ಧನಾತ್ಮಕ ಚಿಂತನೆಗಳಿಂದ ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು : ಬಾಲಕೃಷ್ಣ ಹೆಚ್
ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ಕಲಿಯುವ ಅವಕಾಶಗಳು ಬಹಳ ಸಿಗುತ್ತವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮೊದಲು ಆತ್ಮ ಗೌರವವನ್ನು ಬೆಳೆಸಿಕೊಳ್ಳಬೇಕು. ಧನಾತ್ಮಕ ಚಿಂತನೆಗಳು ಆತ್ಮ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಸಹಕಾರಿ. ಕ್ರಿಯಾತ್ಮಕ ವಿಚಾರಗಳನ್ನು ಹಂಚಿಕೊಳ್ಳುವುದರ ಮೂಲಕ ನಮ್ಮ ಕೌಶಲ್ಯತೆಯನ್ನು ಉತ್ಕೃಷ್ಠಗೊಳಿಸಿಕೊಳ್ಳಬೇಕು ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಬಾಲಕೃಷ್ಣ ಹೆಚ್. ಹೇಳಿದರು.
ಅವರು ಕಾಲೇಜಿನ ಇಂಗ್ಲೀಷ್ ವಿಭಾಗ ಹಾಗೂ ಲಿಟರರಿ ಕ್ಲಬ್ ಜಂಟಿಯಾಗಿ ಆಯೋಜಿಸಿದ ಲಿಟರರಿ ಕ್ಲಬ್ ಮೊದಲ ಸಭೆಯನ್ನು ಉದ್ದೇಶಿಸಿ ಬುಧವಾರ ಮಾತನಾಡಿದರು.
ಆಲಿಸುವಿಕೆ, ಮಾತನಾಡುವಿಕೆ, ಓದುವುದು ಹಾಗೂ ಬರೆಯುವುದು ಭಾಷಾ ಜ್ಞಾನವನ್ನು ಹೆಚ್ಚಿಸಿ ಕೊಳ್ಳಲು ಸಹಾಯ ಮಾಡುತ್ತದೆ. ಕಷ್ಟ, ಅಸಾಧ್ಯ ಎಂಬ ಕೀಳಿರಿಮೆಯಿಂದ ಹೊರಬರಲು ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಪ್ರಯತ್ನ ಹಾಗೂ ಶ್ರಮ ವಹಿಸುವುದು ಎರಡೂ ಅಗತ್ಯ ಈ ಚಟುವಟಿಕೆಗಳಿಂದ ಸಿಗುವ ಅನುಭವ ವಿಷಯದ ಬಗೆಗಿನ ತಿಳುವಳಿಕೆಯೊಂದಿಗೆ ಸಂವಹನ ಕೌಶಲ್ಯವನ್ನೂ ಹೆಚ್ಚಿಸುತ್ತದೆ. ಇತರರ ಪ್ರತಿಕ್ರಿಯೆಯ ಬಗ್ಗೆ ಚಿಂತಿಸದೆ ನಮ್ಮ ನೈಪುಣ್ಯತೆಯನ್ನು ಹೆಚ್ಚಿಸಿಕೊಳ್ಳುವುದರ ಕಡೆಗೂ ಗಮನ ನೀಡಬೇಕು ಎಂದು ಸಲಹೆ ನೀಡಿದರು.
ಉಪನ್ಯಾಸಕಿ ಮೋತಿ ಬಾ ಮಾತನಾಡಿ ಹೆದರಿಕೆಯನ್ನು ಮೆಟ್ಟಿ ನಿಲ್ಲುವುದನ್ನು ವಿದ್ಯಾರ್ಥಿಗಳು ಕಲಿತುಕೊಳ್ಳಬೇಕು. ಇಂಗ್ಲೀಷ್ ಅಧ್ಯಾಪಕರಾಗುವುದು ಸುಲಭದ ಮಾತಲ್ಲ. ಒಳ್ಳೆ ಅಂಕ ಪಡೆಯುವುದೆ ಅಂತಿಮವಲ್ಲ. ಭಾಷಾ ಚಾತುರ್ಯತೆಯನ್ನೂ ಗಳಿಸಿಕೊಳ್ಳಬೇಕು. ಅದಕ್ಕಾಗಿ ಉತ್ತಮವಾದ ಆಸಕ್ತಿಯನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ನಮ್ಮ ಪ್ರಾವಿಣ್ಯತೆ ನಮಗೆ ತೃಪ್ತಿ ನೀಡುವಂತಿರಬೇಕು. ಪರಿಶ್ರಮ ವಹಿಸಿ ಕೆಲಸ ಮಾಡುವುದರಿಂದ ನಮ್ಮನ್ನು ನಾವು ಉತ್ತಮ ಪಡಿಸಿಕೊಳ್ಳಬಹುದು ಎಂದರು.
ಲಿಟರರಿ ಕ್ಲಬ್ ಸಂಚಾಲಕಿ, ಉಪನ್ಯಾಸಕಿ ರೇಖಾ ನಾಯರ್ ನೇತೃತ್ವದಲ್ಲಿ ಕ್ಲಬ್ ಪ್ರತಿನಿಧಿಗಳಾಗಿ ರಶ್ಮಿಕಾ, ಅನುಶ್ರೀ, ಕೃಪಾ, ಅಜಯ್, ಆಶಾ, ಸುಷ್ಮಾ ಎಮ್.ಎಸ್, ವರ್ಷಿತಾ ಎಮ್. ವಿ. ರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಉಪನ್ಯಾಸಕಿ ಸರಸ್ವತಿ ಸಿ.ಕೆ., ಅಂಬಿಕಾ, ಉಪನ್ಯಾಸಕ ಗಣೇಶ್ ಪ್ರಸಾದ್ ಉಪಸ್ಥಿತರಿದ್ದರು.
ಅಂತಿಮ ಬಿ.ಎ. ವಿದ್ಯಾರ್ಥಿನಿ ವರ್ಷಿತಾ ಎಮ್.ವಿ. ಸ್ವಾಗತಿಸಿ, ಪ್ರಥಮಾ ಎ. ಆರ್ ವಂದಿಸಿದರು. ನಮಿತಾ ಕಾರ್ಯಕ್ರಮ ನಿರೂಪಿಸಿದರು.