ವಿವೇಕಾನಂದದಲ್ಲಿ ಮಾನ್ಸೂನ್ ಚೆಸ್ ಪಂದ್ಯಾಟ ಉದ್ಘಾಟನೆ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ೩೫ನೇ ವರ್ಷದ ಮಾನ್ಸೂನ್ ಚೆಸ್ ಪಂದ್ಯಾಟ ಸೋಮವಾರ ಉದ್ಘಾಟನೆಗೊಂಡಿತು. ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಗಾಯಕ ಶಶೀಧರ ಕೋಟೆ ಪಂದ್ಯಾಟಕ್ಕೆ ಚಾಲನೆ ನೀಡಿ ಯಾವುದೇ ಕ್ರೀಡೆ ಬೆಳೆಯಬೇಕಾದರೆ ಸಂಸ್ಥೆಯೊಂದರ ಬೆಂಬಲ ಅಗತ್ಯ. ಅದರಲ್ಲೂ ಚೆಸ್ ಒಂದು ವಿಶಿಷ್ಟವಾದ ಆಟ. ಇದರಿಂದ ಬೌದ್ಧಿಕ ಬೆಳವಣಿಗೆ ಸಾಧ್ಯ. ಎಲ್ಲರನ್ನೂ ಪ್ರೀತಿಯಿಂದ ಕಾಣುವ ಸಂಸ್ಕೃತಿ ನಮ್ಮದು. ಅಂತಹ ಭಾವೈಕ್ಯವನ್ನು ಬೆಸೆಯುವಲ್ಲಿ ಕ್ರೀಡೆಯ ಪಾತ್ರವೂ ದೊಡ್ಡದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಮಾತನಾಡಿ ವಿವೇಕಾನಂದ ಕಾಲೇಜಿನಲ್ಲಿ ಕಳೆದ ಮೂವತ್ತೈದು ವರ್ಷಗಳಿಂದ ಮಾನ್ಸೂನ್ ಚೆಸ್ ಬೆಳೆದು ಬರಲು ವಿದ್ಯಾರ್ಥಿಗಳಲ್ಲಿನ ಆಸಕ್ತಿಯೇ ಕಾರಣ. ಭಾರತದಲ್ಲಿ ಚೆಸ್‌ಗೆ ವಿಫುಲ ಅವಕಾಶವಿದೆ. ಚೆಸ್ ಪುರಾತನ ಕ್ರೀಡೆಯಾಗಿದ್ದು, ಬದುಕಿನ ಸಂಕೇತವೂ ಆಗಿದೆ ಎಂದು ನುಡಿದರು.
ಈ ಪಂದ್ಯಾಟದಲ್ಲಿ ಒಟ್ಟು ೨೦ ಕಾಲೇಜುಗಳ ೧೧೦ ಮಂದಿ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು ಪಂದ್ಯಾಟ ಮೂರು ದಿನಗಳ ಕಾಲ ನಡೆಯಲಿದೆ.
ವಿದ್ಯಾರ್ಥಿನಿಯರಾದ ಶೃತಿ, ಶ್ರೀದೇವಿ ಹಾಗೂ ನಿಶಾ ಪ್ರಾರ್ಥಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ಸ್ವಾಗತಿಸಿದರು. ಉಪನ್ಯಾಸಕಿ ಹರಿಣಿ ವಂದಿಸಿದರು. ದೈಹಿಕ ಶಿಕ್ಷಕರಾದ ಪ್ರಸನ್ನರಾವ್ ಹಾಗೂ ಡಾ. ಜ್ಯೋತಿ ಕುಮಾರಿ ತೀರ್ಪುಗಾರರಾಗಿ ಸಹಕರಿಸಿದರು. ಉಪನ್ಯಾಸಕ ಅತುಲ್ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.