ನಮ್ಮಲ್ಲಿನ ಸಂಕುಚಿತ ಭಾವನೆಯನ್ನು ಬಿಡಬೇಕು: ಯೋಗೀಂದ್ರ
ಪುತ್ತೂರು: ಸಾಂಪ್ರದಾಯಿಕ ಸಮಾಜದ ಮೇಲೆ ಆಧುನಿಕ ಸಮಾಜವು ನಿಂತಿದೆ. ಆಧುನಿಕ ಸಮಾಜದ ಮುಖ್ಯ ಲಕ್ಷಣವೆಂದರೆ ಅದರ ಮೇಲೆ ಸರ್ಕಾರದ, ಧರ್ಮದ ಪ್ರಭಾವವಿರಬಾರದು. ಯಾವುದೇ ಒಂದು ಸಮಾಜವು ಸಂಪೂರ್ಣವಾಗಿ ಆಧುನಿಕ ಸಮಾಜವಾಗಿ ಬದಲಾಗಲು ಸಾಧ್ಯವಿಲ್ಲ. ಇಂದಿನ ನಮ್ಮ ಸಮಾಜ ಆಧುನಿಕತೆ ಮತ್ತು ಸಾಂಪ್ರದಾಯಿಕತೆಗಳ ಸಮನ್ವಯದಿಂದಾಗಿದೆ ಎಂದು ಐಕಳದ ಪಾಂಪೈನ ಸಮಾಜಶಾಸ್ತ್ರ ಪ್ರಾಧ್ಯಾಪಕ ಯೋಗೀಂದ್ರ ಹೇಳಿದರು.
ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗ ಮತ್ತು ಮಂಗಳೂರಿನ ಸಮಾಜಶಾಸ್ತ್ರ ಸಂಘದ ಸಹಯೋಗದಲ್ಲಿ ಟಿ.ಕೆ.ವಿ ಭಟ್‌ರ ಸ್ಮರಣಾರ್ಥ ಉಪನ್ಯಾಸ ಹಾಗೂ ಆಧುನಿಕ ಸಮಾಜ ಮತ್ತು ಅದರ ಸವಾಲುಗಳು ಎಂಬ ವಿಷಯದ ಕುರಿತು ನಡೆದ ವಿಚಾರ ಸಂಕಿರಣದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಹಿಂದೆ ಒಬ್ಬ ವ್ಯಕ್ತಿಯ ಹುಟ್ಟು ಅವನ ಸ್ಥಾನಮಾನವನ್ನು ನಿರ್ಧರಿಸುತ್ತಿತ್ತು. ಆದರೆ ಇಂದು ಆಧುನಿಕ ಸಮಾಜದಲ್ಲಿ ಅವನ ಸಾಧನೆ, ಸಾಮರ್ಥ್ಯಗಳ ಆಧಾರದ ಮೇಲೆ ಅವನ ಸ್ಥಾನಮಾನ ನಿರ್ಧಾರವಾಗುತ್ತದೆ. ಸಾಂಪ್ರಾದಾಯಿಕ ಸಮಾಜವನ್ನು ಸಂಪೂರ್ಣವಾಗಿ ಆಧುನಿಕ ಸಮಾಜವಾಗಿ ಬದಲಾಯಿಸಲು ಸಾಧ್ಯವಿಲ್ಲ ಎಂದು ಅವರು ನುಡಿದರು.
ನಾವು ನಮ್ಮ ದೇಶವನ್ನು ಆಧುನೀಕತೆಗೆ ಬದಲಾಯಿಸಬೇಕು. ನಮ್ಮಲ್ಲಿನ ಸಂಕುಚಿತ ಭಾವನೆಯನ್ನು ಬಿಡಬೇಕು. ಮನುಷ್ಯ ಮನುಷ್ಯರ ನಡುವೆ ಸಮಾನತೆಯನ್ನು ಕಾಪಾಡಬೇಕು. ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವ ಮನಸ್ಸು ನಮ್ಮಲ್ಲಿರಬೇಕು. ಮುಖ್ಯವಾಗಿ ರಾಜಕೀಯ ಕ್ಷೇತ್ರದಲ್ಲಿ ಆಧುನಿಕತೆಯನ್ನು ತರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಎ. ಜೀವನದಾಸ್ ಮಾತನಾಡಿ, ವಿಚಾರ ಸಂಕಿರಣಗಳಲ್ಲಿ ಹೇಳಿದ ವಿಚಾರಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು. ವಿದ್ಯಾರ್ಥಿಗಳು ಸವಾಲುಗಳನ್ನು ಸ್ವೀಕರಿಸುವುದು ಮತ್ತು ಅದನ್ನು ಹೇಗೆ ಎದುರಿಸಬೇಕು ಎಂಬುವುದನ್ನು ಕಲಿಯಬೇಕು ಎಂದು ತಿಳಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಪೀಟರ್ ವಿಲ್ಸನ್ ಪ್ರಭಾಕರ ಮಾತನಾಡಿ, ನಮ್ಮ ಸಮಾಜ ಆಧುನಿಕ ಸಮಾಜವಾಗುವಲ್ಲಿ ಆಧುನಿಕ ಶಿಕ್ಷಣದ ಪಾತ್ರ ಮಹತ್ವವಾದುದು. ಶಿಕ್ಷಣದಿಂದಾಗಿ ಸಮಾಜದಲ್ಲಿ ಹಲವಾರು ಪಿಡುಕುಗಳನ್ನು ನಿವಾರಿಸಲು ಸಾಧ್ಯವಾಯಿತು. ಆದರೆ ಇಂದು ಜನರು ಉತ್ತಮ ವಿಚಾರಗಳನ್ನು ಪಕ್ಕಕ್ಕಿಟ್ಟು ಕೆಟ್ಟ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಿರುವುದು ಆಧುನಿಕ ಸಮಾeದ ದುರಂತ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಮಂಗಳೂರಿನ ಸಮಾಜಶಾಸ್ತ್ರ ಸಂಘದ ಸದಸ್ಯ ದತ್ತಾತ್ರೇಯ ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಯನ್ನು ಹೇಳಿದರು.
ಸಮಾಜಶಾಸ್ತ್ರ ಉಪನ್ಯಾಸಕಿ ವಿದ್ಯಾ ಎಸ್. ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.