ವಿವೇಕಾನಂದದಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ – ಭಾರತೀಯ ವೈದ್ಯಶಾಸ್ತ್ರಕ್ಕೆ ಮನ್ನಣೆ ದೊರಕಬೇಕು : ಪ್ರೊ.ಆರ್.ಕೆ.ಮುಟತ್ಕರ್
ಪುತ್ತೂರು: ಭಾರತದಲ್ಲಿ ಎರಡು ಆರೋಗ್ಯ ನೀತಿಯಿದೆ. ಆದರೆ ದೇಶವೊಂದರಲ್ಲಿ ಎರಡೆರಡು ನೀತಿಗಳಿರುವುದು ಸ್ವಾಗತಾರ್ಹವಲ್ಲ. ಈ ಹಿನ್ನಲೆಯಲ್ಲಿ ಅನೇಕ ಚರ್ಚೆಗಳು ನಡೆಯುತ್ತಿವೆ ಎಂದು ಮಹಾರಾಷ್ಟ್ರ ಅಸೋಸಿಯೇಷನ್ ಆಫ್ ಆಂಥ್ರಾಪಾಲೊಜಿಕಲ್ ಸೈನ್ಸ್ಸ್ನ(ಎಸ್ಐಎಂಎ) ಅಧ್ಯಕ್ಷ ಪ್ರೊ.ಆರ್.ಕೆ.ಮುಟತ್ಕರ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಮೈಸೂರಿನ ಸೊಸೈಟಿ ಫಾರ್ ಇಂಡಿಯನ್ ಮೆಡಿಕಲ್ ಆಂಥ್ರಾಪಾಲಜಿ, ವಿವೇಕಾನಂದ ಸಂಶೋಧನಾ ಕೇಂದ್ರ, ಕಾಲೇಜಿನ ಅರ್ಥಶಾಸ್ತ್ರ, ಜೀವಶಾಸ್ತ್ರ, ಸಸ್ಯಶಾಸ್ತ್ರ ವಿಭಾಗಗಳಲ್ಲದೆ ಅನ್ಯಾನ್ಯ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾದ ನಾಟಿ ವೈದ್ಯ ಶಾಸ್ತ್ರದ ಬಗೆಗಿನ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತದಲ್ಲಿ ಅಪಾರ ಪಾರಂಪರಿಕ ಜ್ಞಾನವಿದೆ. ಅದರಲ್ಲೂ ಔಷಧೀಯ ಸಂಗತಿಗಳ ಬಗೆಗೆ ತಿಳಿದ ಅನೇಕ ಮಂದಿಯಿದ್ದಾರೆ. ಇಲ್ಲಿನ ಪಾರಂಪರಿಕ ವೈದ್ಯಶಾಸ್ತ್ರವನ್ನು ಗೌರವದಿಂದ ಕಾಣುವ ದಿನಗಳನ್ನು ಎದುರು ನೋಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಭಾರತೀಯ ಆರೋಗ್ಯ ನೀತಿಯ ಮೇಲೆ ನಮ್ಮ ಮೂಲಜ್ಞಾನವನ್ನಾಧರಿಸಿದ ವೈದ್ಯಶಾಸ್ತ್ರ ಪರಿಣಾಮವನ್ನು ಬೀರುವ ರೀತಿಯಲ್ಲಿ ಪ್ರಸ್ತುತಪಡಿಸಲಾಗುವುದು ಎಂದು ಹೇಳಿದರು.
ವಿವೇಕಾನಂದ ಕಾಲೇಜಿನ ಸ್ಥಾಪಕ ಸಂಚಾಲಕ ಕೆ.ರಾಮ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ನಮ್ಮಲ್ಲಿ ಅನೇಕ ನಾಟಿ ಔಷಧಿಗಳಿವೆ. ಅನೇಕಾನೇಕ ರೋಗ ರುಜಿನಗಳಿಗೆ ಔಷಧವಾಗಬಲ್ಲ ಅನೇಕ ನಾಟಿ ಶಾಸ್ತ್ರಗಳಿವೆ. ಆದರೆ ಆಧುನಿಕ ಜಗತಿಗೆ ಅಡಿಯಿಡುವ ಹೊತ್ತಿಗೆ ನಾವು ಅಂತಹ ಶ್ರೇಷ್ಟ ವಿಚಾರಗಳನ್ನು ಮರೆಯುತ್ತಿದ್ದೇವೆ. ಆದ್ದರಿಂದ ನಮ್ಮಲ್ಲಿ ಔಷಧೀಯ ಸಸ್ಯಗಳು ಮಾಯವಾಗುತ್ತಿವೆ. ಈ ಹಿನ್ನಲೆಯಲ್ಲಿ ನಾವು ಜಾಗೃತರಾಗಿ ದೇಶಾದ್ಯಂತ ಜೀವ ಉಳಿಸಬಲ್ಲಂತಹ ಅನೇಕಾನೇಕ ಔಷಧೀಯ ಸಸ್ಯಗಳನ್ನು ಬೆಳೆಸಬೇಕು ಎಂದರು.
ಪಿ.ಎಸ್.ವೆಂಕಟ್ರಾಮ ದೈತೋಟ ರಚಿಸಿದ ಔಷಧೀಯ ಸಸ್ಯ ಸಂಪತ್ತು ಹಾಗೂ ವಿ.ವಿ.ಭಟ್ ಅನುವಾದಿಸಿದ ಅಡಿಕೆ ಔಷಧ ಎಂಬ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಋಗ್ವೇದದ ಕಾಲದಿಂದ ತೊಡಗಿ ಧನ್ವಂತರಿ ಕೃತಿಯವರೆಗೂ ಅಡಿಕೆಯ ಮಹತ್ವದ ಬಗೆಗೆ ವಿವರಿಸಲಾಗಿದೆ. ಅನೇಕ ಖಾಯಿಲೆಗಳಿಗೆ ಔಷಧಿಯಾಗಿ ಅಡಿಕೆಯನ್ನು ಬಳಸಲಾಗುತ್ತಿದೆ. ಮಾತ್ರವಲ್ಲದೆ ಆಧ್ಯಾತ್ಮಿಕ, ಸಾಂಸ್ಕೃತಿಕ ಬದುಕಿನಲ್ಲೂ ಅಡಿಕೆ ಒಂದು ಮಹತ್ವದ ಸಂಗತಿಯಾಗಿ ಬೆಳೆದು ಬಂದಿದೆ ಎಂಬುದನ್ನು ಗಮನಿಸಬೇಕು ಎಂದು ನುಡಿದರು.
ಅಡಿಕೆಯ ಬಗೆಗೆ ಮತ್ತಷ್ಟು ಸಂಶೋಧನೆಯಾಗಬೇಕು. ಯಾಕೆಂದರೆ ಪ್ರಸ್ತುತ ಸುಮಾರು ಆರು ಲಕ್ಷ ಎಕರೆಯಷ್ಟು ವಿಸ್ತೃತ ಜಾಗದಲ್ಲಿ ಸುಮಾರು ನಾಲ್ಕು ಲಕ್ಷ ಕೃಷಿಕರು ಅಡಿಕೆ ಬೆಳೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಅಡಿಕೆ ಒಂದು ಪ್ರಮುಖ ಬೆಳೆಯಾಗಿ ಈ ಮಣ್ಣಿನಲ್ಲಿ ಬೆಳೆದು ಬಂದಿದೆ ಎಂಬುದು ಉಲ್ಲೇಖಾರ್ಹ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಾಟಿ ಶಾಸ್ತ್ರದ ಬಗೆಗೆ ಕೃತಿ ರಚಿಸಿದ ಪಿ.ಎಸ್.ವೆಂಕಟ್ರಾಮ ದೈತೋಟ ಅವರಿಗೆ ಸ್ವಾಸ್ಥ್ಯ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಔಷಧೀಯ ಸಸ್ಯಸಂಪತ್ತು ಕೃತಿ ಪ್ರಕಟಣೆಯಲ್ಲಿ ಸಹಕರಿಸಿದ ಪ್ರೊ.ಶಂಕರ ಭಟ್ ಹಾಗೂ ಡಾ.ಸತ್ಯನಾರಾಯಣ ಭಟ್ ಅವರುಗಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಎಸ್ಐಎಂಎಯ ಮುಖ್ಯ ಕಾರ್ಯದರ್ಶಿ ಡಾ.ಎಚ್.ಕೆ.ಭಟ್, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ, ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಉಪಸ್ಥಿತರಿದ್ದರು.
ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ವಿಘ್ನೇಶ್ವರ ವರ್ಮುಡಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಸಂಶೋಧನಾ ಕೇಂದ್ರದ ಕಾರ್ಯಾಧ್ಯಕ್ಷ ವಿ.ವಿ.ಭಟ್ ವಿಚಾರ ಸಂಕಿರಣದ ವಸ್ತು-ವಿಷಯದ ಬಗೆಗೆ ಮಾಹಿತಿ ನೀಡಿದರು. ಎಸ್ಐಎಂಎಯ ಉಪಾಧ್ಯಕ್ಷ ಡಾ.ಎಸ್.ಬಿ.ಕೊನಲೆ ವಂದಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶ್ರೀಕೃಷ್ಣ ಗಣರಾಜ ಭಟ್ ಕಾರ್ಯಕ್ರಮ ನಿರ್ವಹಿಸಿದರು.