ಮಾಡಿಕೊಡುತ್ತದೆ. ಸಾಹಿತ್ಯ ಎಂಬುವುದು ನಮ್ಮ ಬದುಕನ್ನು ಪ್ರತಿಬಿಂಬಿಸುತ್ತದೆ ಎಂದು ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನ ಇಂಗ್ಲೀಷ್ ವಿಭಾಗ ಮುಖ್ಯಸ್ಥೆ ಡಾ. ಅಮ್ಮಲು ಕುಟ್ಟಿ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಇಂಗ್ಲೀಷ್ ವಿಭಾಗ ಹಾಗೂ ಲಿಟರರಿ ಕ್ಲಬ್ ಜಂಟಿಯಾಗಿ ಆಯೋಜಿಸಿದ ’ವಿದ್ಯಾರ್ಥಿ ಕಾರ್ಯಯೋಜನೆ’ನ್ನು ಬಿಡುಗಡೆಗೊಳಿಸಿ ಸಾಹಿತ್ಯ ಕಲಿಕೆಯ ಪ್ರಾಮುಖ್ಯತೆಯ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪ್ರತಿ ಸಾಹಿತ್ಯ ಕೃತಿಯು ಸಮಕಾಲೀನ ಪ್ರಪಂಚಕ್ಕೆ ಅನ್ವಯಿಸುವಂತೆ ಇದೆ. ಶೇಕ್ಸ್‌ಪಿಯರ್ ನಾಟಕದ ಪಾತ್ರಗಳು ನಮ್ಮೊಳಗೇ ಕಾಣಬಹುದು ಎಂಬುವುದು ಅದಕ್ಕೊಂದು ನಿದರ್ಶನ. ಸಾಹಿತ್ಯ ಎಂಬುವುದು ನಮ್ಮೊಳಗಿನ ಭಯ, ಉದ್ವಿಗ್ನತೆಯನ್ನು ಪ್ರಸ್ತುತ ಪಡಿಸುವುದಕ್ಕಿರುವ ಒಂದು ಮಾರ್ಗಎಂದು ಅಭಿಪ್ರಾಯ ಪಟ್ಟರು.
ಸಾಹಿತ್ಯದ ಕಲಿಕೆ ನಮ್ಮೊಳಗಿನ ಮಾನವೀಯತೆಯನ್ನು ಜಾಗೃತಗೊಳಿಸುತ್ತದೆ. ಇಂಗ್ಲೀಷ್ ಭಾಷೆ ಹಾಗೂ ಸಾಹಿತ್ಯದ ಮೇಲಿನ ನಮ್ಮ ಹಿಡಿತ ನಮ್ಮ ಭವಿಷ್ಯದಲ್ಲಿ ನಮಗೆ ಬೆನ್ನೆಲುಬಾಗಿ ನಿಲ್ಲುತ್ತದೆ. ನಮ್ಮ ಸಂವಹನ ಕೌಶಲ್ಯವನ್ನು ಪಕ್ವಗೊಳಿಸುತ್ತದೆ. ಮಗು ಬೀಳದೆ ಸರಿಯಾಗಿ ನಡೆಯಲು ಕಲಿಯಲು ಸಾಧ್ಯವಿಲ್ಲ. ಹಾಗೆಯೇ ನಾವು ಮಾತನಾಡದ ವಿನಃ ಒಂದು ಭಾಷೆಯಲ್ಲಿ ಹಿಡಿತ ಸಾಧಿಸುವುದು ಅಸಾಧ್ಯ. ತಪ್ಪು ಮನುಷ್ಯ ಸಹಜಗುಣ. ಅವುಗಳಿಂದ ಕಲಿಯುತ್ತಾ ಮುಂದುವರೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಮೊದಲ ಬಾರಿಗೆ ವಿದ್ಯಾರ್ಥಿ ಕ್ಷೇತ್ರಕಾರ್ಯಯೋಜನೆಯನ್ನು ಹಮ್ಮಿಕೊಂಡು ಯಶಸ್ವಿಯಾದ ವಿಭಾಗ ಹಾಗೂ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಸಂಶೋಧನೆ ಎಮಬುವುದು ಮಾನವನ ಉಗಮದೊಂದಿಗೆ ಆರಂಭವಾಗಿದೆ. ಅದು ಕೇವಲ ಒಂದು ವಿಷಯಕ್ಕೆ ಸೀಮಿತಗೊಳ್ಳದೆ ಎಲ್ಲ ಕ್ಷೇತ್ರಕ್ಕೂ ಅನ್ವಯವಾಗಿದೆ. ವಿದ್ಯಾರ್ಥಿ ಜೀವನದ ಅನುಭವಗಳು ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಕಾರ್ಯಯೋಜನೆಗಳು ನಮ್ಮ ಕಾರ್ಯಶೈಲಿಗೆ ಹಿಡಿದ ಕೈಗನ್ನಡಿಗಳು ಎಂದು ನುಡಿದರು.
ಈ ಸಂದರ್ಭದಲ್ಲಿ ವಿಭಾಗದ ವತಿಯಿಂದ ವಿದ್ಯಾರ್ಥಿಗಳು ರೂಪಿಸಿದ ಪ್ರಾಜೆಕ್ಟ್ ಪುಸ್ತಿಕೆಯನ್ನು ಬಿಡುಗಡೆಗೊಳಿಸಲಾಯಿತು. ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಹೆಚ್., ಲಿಟರರಿ ಕ್ಲಬ್ ಸಂಯೋಜಕಿ ರೇಖಾ ನಾಯರ್, ಉಪನ್ಯಾಸಕಿ ಸರಸ್ವತಿ ಸಿ.ಕೆ., ಅಂಬಿಕಾ, ಚಂದ್ರಿಕಾ, ಉಪನ್ಯಾಸಕ ಗಣೇಶ್ ಪ್ರಸಾದ್ ಎ. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯಕ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಪಲ್ಲವಿ ಕೆ. ಪ್ರಾರ್ಥಿಸಿದರು. ತೇಜಸ್ವಿನಿ ಸ್ವಾಗತಿಸಿ ಸೌಂದರ್ಯ ವಂದಿಸಿದರು. ಶ್ರಾವ್ಯ ಕಾರ್ಯಕ್ರಮ ನಿರೂಪಿಸಿದರು.