ಚುನಾವಣೆ ಎಂಬುದು ನಿಷ್ಪಕ್ಷಪಾತವಾಗಿರಬೇಕು : ದೀಪಿಕಾ
ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ಚುನಾವಣೆ ಎಂಬುದು ಹಲವು ಕಾರಣಕ್ಕೆ ಅವಿಸ್ಮರಣೀಯವಾಗಿರುತ್ತದೆ. ನಾವು ಸಕ್ರಿಯವಾಗಿ ಭಾಗವಹಿಸಿದಾಗ ಸಿಗುವ ಅನುಭವ ಅಪೂರ್ವವಾದಂತಹದು. ಚುನಾವಣೆ ಎಂಬುದು ನಿಷ್ಪಕ್ಷಪಾತವಾಗಿರಬೇಕು ಎಂದು ವಿವೇಕಾನಂದ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ದೀಪಿಕಾ ಹೇಳಿದರು.
ಅವರು ಕಾಲೇಜಿನ ತೃತೀಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸುತ್ತಿರುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಎಲೆಕ್ಷನ್ ಹವಾ ಎಂಬ ವಿಷಯದ ಕುರಿತು ಗುರುವಾರ ಮಾತನಾಡಿದರು.
ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ನೇರ ಚುನಾವಣೆ ಕಷ್ಟ ಸಾಧ್ಯ. ತರಗತಿ ಪ್ರತಿನಿಧಿಗಳು ನಾಯಕರನ್ನು ಆರಿಸುತ್ತಾರೆ. ಆ ಸಂದರ್ಭದಲ್ಲಿ ಆಮಿಷಗಳಿಗೆ ಒಳಗಾಗುವ ಸಾಧ್ಯತೆ ಹೆಚ್ಚು. ಕಾಲೇಜು ಹಂತಕ್ಕೆ ಬಂದಾಗ ವಿದ್ಯಾರ್ಥಿಗಳಿಗೆ ಪ್ರೌಢಿಮೆ ಬಂದಿರುತ್ತದೆ. ಸರಿ ತಪ್ಪು ಗುರುತಿಸುವ ಪಕ್ವತೆ ಇರಬೇಕು. ಸ್ಪರ್ಧೆ ಇದ್ದಾಗ ಒಳ್ಳೆಯ ಆಯ್ಕೆಗೆ ಉತ್ತಮ ಅವಕಾಶವಿದೆ ಎಂದರು.
ವಿದ್ಯಾರ್ಥಿಗಳಾದ ಸೀಮಾ ಪಿ.ಜೆ., ಶಿವಪ್ರಸಾದ್ ರೈ, ಕಾರ್ತಿಕ್ ಕುಮಾರ್, ಮೇಘಾ, ಅಕ್ಷಯ ಕೃಷ್ಣ, ಶ್ರೀನಾಥ್, ಶಿವಶಂಕರ್ ಮಯ್ಯ, ಭವ್ಯ, ಪ್ರಥಮಾ ಉಪಾಧ್ಯಾಯ, ಕಾರ್ತಿಕ್, ಕೌಶಿಕ್, ಅರುಣ್ ಕುಮಾರ್, ರಾಮ್ ಕಿಶನ್ ಮತ್ತು ಜಗದೀಶ್ ತಮ್ಮ ಅನುಭವ ಹಂಚಿಕೊಂಡರು.
ಈ ಸಂದರ್ಭದಲ್ಲಿ ಪತ್ರಿಕೋದ್ಯಮ ವಿಭಾಗ ಉಪನ್ಯಾಸಕಿ ಭವ್ಯ ಪಿ. ಆರ್ ನಿಡ್ಪಳ್ಳಿ ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಗೀತಾ, ಹಿಂದಿ ಉಪನ್ಯಾಸಕಿ ಪೂಜಾ ವೈ ಡಿ, ಮಣಿಕರ್ಣಿಕ ಮಾತುಗಾರರ ವೇದಿಕೆಯ ಕಾರ್ಯದರ್ಶಿ ಸುಷ್ಮಾ ಎಂ.ಎಸ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಗಣ್ಯಶ್ರೀ ಸ್ವಾಗತಿಸಿ, ಪ್ರಥಮಾ ವಂದಿಸಿದರು. ಸ್ವಾತಿ ಕೆ. ಕಾರ್ಯಕ್ರಮ ನಿರೂಪಿಸಿದರು.