ಮಕ್ಕಳ ಅಂತಃಸತ್ವ ಗುರುತಿಸುವ ಕಾರ್ಯವಾಗಬೇಕು: ಡಾ. ಪ್ರಭಾಕರ ಭಟ್
ಪುತ್ತೂರು: ಅಧ್ಯಾಪನ ಒಂದು ಶ್ರೇಷ್ಟ ವೃತ್ತಿ. ಗುರುವಿಗೆ ದಿವ್ಯ ಚೇತನದ ಜೊತೆಯಲ್ಲಿ ಸಂಬಂಧವಿರುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ವಿಶೇಷ ಸ್ಥಾನವಿದೆ. ಮಕ್ಕಳೆಂದರೆ ದೇವರಂತೆ. ಹಾಗಾಗಿ ದೇವರೊಂದಿಗೇ ನಿತ್ಯ ಒಡನಾಟ ನಡೆಸುವ ಅವಕಾಶ ಶಿಕ್ಷಕರಿಗೆ ಮಾತ್ರ ಇದೆ ಎಂದು ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದ ಸಂಚಾಲಕ ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಶಿಕ್ಷಣ ಘಟಕ ಹಾಗೂ ಬಿಎಡ್ ಮತ್ತು ಡಿಎಡ್ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳಲ್ಲಿ ಹೊಸದಾಗಿ ಸೇರಿದ ಅಧ್ಯಾಪಕರಿಗಾಗಿ ಶನಿವಾರ ಆಯೋಜಿಸಲಾದ ಸಂಸ್ಕಾರ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಪಾಠ ಪ್ರವಚನದೊಂದಿಗೆ ಆಧುನಿಕ ಮಾಹಿತಿಗಳನ್ನು ಮಕ್ಕಳ ತಲೆಗೆ ತುರುಕುವ ಪ್ರಯತ್ನವಷ್ಟೇ ಶಿಕ್ಷಣದಲ್ಲಿ ಕಾಣಿಸುತ್ತಿದೆ. ಆದರೆ ಮಕ್ಕಳಲ್ಲಿನ ಅಂತಃಸತ್ವ, ಪ್ರತಿಭೆಯನ್ನು ಗುರುತಿಸುವ ಕಾರ್ಯ ನಡೆಯಬೇಕು. ಶಿಕ್ಷಣದಲ್ಲಿ ರಾಷ್ಟ್ರೀಯ ಚಿಂತನೆಯನ್ನು ರೂಪಿಸಬೇಕು. ತನ್ಮೂಲಕ ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬೆಳೆಸುವ ಕಾರ್ಯ ಆಗಬೇಕು ಎಂದರು.
ಅಧ್ಯಾಪಕರು ಮಕ್ಕಳಿಗೆ ಆದರ್ಶಪ್ರಾಯರಾಗಿರಬೇಕು. ಸ್ವತಃ ಆಚರಣೆಯಲ್ಲಿ ತೋರಿ ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು. ಮಕ್ಕಳು ಮನುಷ್ಯ ಸಹಜವಾಗಿ ಅರಳುವುದಕ್ಕೆ ಬೇಕಾದ ಪೂರಕ ವಾತಾವರಣ ನಿರ್ಮಿಸಿಕೊಡಬೇಕು. ಜತೆಗೆ ದೇಶದ ಬಗೆಗೆ ಗೌರವ ಮಕ್ಕಳಲ್ಲಿ ಮೂಡುವಂತೆ ನೋಡಬೇಕು ಎಂದರಲ್ಲದೆ ಸಂಸ್ಕಾರ ರೂಪಿಸುವಲ್ಲಿ ತಾಯಿಯಂದಿರ ಪಾತ್ರ ದೊಡ್ಡದು. ಶಿಕ್ಷಕನಿಗೂ ತಾಯಿಯ ಪಾತ್ರವನ್ನು ನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ವಿದ್ಯಾರ್ಥಿಗಳು ದೇಶದ ಆಸ್ತಿಯಾಗಬೇಕು. ಅವರನ್ನು ಆ ರೀತಿಯಲ್ಲಿ ರೂಪಿಸುವ ಜವಾಬ್ದಾರಿ ಶಿಕ್ಷಕರದ್ದು ಎಂದರು.
ವಿವೇಕಾನಂದ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯರಿಂದ ಸರಸ್ವತಿ ವಂದನೆ ನಡೆಯಿತು. ವಿವೇಕಾನಂದ ಬಿ.ಎಡ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಡಾ.ದಿನೇಶ್ ಚಂದ್ರ ಸ್ವಾಗತಿಸಿದರು. ಪ್ರಶಿಕ್ಷಣ ಘಟಕದ ಸಂಯೋಜಕ ರಘುರಾಜ್ ಪ್ರಸ್ತಾವಿಸಿದರು. ಡಿ.ಎಡ್ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯೆ ಅನುರಾಧ ವಂದಿಸಿದರು. ಉಪನ್ಯಾಸಕಿ ತುಳಸಿ ಕಾರ್ಯಕ್ರಮ ನಿರ್ವಹಿಸಿದರು.