ಮಾನವೀಯ ಮೌಲ್ಯಗಳು ಇಂದಿನ ಅಗತ್ಯ : ಡಾ. ಶ್ರೀಶ ಕುಮಾರ್
ಪುತ್ತೂರು : ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಪೋಟೊ ಕ್ಲಿಕ್ಕಿಸುವುದಕ್ಕಿಂತ ಆ ಜೀವವನ್ನು ಬದುಕಿಸುವ ದೃಷ್ಠಿಕೋನವನ್ನು ಬೆಳೆಸಿಕೊಳ್ಳಬೇಕು, ಅದು ಮಾನವೀಯ ಮೌಲ್ಯ. ಮಾತ್ರವಲ್ಲದೇ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಅಂಕವನ್ನು ಪ್ರೀತಿಸುವಷ್ಟು ಬದುಕನ್ನು ಪ್ರೀತಿಸುವುದಿಲ. ಅದರ ಕಾರಣದಿಂದಲಾಗಿ ಇಂದು ಆತ್ಮಹತ್ಯೆಯಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂದು ವಿವೇಕಾನಂದ ಮಹಾವಿದ್ಯಾಲಯದ ಸಂಸ್ಕೃತ ಉಪನ್ಯಾಸಕ ಡಾ. ಶ್ರೀಶ ಕುಮಾರ ಯಂ. ಕೆ. ಹೇಳಿದರು
ಅವರು ಕಾಲೇಜಿನ ಮಾನವಿಕ ಸಂಘ ಮತ್ತು ಪೊಲಿಟಿಕಲ್ ಪೋರಂನ ಶೈಕ್ಷಣಿಕ ಕಾರ್ಯ ಚಟುವಟಿಕೆಯನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.
ಪ್ರಯಾಣಿಸಬೇಕಾದ ಹಾದಿ, ತಲುಪಬೇಕಾದ ಗುರಿಯ ಬಗೆಗೆ ಖಚಿತ ಮಾಹಿತಿಯನ್ನು ಹೊಂದಿರಬೇಕಲ್ಲದೆ ಗುರಿಯನ್ನು ತಲುಪುವೆನೆಂಬ ಆತ್ಮವಿಶ್ವಾಸವನ್ನು ಹೊಂದಿರಬೇಕು. ಪ್ರಸ್ತುತ ಸಮಾಜದಲ್ಲಿ ಆತ್ಮವಿಶ್ವಾಸದ ಕೊರತೆ ಇರುವುದರ ಪರಿಣಾಮವಾಗಿಯೇ ಅನೇಕ ಅವಘಢಗಳು ಸಂಭವಿಸುತ್ತಿರುವುದನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲದೇ ನಾನು ಜಯಶಾಲಿಯಾಗಬೇಕೆಂದು ಬಯಸುವುದಕ್ಕಿಂತ ನಾವೆಲ್ಲರೂ ಜಯಗಳಿಸಬೇಕೆಂಬ ಸಿದ್ಧಾಂತವನ್ನು ಬೆಳೆಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಮಾನವಿಕ ಸಂಘದ ಸಂಯೋಜಕರಾದ ಅನಿತಾ ಕಾಮತ್, ವಾಸುದೇವ ಎನ್. ಹಾಗೂ ಪೊಲಿಟಿಕಲ್ ಪೋರಂನ ಸಂಯೋಜಕರಾದ ರಮೇಶ್ ಕೆ., ಕವಿತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾನವಿಕ ಸಂಘದ ಅಧ್ಯಕ್ಷೆ ಜಯಶ್ರೀ ಪ್ರಾರ್ಥಿಸಿ, ಸ್ವಾಗತಿಸಿದರು. ಪೊಲಿಟಿಕಲ್ ಪೋರಂನ ಅಧ್ಯಕ್ಷ ಸಿನಾನ್ ವಂದಿಸಿದರು. ವಿದ್ಯಾರ್ಥಿ ವಿನೋದ್ ಕುಮಾರ್ ಹಾಗೂ ವಿದ್ಯಾ ಕಾರ್ಯಕ್ರಮ ನಿರ್ವಹಿಸಿದರು.