ಕಾಲೇಜಿನ ಮೊದಲ ದಿನ ಅವಿಸ್ಮರಣೀಯ : ಪೂಜಾ ವೈ ಡಿ
ಪುತ್ತೂರು: ಯಾವನೇ ವಿದ್ಯಾರ್ಥಿಗೆ ಕಾಲೇಜು ಜೀವನದ ತನ್ನ ಮೊದಲ ದಿನ ಅವಿಸ್ಮರಣೀಯವಾದುದು. ಆ ದಿನದ ಖುಷಿ, ಸಂಭ್ರಮ, ಆತಂಕ, ಉದ್ವೇಗಗಳು ಅನಿರ್ವಚನೀಯವಾದದ್ದು. ಹಾಗಾಗಿಯೇ ಸಾಮಾನ್ಯವಾಗಿ ಯಾರೂ ಮೊದಲ ದಿನದಲ್ಲಿ ಗೈರು ಹಾಜರಾಗುವುದಿಲ್ಲ ಎಂದು ವಿವೇಕಾನಂದ ಕಾಲೇಜಿನ ಹಿಂದಿ ಉಪನ್ಯಾಸಕಿ ಪೂಜಾ ವೈ ಡಿ ಹೇಳಿದರು.
ಅವರು ಕಾಲೇಜಿನ ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸುತ್ತಿರುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಕಾಲೇಜಿನ ಮೊದಲ ದಿನಗಳು ಎಂಬ ವಿಷಯದ ಕುರಿತು ಗುರುವಾರ ಮಾತನಾಡಿದರು.
ಕಾಲೇಜು ಜೀವನದಲ್ಲಿ ಸಾಕಷ್ಟು ಅನುಭವಗಳು ನಮ್ಮದಾಗುತ್ತವೆ. ಪೂರ್ತಿ ವರ್ಷ ಆನಂದಪೂರ್ಣವಾಗಿಯೇ ಇರುತ್ತದೆ. ಆದರೆ ಇದರ ಮಧ್ಯೆ ಅಧ್ಯಯನದ ಆಸಕ್ತಿಯನ್ನು ಕಳೆದುಕೊಳ್ಳಬಾರದು. ಬಹಳ ಮುಖ್ಯವಾಗಿ ಕಾಲೇಜು ಗ್ರಂಥಾಲಯವನ್ನು ಸಾಧ್ಯವಿದ್ದಷ್ಟು ಬಳಸಿಕೊಳ್ಳಬೇಕು. ಪುಸ್ತಕಗಳ ಒಡನಾಟ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದು ನುಡಿದರು.
ವಿದ್ಯಾರ್ಥಿಗಳಾದ, ಶಿವಶಂಕರ್ ಮಯ್ಯ, ಸಂಕೇತ್ಕುಮಾರ್, ಶ್ವೇತಾಂಜನಿ, ಕಾರ್ತಿಕ್ ಕುಮಾರ್, ಶಿವಪ್ರಸಾದ್, ಅನಘ, ಕವಿತ, ಸವಿತ, ಅಶ್ವಿನಿ, ಅರುಣ್ ಕುಮಾರ್ ತಮ್ಮ ಅನುಭವ ಹಂಚಿಕೊಂಡರು.
ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಾಜೆ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಹೆಚ್.ಜಿ. ಶ್ರೀಧರ್, ಉಪನ್ಯಾಸಕಿ ಡಾ. ಗೀತಾ, ಮಣಿಕರ್ಣಿಕ ಮಾತುಗಾರರ ವೇದಿಕೆಯ ಕಾರ್ಯದರ್ಶಿ ಸುಷ್ಮಾ ಎಂ.ಎಸ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸೀಮಾ ಪಿ.ಜೆ. ಸ್ವಾಗತಿಸಿ, ಪತ್ರಿಕೋದ್ಯಮ ವಿಭಾಗ ಉಪನ್ಯಾಸಕಿ ಭವ್ಯ ಪಿ. ಆರ್ ನಿಡ್ಪಳ್ಳಿ ವಂದಿಸಿದರು. ವಿದ್ಯಾರ್ಥಿ ಮಹೇಶ ಕಾರ್ಯಕ್ರಮ ನಿರ್ವಹಿಸಿದರು.