ಮನಸ್ಸಿಗೆ ಉಲ್ಲಾಸ ನೀಡಲು ಸಾಹಿತ್ಯದಿಂದ ಸಾಧ್ಯ : ರಾಕೇಶ್ ಕುಮಾರ್ ಕಮ್ಮಜೆ
ಪುತ್ತೂರು: ಸಾಹಿತ್ಯದಿಂದ ಸಹೃದಯನ ಮನಸ್ಸನ್ನು ಪ್ರಪುಲ್ಲಗೊಳಿಸಲು ಸಾಧ್ಯ. ಸಾಹಿತ್ಯ ಒಂದು ಸಾಮಾನ್ಯ ಸಂಗತಿಯನ್ನು ವಿಭಿನ್ನವಾಗಿ ಚಿತ್ರಿಸಬಲ್ಲದಾಗಿದ್ದು ಇಂತಹ ಅವಕಾಶವನ್ನು ಬಳಸಿಕೊಳ್ಳಲು ಸಾಹಿತಿಯಿಂದ ಮಾತ್ರ ಸಾಧ್ಯ. ಮಾತ್ರವಲ್ಲದೆ ಸಾಹಿತಿಯು ತನ್ನ ಸಾಹಿತ್ಯದ ಮೂಲಕ ಧನಾತ್ಮಕ ವಿಚಾರಗಳನ್ನು ಓದುಗನಿಗೆ ಹೃದ್ಯವಾಗುವಂತೆ ತಿಳಿಸಬಲ್ಲ ಎಂದು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಹೇಳಿದರು.
ಅವರು ಕಾಲೇಜಿನ ತೃತೀಯ ಐಚ್ಛಿಕ ಕನ್ನಡ ವಿಭಾಗದ ವಿದ್ಯಾರ್ಥಿಗಳು ಕನ್ನಡ ವಿಭಾಗದ ಆಶ್ರಯದಲ್ಲಿ ಆಯೋಜಿಸುತ್ತಿರುವ ಸಾಹಿತ್ಯ ಮಂಟಪ – ಸಾಹಿತ್ಯ ಪ್ರಿಯ ಮನಗಳ ಸಂಮಿಲನ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ಮನಸ್ಸನ್ನು ಶುದ್ಧಗೊಳಿಸುವ ಪ್ರಕ್ರಿಯೆಯನ್ನು ಸಾಹಿತ್ಯದಿಂದ ಮಾಡಲು ಸಾಧ್ಯ. ದಿನ ನಿತ್ಯದ ಅನುಭವಗಳು ಸಾಹಿತ್ಯದಲ್ಲಿ ವ್ಯಕ್ತವಾಗುತ್ತವೆ. ಆದರ್ಶ ಸಮಾಜವನ್ನು ಸೃಷ್ಠಿಸಲು ಸಾಹಿತ್ಯ ಸಹಕಾರಿಯಾಗಬಲ್ಲದು. ಸಾಹಿತ್ಯ ಓದುಗನಲ್ಲಿ ಭರವಸೆ, ಸ್ಫೂರ್ತಿಯನ್ನು ಮೂಡಿಸುತ್ತದೆ. ಮಾತ್ರವಲ್ಲದೆ ಸಾಹಿತ್ಯ ಒಂದು ಒಳ್ಳೆಯ ಉದ್ದೇಶವನ್ನು ನೆರವೇರಿಸುವುದಕ್ಕಾಗಿಯೇ ಸೃಷ್ಠಿಯಾಗುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಕನ್ನಡ ಸಂಘದ ಸಂಯೋಜಕಿ ಡಾ. ಗೀತಾ ಕುಮಾರಿ ಟಿ. ಉಪಸ್ಥಿತರಿದ್ದರು. ವಿದ್ಯಾರ್ಥಿ ಮಹಮ್ಮದ್ ಅಝಾದ್ ಕೆ. ಸ್ವರಚಿತ ಕಥೆಯನ್ನು ಮಂಡಿಸಿದರು. ವಿದ್ಯಾರ್ಥಿನಿ ನಳಿನಿ ಪಿ. ಸ್ವಾಗತಿಸಿ, ಗೀತಾ ವಂದಿಸಿದರು. ಸಾಹಿತ್ಯ ಮಂಟಪದ ಕಾರ್ಯದರ್ಶಿ ವಿನೋದ್ ಕುಮಾರ್ ಕಂದೂರು ಕಾರ್ಯಕ್ರಮ ನಿರ್ವಹಿಸಿದರು.