VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

’ಮಾತು ಕೃತಿಗಳಲ್ಲಿ ಸಾಮ್ಯತೆ ಇರುವವರು ಮಾತ್ರ ನಿಜವಾದ ನಾಯಕರು’ – ವಿವೇಕಾನಂದ ಕಾಲೇಜು ವಾರ್ಷಿಕೋತ್ಸವದಲ್ಲಿ ಡಾ.ಟಿ.ಆರ್.ಸುಬ್ರಹಣ್ಯ

ಪುತ್ತೂರು: ಯಾವ ವ್ಯಕ್ತಿಗೆ ಉತ್ತಮ ಹಾದಿ ಗೊತ್ತಿದೆಯೋ, ಸ್ವತಃ ಅನುಸರಿಸುತ್ತಾನೋ ಅಂತಹವನು ಮಾತ್ರ ಇತರರಿಗೆ ಮಾರ್ಗದರ್ಶನ ಮಾಡಬಲ್ಲ. ಮಾತು ಹಾಗೂ ಆಚರಣೆ ಎರಡಕ್ಕೂ ಸಾಮ್ಯತೆ ಇರುವ ವ್ಯಕ್ತಿಗಳು ಮಾತ್ರ ಉತ್ತಮ ನಾಯಕರೆನಿಸುತ್ತಾರೆ ಎಂದು ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಟಿ.ಆರ್.ಸುಬ್ರಹ್ಮಣ್ಯ ಹೇಳಿದರು.

       ಅವರು ಮಂಗಳವಾರ ಇಲ್ಲಿನ ವಿವೇಕಾನಂದ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಅತಿಥಿಯಾಗಿ ಭಾಗವಹಿಸಿ  ಮಾತನಾಡಿದರು.

ಈ ದೇಶ ಅದ್ಭುತ ನಾಯಕರನ್ನು ಜಗತ್ತಿಗೆ ನೀಡಿದೆ. ಅಲ್ಲದೆ ಕೆಲವು ನಾಯಕರು ಸ್ವತಃ ಸಂಸ್ಥೆಯೇ ಆಗಿಬಿಟ್ಟಿದ್ದಾರೆ. ಅಂತಹವರಲ್ಲಿ ಪ್ರಮುಖವಾಗಿ ಆದಿ ಶಂಕರಾಚಾರ್ಯ, ಜೆ.ಆರ್.ಡಿ ಟಾ.ಟಾ ಹಾಗೂ ನಾನಿ ಪಾಲ್ಕೆವಾಲಾ ಸೇರಿದ್ದಾರೆ. ಒಬ್ಬರು ಧಾರ್ಮಿಕ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ್ದರೆ ಮತ್ತೊಬ್ಬರು ವಿಜ್ಞಾನ ಕ್ಷೇತ್ರದ ಬೆಳವಣಿಗೆಗೆ ಕಾರಣವಾದವರು. ಅಂತೆಯೇ ಪಾಲ್ಕೆವಾಲಾ ಈ ದೇಶ ಕಂಡ ಮಹಾನ್ ನ್ಯಾಯವಾದಿ. ಈ ನಾಯಕರುಗಳೆಲ್ಲಾ ಮುಂದಿನ ಜನಾಂಗಕ್ಕಾಗಿ ಬದುಕು ಸವೆಸಿದವರು. ಇಂತಹವರನ್ನು ಪ್ರತಿದಿನವೂ ನಾವು ಸ್ಮರಿಸಬೇಕಾದ ಅವಶ್ಯಕತೆಯಿದೆ ಎಂದು ನುಡಿದರು.

ಧರ್ಮ, ಕರ್ಮ ಹಾಗೂ ಅಹಿಂಸೆಯ ಆದರ್ಶದಲ್ಲಿ ಈ ದೇಶ ಬೆಳೆದಿದೆ. ಸತತ ಪ್ರಯತ್ನ, ಪ್ರಾಮಾಣಿಕತೆ, ಮಾನವೀಯತೆ, ಶುಚಿತ್ವ ಹಾಗೂ ಮತ್ತೊಬ್ಬರನ್ನು ಆಲಿಸುವಿಕೆ ವ್ಯಕ್ತಿಯ ಬೆಳವಣಿಗೆಗೆ ಅಗತ್ಯ. ಈ ಸಂಗತಿಗಳನ್ನು ಒಳಗೊಂಡು ಈ ದೇಶ ಮುನ್ನಡೆಯುತ್ತಿದೆ. ಭಗವಾನ್ ಶ್ರೀ ಕೃಷ್ಣ ಸತ್ಯ ಇದ್ದಲ್ಲಿ ಜಯ ಇದೆ ಎಂಬುದನ್ನು ಜಗತ್ತಿಗೆ ಸಾರಿದ್ದಾನೆ. ಈ ಮಹಾನ್ ಸಂಗತಿಗಳನ್ನು ಅರಿತು ಮುಂದಿನ ನಾಯಕರು ತಯಾರಾಗಬೇಕು ಎಂದರು.

 ಮತ್ತೋರ್ವ ಅತಿಥಿ ಬೆಂಗಳೂರಿನ ಕಾಲೇಜು ಶಿಕ್ಷಣ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕ ಪ್ರೊ.ಪ್ರಭಾಕರ ಟಿ.ಎನ್ ಮಾತನಾಡಿ, ಶಿಕ್ಷಣದಿಂದ ಕೇವಲ ಬೌದ್ಧಿಕ ಬೆಳವಣಿಗೆಯಷ್ಟೇ ಅಲ್ಲ, ಮಾನಸಿಕ ಬೆಳವಣಿಗೆ, ಶಾರೀರಿಕ ಬೆಳವಣಿಗೆ, ಆಧ್ಯಾತ್ಮಿಕ ಬೆಳವಣಿಗೆಗಳೂ ಸಾಧ್ಯವಾಗಬೇಕು. ಆದರೆ ಇಂದು ನಮ್ಮ ಮಾನಸಿಕ ಸ್ಥಿತಿ ಸಂಕುಚಿತಗೊಳ್ಳುತ್ತಿದೆ ಎಂದೆನಿಸುತ್ತಿದೆ. ಕುಟುಂಬಗಳು ಕಿರಿದಾಗಿ ಗಂಡ ಹೆಂಡತಿ ಒಟ್ಟಿಗೆ ವಾಸವಾಗಿದ್ದರೆ ಅವಿಭಕ್ತ ಕುಟುಂಬ ಎಂಬಲ್ಲಿಯವರೆಗೆ ಬಂದಿರುವುದು ದುರಂತ ಎಂದು ಹೇಳೀದರು.

ನಾವಿಂದು ಅಭಾರತೀಯರಾಗಿ ಜೀವನ ಸಾಗಿಸುತ್ತಿದ್ದೇವೆ. ಮೆಕಾಲೆ ಕನಸಿನ ಶಿಕ್ಷಣಕ್ಕೆ ನಾವೆಲ್ಲಾ ಹವಿಸ್ಸು ನೀಡುತ್ತಿದ್ದೇವೆ. ಯಾವ ವಿಶ್ವವಿದ್ಯಾನಿಲಯದ ಪಠ್ಯ ಕ್ರಮದಲ್ಲೂ ನಮ್ಮ ದೇಶದ ಉನ್ನತಿಕೆಯನ್ನು ಹೇಳುವ, ಮಹಾಕಾವ್ಯಗಳಲ್ಲಿ ಉಕ್ತವಾದ ವಿಚಾರಶ್ರೀಮಂತಿಕೆಯನ್ನು ಪ್ರಸ್ತುತಪಡಿಸುವ ಪ್ರಯತ್ನ ಕಾಣುತ್ತಿಲ್ಲ. ಆದ್ದರಿಂದಲೇ ಇಂದು ಕಡಿಮೆ ಶ್ರಮದಲ್ಲಿ ಆಕರ್ಷಕ ವೇತನ ದೊರಕುವ ಉದ್ಯೋಗಗಳನ್ನು ಅರಸಿಕೊಂಡುಹೋಗುವವರ ಸಂಖ್ಯೆ ಹೆಚ್ಚುತ್ತಿದೆ ನುಡಿದರು.

       ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಉರಿಮಜಲು ಕೆ.ರಾಮ ಭಟ್, ೨೦೨೦ಕ್ಕೆ ದೇಶ ಸೂಪರ್ ಪವರ್ ಆಗುತ್ತದೆಯೆಂಬ ಕನಸು ನಮ್ಮೆಲ್ಲರದು. ಆ ಕನಸನ್ನು ನನಸಾಗಿಸಲು ಪ್ರತಿಯೊಬ್ಬ ಯುವಕನೂ ಕಾರ್ಯಪ್ರವೃತ್ತನಾಗಬೇಕು ಎಂದರು.

       ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಮಾಧವ ಭಟ್ ಕಾಲೇಜಿನ ವಾರ್ಷಿಕ ಚಟುವಟಿಕೆಗಳ ವಾಚಿಸಿದರು. ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ, ಆಡಳಿ ಮಂಡಳಿ ಸಂಚಾಲಕ ಜಯರಾಮ ಭಟ್ ಎಂ.ಟಿ, ವಿದ್ಯಾರ್ಥಿ ಕ್ಷೇಮಪಾಲಕರಾದ ಡಾ.ವಿಘ್ನೇಶ್ವರ ವರ್ಮುಡಿ, ಪ್ರೊ.ಕೃಷ್ಣ ಕಾರಂತ, ರವಿಕಲಾ, ಹರಿಣಿ, ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಭಿಷೇಕ್ ಹಾಗೂ ಜತೆ ಕಾರ್ಯದರ್ಶಿ ಸೃಜನಿ ರೈ ಎಸ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕಳೆವ ಬಾರಿಯ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ವಿಶ್ವವಿದ್ಯಾನಿಲಯದಲ್ಲಿ ನಾಲ್ಕನೇ ರ್‍ಯಾಂಕ್ ಪಡೆದ ಶ್ರೀವಲ್ಲಿ ಹಾಗೂ ಬಿಝೆಡ್‌ಸಿ ವಿಭಾಗದಲ್ಲಿ ವಿಶ್ವವಿದ್ಯಾನಿಲಯದಲ್ಲಿ ಅತ್ಯಧಿಕ ಅಂಕ ಗಳಿಸಿ ಚಿನ್ನದ ಪದಕಕ್ಕೆ ಭಾಜನರಾದ ಸ್ವಾತಿಲಕ್ಷ್ಮಿಯವರನ್ನು ಸನ್ಮಾನಿಸಲಾಯಿತು. ದತ್ತಿನಿಧಿ ಪ್ರಶಸ್ತಿ, ವಿವಿಧ ಬಹುಮಾನಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ವಿದ್ಯಾರ್ಥಿನಿಯರಾದ ನಂದಿನಿ, ಪ್ರಣೀತಾ, ರಕ್ಷಾ ಹಾಗೂ ರೂಪಶ್ರೀ ಪ್ರಾರ್ಥಿಸಿದರು. ಕಾಲೇಜಿನಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ಪಿ ಭಂಡಾರ್ಕರ್ ವಂದಿಸಿದರು. ಪ್ರಾಧ್ಯಾಪಕ ಡಾ.ಶ್ರೀಧರ ಎಚ್.ಜಿ ಹಾಗೂ ಉಪನ್ಯಾಸಕಿ ವಿದ್ಯಾ ಎಸ್, ಪ್ರೊ.ಶಂಕರನಾರಾಯಣ ಭಟ್, ಪ್ರೊ.ಶಿವಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು.