ವಿವೇಕಾನಂದ ಕಾಲೇಜಿಗೆ ರಾಷ್ಟ್ರೀಯ ಮೌಲ್ಯಾಂಕನ ಸಮಿತಿ ನ್ಯಾಕ್ ನಿಂದ ಎ ಶ್ರೇಣಿ
ಪುತ್ತೂರು : ಇಲ್ಲಿನ ವಿವೇಕಾನಂದ ಪದವಿ ಕಾಲೇಜಿಗೆ ಸೆಪ್ಟೆಂಬರ್ ತಿಂಗಳಲ್ಲಿ ಭೇಟಿ ನೀಡಿದ್ದ ರಾಷ್ಟ್ರೀಯ ಮೌಲ್ಯಾಂಕನ ಸಮಿತಿ(ನ್ಯಾಕ್)ಯು, ಕಾಲೇಜಿನ ಬಗೆಗಿನ ತನ್ನ ಸಮಗ್ರ ಅಧ್ಯಯನದ ಆಧಾರದ ಮೇಲೆ ಎ ಶ್ರೇಣಿಯನ್ನು ನೀಡಿದೆ. ಪ್ರತಿ ಐದು ವರ್ಷಕ್ಕೊಮ್ಮೆ ಭೇಟಿ ನೀಡುವ ಈ ಪರಿಶೀಲನಾ ಸಮಿತಿ, 2010-11 ರಲ್ಲಿ ನಡೆದ ನ್ಯಾಕ್ ತಂಡದ ಭೇಟಿಯ ತರುವಾಯ ಕಾಲೇಜಿನಲ್ಲಾದ ಬದಲಾವಣೆ, ಬೆಳವಣಿಗೆ, ಉಪನ್ಯಾಸಕ ಹಾಗೂ ವಿದ್ಯಾರ್ಥಿಗಳ ಗುಣಮಟ್ಟವನ್ನು ಕೂಲಂಕುಷವಾಗಿ ಪರಾಮರ್ಶೆ ನಡೆಸಿತ್ತು. ಈ ಹಿಂದೆಯೂ ವಿವೇಕಾನಂದ ಕಾಲೇಜಿಗೆ ಎ ಶ್ರೇಣಿ ಪ್ರಾಪ್ತವಾಗಿತ್ತು. ಆದರೆ ಕಳೆದ ಬಾರಿ 3.12 ದೊರಕಿದ್ದ ಮೌಲ್ಯಾಂಕನ ಈ ಬಾರಿ 3.30 ಗೆ ಏರಿರುವುದು ಕಾಲೇಜಿನ ಬೆಳವಣಿಗೆಗೆ ಹಿಡಿದ ಕೈಗನ್ನಡಿ.
ನ್ಯಾಕ್ ತಂಡ ತನ್ನ ಭೇಟಿಯ ಸಂದರ್ಭದಲ್ಲಿ ಆಡಳಿತ ಮಂಡಳಿಯೊಂದಿಗೆ, ಕಾಲೇಜಿನ ಆಂತರಿಕ ಗುಣಮಟ್ಟ ಸಮಿತಿಯ ಸದಸ್ಯರೊಂದಿಗೆ, ವಿದ್ಯಾರ್ಥಿಗಳೊಂದಿಗೆ, ಹೆತ್ತವರೊಂದಿಗೆ ಮಾತ್ರವಲ್ಲದೆ ಹಿರಿಯ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಿತ್ತಲ್ಲದೆ ಕಾಲೇಜಿನ ಪ್ರತಿಯೊಂದು ವಸ್ತು ವಿಷಯವನ್ನೂ ಆಮೂಲಾಗ್ರವಾಗಿ ಪರಿಶೀಲನೆಗೊಳಪಡಿಸಿತ್ತು. ಕಾಲೇಜಿನ ಗ್ರಂಥಾಲಯ, ಸಂಶೋಧನಾ ಕೇಂದ್ರ, ಕ್ಯಾಂಟೀನ್ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಲಭ್ಯವಾಗುತ್ತಿರುವ ಸೌಲಭ್ಯಗಳು ಇತ್ಯಾದಿಗಳ ಬಗೆಗೂ ಸಮಗ್ರ ಅಧ್ಯಯನ ನಡೆಸಿತ್ತು. ಅಲ್ಲದೆ ಆಡಳಿತ ಮಂಡಳಿಯಿಂದ ದೊರಕುತ್ತಿರುವ ಬೆಂಬಲದ ಬಗೆಗೆ ವಿಮರ್ಶೆ ನಡೆಸಿತ್ತು.
ಕಾಲೇಜಿಗೆ ಭೇಟಿ ನೀಡಿದ ನ್ಯಾಕ್ ತಂಡದ ಮುಖ್ಯಸ್ಥರಾಗಿ ರಾಜಸ್ಥಾನದ ಮೋಹನ್ ಲಾಲ್ ಸುಖಾಡಿಯಾ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿಗಳಾದ ಪ್ರೊ.ಐ.ವಿ.ತ್ರಿವೇದಿ, ಮೆಂಬರ್ ಕೊ-ಆರ್ಡಿನೇಟರ್ ಆಗಿ ಆಂಧ್ರ ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ವಿಭಾಗದ ವಿಶ್ರಾಂತ ಪ್ರೊಫೆಸರ್ ಎಂ.ವಿ.ಪ್ರಸಾದ್ ರಾವ್ ಹಾಗೂ ಸದಸ್ಯರಾಗಿ ಗೋವಾದ ಸರಕಾರಿ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಡಾ.ಮೋಹನ್ ಎಂ ಸಂಗೋಡ್ಕರ್ ಕಾರ್ಯನಿರ್ವಹಿಸಿದ್ದರು. ಕಾಲೇಜಿನ ಈ ಸಾಧನೆಗಾಗಿ ಶ್ರಮವಹಿಸಿದ ಎಲ್ಲರಿಗೂ ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿದೆ.