ಮಾಧ್ಯಮಗಳಲ್ಲಿ ಸಾಮಾಜಿಕ ಕಳಕಳಿ ಅಗತ್ಯ:ವಿವಿ ಭಟ್
ಪುತ್ತೂರು:ಇತ್ತೀಚಿನ ವರ್ಷಗಳಲ್ಲಿ ಪತ್ರಿಕೋದ್ಯಮದಲ್ಲಿ ಗಣನೀಯವಾದ ರೀತಿಯಲ್ಲಿ ಬದಲಾವಣೆಗಳು ಆಗುತ್ತಿದೆ. ಅದರಲ್ಲಿ ತನಿಖಾ ಪತ್ರಿಕೋದ್ಯಮವು ಕೂಡ. ಇದು ಪತ್ರಿಕೋದ್ಯಮಕ್ಕೆ ಬಹು ದೊಡ್ಡ ಬೌದ್ಧಿಕ ಕೊಡುಗೆಯಾಗಿದೆ. ಪತ್ರಿಕೋದ್ಯಮ ಬೆಳೆದಂತೆಲ್ಲಾ ಅದರಲ್ಲಿ ತೊಡಕುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿವೆ ಎಂದು ನಿವೃತ ಐಎಎಸ್ ಅಧಿಕಾರಿ, ಭಾರತ ಸರ್ಕಾರದ ಮಾಜಿ ಕಾರ್ಯದರ್ಶಿ ವಿವಿ ಭಟ್ ಹೇಳಿದರು.
ಅವರು ಸೋಮವಾರ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದು ಮಾಧ್ಯಮಗಳು ಸುದ್ದಿಯನ್ನು ನೀಡುವುದಕ್ಕಿಂತ ಹೆಚ್ಚಾಗಿ ಅದನ್ನು ವರ್ಣನೆಯನ್ನು ಮಾಡುತ್ತಿರುತ್ತವೆ. ಮಾಧ್ಯಮಗಳು ಸಾಮಾಜಿಕ ಕಳಕಳಿಯನ್ನು ಹೊಂದಿರಬೇಕು. ಒಬ್ಬ ವ್ಯಕ್ತಿಯನ್ನು ಮಾಧ್ಯಮದಲ್ಲಿ ಅಗ್ಗದ ಅಪಹಾಸ್ಯ ಮಾಡುವುದು ಸರಿಯಲ್ಲ. ಮಾಧ್ಯಮಗಳು ವಾಕ್ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ತಿಳಿಹೇಳಿದರು.
ಪತ್ರಿಕೋದ್ಯಮ ಕ್ಷೇತ್ರದ ಪರಿಧಿ ಬಹಳ ವಿಸ್ತಾರವಾಗಿದೆ. ಅದು ತಾಂತ್ರಿಕವಾಗಿ ದಿನದಿಂದ ದಿನಕ್ಕೆ ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಲೇ ಇದೆ. ಸ್ಪರ್ಧೆಯ ಕಾರಣದಿಂದಾಗಿ ಮಾಧ್ಯಮಗಳು ನೀಡುವ ಸುದ್ದಿಗಳು ಕೆಲವೊಂದು ಬಾರಿ ಆ ಸುದ್ದಿ ನೈಜತೆಯನ್ನು ಕಳೆದುಕೊಂಡಿರುತ್ತವೆ. ಮಾಧ್ಯಮಗಳು ಪೈಪೋಟಿಯಿಂದ ಕಾಲ್ಪನಿಕ ಸುದ್ದಿಯನ್ನು ಬಿತ್ತರಿಸುವುದು ಸರಿಯಲ್ಲ ಎಂದು ನುಡಿದರು.
ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಅವರು ಐಎಎಸ್ ಅಧಿಕಾರಿಗಳನ್ನು ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ವರ್ಗಾವಣೆ ಮಾಡುವುದನ್ನು ತಡೆಯಲು ಸಂವಿಧಾನಬದ್ಧವಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಈ ವರ್ಗಾವಣೆಯಿಂದ ಹೆಚ್ಚಿನ ಪ್ರಯೋಜನವಿದೆ. ಇದು ಪೂರ್ವಾಗ್ರಹ ಪೀಡಿತ ಅಧಿಕಾರಿಗಳ ಸಂಖ್ಯೆಯನ್ನು ತಡೆಯಬಹುದು. ಹಾಗೂ ಹೊಸ ವಿಚಾರಗಳಿಗೆ ಅವಕಾಶವನ್ನು ನೀಡುತ್ತದೆ ಎಂದು ತಿಳಿಸಿದರು.
ಇತ್ತೀಚೆಗೆ ದೇಶದಲ್ಲಿ ಜಾರಿಯಾದ ಜನ ಲೋಕಪಾಲ್ ಮಸೂದೆ ಪ್ರಭಾವಶಾಲಿಯಾಗಿಲ್ಲ. ಅದು ಸಾಧ್ಯವೂ ಇಲ್ಲ. ಏಕೆಂದರೆ ಲೋಕಪಾಲ ಮಸೂದೆ ರಾಜಕೀಯ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆಗಳೇ ಹೆಚ್ಚಿರುತ್ತದೆ. ಕರಾವಳಿ ಪ್ರದೇಶಗಳಲ್ಲಿ ಪ್ರತಿಭೆಗೆ ಸರಿಯಾದ ಪುರಸ್ಕಾರ ಸಿಗುತ್ತಿಲ್ಲ. ಆದ್ದರಿಂದ ಇತ್ತೀಚಿನ ದಿನಗಳಲ್ಲಿ ಪ್ರತಿಭಾ ಪಲಾಯಣಾ ಹೆಚ್ಚಾಗಿದೆ. ಇದು ನಿಲ್ಲಬೇಕು ಎಂದರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ಉಪನ್ಯಾಸಕಿ ಭವ್ಯ ಆರ್.ಪಿ ನಿಡ್ಪಳ್ಳಿ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿ, ವಂದಿಸಿದರು.