VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ಕವನ ಬದುಕಿನಲ್ಲಿ ಭರವಸೆ ಮೂಡಿಸುವಂತಿರಬೇಕು: ಡಾ.ಗೀತಾ ಕುಮಾರಿ

ಪುತ್ತೂರು: ಪ್ರಸ್ತುತ ಸಮಾಜದಲ್ಲಿ ಮನುಷ್ಯ ಅಂತರ್ ಮುಖಿಯಾಗುತ್ತಿರುವ ಹಿನ್ನಲೆಯಲ್ಲಿ ಕವನ ಅತೀ ಅಗತ್ಯ. ಯುವಜನರು ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಅದರ ದುರ್ಬಲಕೆ ಮಾಡುವ ಬದಲು ಸಾಹಿತ್ಯದ ಬೆಳವಣಿಗೆಗೆ, ಸಮಾಜದ ಬೆಳವಣಿಗೆಗಾಗಿ ಬಳಸಬೇಕು. ರಚಿಸಲ್ಪಟ್ಟ ಕವನವು ಧನಾತ್ಮಕ ದೃಷ್ಟಿಕೋನವನ್ನು, ಬದುಕಿನ ಭರವಸೆಯನ್ನು, ವ್ಯವಸ್ಥೆಯ ಬದಲಾವಣೆಯನ್ನು ಸೃಷ್ಟಿಸುವಂತಾಗಿರಬೇಕು ಎಂದು ವಿವೇಕಾನಂದ ಮಹಾ ವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಗೀತಾ ಕುಮಾರಿ ಟಿ. ಹೇಳಿದರು.

News Photo - Geetha Kumari
ಅವರು ಕಾಲೇಜಿನ ಜಾಗೃತಿ ಬಳಗ, ಲಿಟರರಿ ಕ್ಲಬ್, ಸಂಸ್ಕೃತ ಸಂಘ, ಕನ್ನಡ ಸಂಘ ಮತ್ತು ಹಿಂದಿ ಸಂಘದ ಸಂಯುಕ್ತ ಸಹಯೋಗದಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಬುಧವಾರ ಮಾತನಾಡಿದರು.
ಸಾಹಿತ್ಯದ ನೆಲೆಯಲ್ಲಿ ಕವಿ ಮಾತ್ರ ಮುಖ್ಯವಲ್ಲ ಸಹೃದಯನೂ ಮುಖ್ಯವಾಗುತ್ತಾನೆ. ಕವಿಯ ಭಾವನೆಯು ಯಥಾವತ್ತಾಗಿ ಓದುಗನಿಗೆ ಅರ್ಥವಾದರೆ ಕವಿಯ ಸಾಮರ್ಥ್ಯವು ಪ್ರತಿಫಲನ ಹೊಂದುತ್ತದೆ. ಸುತ್ತಮುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಅರಿಯುವ ಮನೋಭಾವವನ್ನು ಕವಿಯಾಗಲು ಇಚ್ಚಿಸುವವರು ಬೆಳೆಸಿಕೊಳ್ಳಬೇಕು. ಇದರಿಂದಲಾಗಿ ವಸ್ತುವಿನ ಆಯ್ಕೆಯ ಸಮಸ್ಯೆ ತಲೆದೋರುವುದಿಲ್ಲ. ಚಿಕ್ಕ ವಿಚಾರವನ್ನು ಸರಿಯಾಗಿ ಗಮನಿಸಿದರೂ ಅದು ಕವನ ಸೃಷ್ಟಿಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಮಾನವ ಅನುಕರಣ ಜೀವಿ. ಇದರಿಂದಾಗಿಯೇ ಕವನ ರಚನೆ ಹುಟ್ಟಿದೆ. ಕಲಿಯುವ ಆಸೆ ಯಾರಲ್ಲಿ ಇರುವುದೋ ಅವರಿಗೆ ಸ್ವಲ್ಪ ಪ್ರೋತ್ಸಾಹ ನೀಡಿದಾಗ ಅದು ಕಲೆಯಾಗಿ ಹೊರ ಹೊಮ್ಮುತ್ತದೆ. ಕವಿಗಳಾಗಬೇಕಾದರೆ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದರಿಂದಾಗಿ ಈ ಹಿಂದಿನ ಕವಿಗಳು ಯಾವ ರೀತಿ ಕವನ ರಚಿಸಿದ್ದಾರೆ?, ನಾನು ಹೇಗೆ ರಚಿಸಬಹುದು ಎಂಬ ಆಲೋಚನೆ ಬೆಳೆಯಲು ಸಾಧ್ಯವಾಗುತ್ತದೆ. ಮಾತ್ರವಲ್ಲದೇ ಒಂದು ವಿಚಾರದ ಕುರಿತು ಒಬ್ಬೊಬ್ಬರು ಒಂದೊಂದು ರೀತಿಯ ಆಲೋಚನೆ, ಅಭಿಪ್ರಾಯವನ್ನು ಹೊಂದಿರುತ್ತಾರೆ. ಇದರಿಂದ ಭಿನ್ನ ರೀತಿಯ ರಚನೆ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಘೋಷಣೆ ಕೂಗಿ ಪ್ರತಿಭಟಿಸಿದ್ದು ಕವನಗಳ ಮೂಲಕವೇ. ಇದಕ್ಕೆ ಬಂಕಿಮ ಚಂದ್ರ ಚಟರ್ಜಿಯವರ ವಂದೇ ಮಾತರಂ ಗೀತೆಯೇ ಉತ್ತಮ ಉದಾಹರಣೆಯಾಗಿದೆ. ಪ್ರತಿಯೊಂದು ಕವನವೂ ತನ್ನೊಳಗೆ ಅಡಕವಾಗಿರುವಾಗಿರುವ ಸಂದೇಶವನ್ನು ಜನತೆಗೆ ತಲುಪಬಯಸುತ್ತದೆ. ಬರವಣಿಗೆಯಲ್ಲಿ ಒಂದು ಹಂತ ತಲುಪಿದ ನಂತರ ತಪ್ಪುಗಳು ತಾನಾಗಿಯೇ ಕಡಿಮೆಯಾಗುತ್ತದೆ ಎಂದು ನುಡಿದರು.
ಭೌತಿಕವಾದ ಪ್ರಗತಿ ಬೌದ್ಧಿಕ ಸ್ವರೂಪ ಪಡೆದಾಗ ಕವನದ ಮೂಲಕ ಹೊರ ಬರುತ್ತದೆ. ಕೆಲವು ಕಾಲ ಮಾತ್ರ ಜನಪ್ರಿಯವಾಗುವ ಕವನಗಳು ನಮ್ಮದಾಗದೆ ಎಲ್ಲಾ ಕಾಲಘಟ್ಟಕ್ಕೂ ಅನ್ವಯವಾಗುವ ಕವನಗಳನ್ನು ರಚಿಸಬೇಕು. ಸಮಾಜಕ್ಕೆ ಯಾವುದೇ ಧನಾತ್ಮಕ ಸಂದೇಶವನ್ನು ನೀಡದ ಕವನಗಳು ಜಾಸ್ತಿ ಕಾಲ ಬಾಳುವುದಿಲ್ಲ. ಸಾಮಾಜಿಕ ಬದಲಾವಣೆಯನ್ನು ಮಾಡುವುದೇ ಕವನದ ಆಶಯವಾದರೆ ಅದು ಚಿರಂಜೀವಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ಸಂಘದ ಅಧ್ಯಕ್ಷ ಡಾ. ಎಚ್.ಜಿ. ಶ್ರೀಧರ್, ಹಿಂದಿ ಸಂಘದ ಸಂಯೋಜಕಿ ಡಾ.ದುರ್ಗಾರತ್ನ ಸಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸಿಂಧು, ಅನುಷಾ, ಹರೀಶ್, ದೀನವಿ, ಜಯಶ್ರೀ, ಸ್ವಾತಿ, ಅಕ್ಷತಾ, ಲೋಕೇಂಧರ್ ಸಿಂಗ್, ನಿಶಾ, ಅನಿಷಾ, ನಿಧೀಶ, ಕ್ಷಮಾದೇವಿ, ದೇವಾನಂದ್, ಪಲ್ಲವಿ, ತೇಜಸ್ವಿನಿ ಕವನವನ್ನು ವಾಚಿಸಿದರು.
ಜಾಗೃತಿ ಬಳಗದ ಸಂಯೋಜಕಿ ಮೋತಿ ಬಾ ಸ್ವಾಗತಿಸಿ, ವಿದ್ಯಾರ್ಥಿನಿ ಸೌಮ್ಯ ಪಿ. ಎಂ. ವಂದಿಸಿದರು. ವಿದ್ಯಾರ್ಥಿ ಕೌಶಿಕ್ ಕೆ. ಎಂ ಕಾರ್ಯಕ್ರಮ ನಿರ್ವಹಿಸಿದರು. ದೀಕ್ಷಾ ಎನ್. ಪ್ರಾರ್ಥಿಸಿದರು.