ವಿವೇಕಾನಂದದಲ್ಲಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ –
ಪುತ್ತೂರು: ಭಾರತವನ್ನು ಅರಿಯಬೇಕಾದರೆ ವಿವೇಕಾನಂದರನ್ನು ಅಧ್ಯಯನ ಮಾಡಬೇಕು ಹಾಗೂ ವಿವೇಕಾನಂದರಲ್ಲಿ ಎಲ್ಲವೂ ಸಕಾರಾತ್ಮಕತೆಯೇ ಇದೆ, ನಕಾರಾತ್ಮಕತೆಯಿಲ್ಲ ಎಂಬ ಮಾತು ಈ ಕಾರಣಕ್ಕಾಗಿಯೇ ಹುಟ್ಟಿಕೊಂಡಿದೆ ಎಂದರಲ್ಲದೆ ವಿವೇಕಾನಂದರ ಬಗೆಗೆ ನಿತ್ಯ ಓದುವುದರಿಂದ ಬದುಕು ಬದಲಾಗುತ್ತದೆ ಎಂದು ಪಶ್ಚಿಮ ಬಂಗಾಳದ ಬೇಲೂರು ಮಠ ರಾಮಕೃಷ್ಣ ಮಿಶನ್ ವಿವೇಕಾನಂದ ವಿಶ್ವವಿದ್ಯಾನಿಲಯದ ಕುಲಪತಿ ಸ್ವಾಮಿ ಆತ್ಮಪ್ರಿಯಾನಂದಜೀ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಪದವಿ ಹಾಗೂ ಪದವಿಪೂರ್ವಾ ಕಾಲೇಜಿನ ಸುವರ್ಣ ಮಹೋತ್ಸವ ಆಚರಣೆಯ ನಾಲ್ಕನೆಯ ದಿನವಾದ ಶನಿವಾರ ಧರ್ಮ ಶಿಕ್ಷಣ ಮತ್ತು ಯುವ ಜನಾಂಗದ ಬಗ್ಗೆ ಸ್ವಾಮಿ ವಿವೇಕಾನಂದರ ಚಿಂತನೆಗಳು ಎಂಬ ವಿಷಯದ ಬಗೆಗೆ ನಡೆದ ಯು.ಜಿ.ಸಿ. ಪ್ರಾಯೋಜಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಸೇವೆ,ಚಾರಿತ್ರ್ಯ ಹಾಗೂ ಪರಿಶುದ್ಧತೆಗೆ ವಿವೇಕಾನಂದರು ಕರೆ ನೀಡಿದವರು. ಅವರು ಭಾರತವನ್ನು ಅದ್ಭುತ ಹಾಗೂ ಪವಿತ್ರ ಪ್ರದೇಶವಾಗಿ ಕಂಡದ್ದಲ್ಲದೆ ಪ್ರಪಂಚದಲ್ಲಿ ಭಾರತದ ಪಾತ್ರ ಏನು ಎಂಬುದನ್ನು ಚಿಂತಿಸಿದವರು. ಸ್ವಾಮಿ ವಿವೇಕಾನಂದರು ಕೇವಲ ಸಾಮಾನ್ಯ ದೇಶಪ್ರೇಮಿಯಾಗಿರದೆ ಬಹು ವಿಸ್ತಾರವಾದ ಯೋಜನೆ-ಯೋಚನೆಗಳುಳ್ಳ ದೇಶಾರಾಧಕ ಆಗಿದ್ದರು. ಅವರನ್ನು ಕೇವಲ ಭಾರತಕ್ಕಷ್ಟೇ ಸೀಮಿತಗೊಳಿಸಲೂ ಸಾಧ್ಯವಿಲ್ಲ ಎಂದು ನುಡಿದರು.
ಅತಿಥಿಯಾಗಿ ಆಗಮಿಸಿದ್ದ ಮೈಸೂರಿನ ರಾಮಕೃಷ್ಣ ಆಶ್ರಮದ ಶ್ರೀ ಮುಕ್ತಿದಾನಂದಜೀ ಮಾತನಾಡಿ, ಸ್ವಾಮಿ ವಿವೇಕಾನಂದರನ್ನು ಅರ್ಥೈಸಿಕೊಳ್ಳದೆ, ಅವರ ಬಗೆಗೆ ಅರಿಯದೆ ಒಬ್ಬ ವ್ಯಕ್ತಿಯ ಬದುಕು ಪರಿಪೂರ್ಣತೆ ಕಂಡುಕೊಳ್ಳುವುದಕ್ಕೆ ಸಾಧ್ಯವಿಲ್ಲ. ವಿವೇಕಾನಂದರು ಕೇವಲ ಮೂರ್ತಿಯಾಗಿ ನಿಲ್ಲುವುದಕ್ಕಷ್ಟೇ ಸೀಮಿತವಲ್ಲ. ಬದುಕಿನ ವಿವಿಧ ಸ್ಥರವನ್ನು ಸೊಗಸಾಗಿಸುವ ಅದ್ಭುತ ಕಲೆಗಾರ. ಅವರೊಬ್ಬ ಮಹಾನ್ ಶಕ್ತಿ ಕೇಂದ್ರ ಎಂದರು.
ಆದಿ ಮಾನವನಿಂದ ತೊಡಗಿದಂತೆ ಉದ್ಭವಗೊಂಡ ಮಹಾನ್ ಜ್ಞಾನ ಸಾಗರವನ್ನು ಅರಗಿಸಿ ಅಗತ್ಯ ಜ್ಯಾನವನ್ನು ಪ್ರತ್ಯೇಕಿಸಿ ಇಂದಿನ ಜನಕ್ಕೆ ಬಳುವಳಿಯಾಗಿ ನೀಡಿದವರು ಸ್ವಾಮಿ ವಿವೇಕಾನಂದರು. ಪ್ರತಿಯೊಬ್ಬನೂ ತಾನು ಯಾರು ಎಂಬುದನ್ನು ಅರಿಯುವುದಕ್ಕೆ ವಿವೇಕಾನಂದರ ಚಿಂತನೆಗಳನ್ನು ತನ್ನದಾಗಿಸಬೇಕು. ಅವರ ಸಂದೇಶವನ್ನು ತಿಳಿಯಬೇಕು. ಆಗ ವಿಶ್ವಜ್ಞಾನದ ಸಾರ ದೊರಕುತ್ತದೆ. ಅವರ ವಿಚಾರಧಾರೆಗಳು ಹಿಂದಿನ ಮತ್ತು ಇಂದಿನ ಜ್ಞಾನದ ಸಂಲಗ್ನತೆ ಪ್ರಾಪ್ತವಾಗುವುದಕ್ಕೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮತ್ತೋರ್ವ ಅತಿಥಿ ಮಂಗಳೂರಿನ ರಾಮಕೃಷ್ಣ ಆಶ್ರಮದ ಶ್ರೀ ಜಿತಕಾಮಾನಂದಜೀ ಮಾತನಾಡಿ ವಿದ್ಯಾಭ್ಯಾಸ ಇಂದು ಭಾರತದಾದ್ಯಂತ ಪಸರಿಸುತ್ತಿದ್ದರೂ ದೇಶದ ಸಮಸ್ಯೆಗಳು ಕಡಿಮೆಯಾಗಬೆ ಉಲ್ಬಣಗೊಳ್ಳುತ್ತಿವೆ. ಆದ್ದರಿಂದ ನಾವು ನಾವು ಅಧ್ಯಯನ ಮಾಡಿದ ವಿದ್ಯಾಭ್ಯಾಸದ ಬಗೆಗೆ ಸಿಂಹಾವಲೋಕನಗೈಯಬೇಕಿದೆ. ಸ್ವಾಮಿ ವಿವೇಕಾನಂದರು ಹೇಳಿದ ಶಿಕ್ಷಣವನ್ನು ನಾವಿಂದು ಪಡೆಯುತ್ತಿಲ್ಲ. ಆದ್ದರಿಂದಲೇ ವಿದ್ಯಾಭ್ಯಾಸ ನಮ್ಮ ಬದುಕಿಗೆ ಪೂರಕವಾಗಿ ವರ್ತಿಸುತ್ತಿಲ್ಲ ಎಂದರು.
ವಿವೇಕಾನಂದರು ಶೀಲ ನಿರ್ಮಾಣ ಮಾಡುವಂತಹ ವಿದ್ಯಾಭ್ಯಾಸದ ಅಗತ್ಯತೆಯನ್ನು ಎತ್ತಿಹಿಡಿದವರು. ಆದರೆ ಆ ಶಿಕ್ಷಣ ಇಂದು ದೊರಕದಿರುವುದೇ ನಮ್ಮೆಲ್ಲಾ ದುಸ್ಥಿತಿಗೆ ಕಾರಣ. ವಿಚಾರವೊಂದರ ಹಿಂದೆ ಬಿದ್ದು ಅದನ್ನು ತಮ್ಮದಾಗಿಸುವ ಇಚ್ಚೆ ನಮ್ಮಲ್ಲಿರಬೇಕು. ಅದಕ್ಕಾಗಿ ಶೀಲ ಸಂವರ್ಧನಾ ಶಿಕ್ಷಣದ ಮೂಲಕ ಸಾಧ್ಯ ಎಂದರಲ್ಲದೆ ಉತ್ತಮ ವಿಚಾರಧಾರೆ ನಮ್ಮಲ್ಲಿ ಹರಿಯಬೇಕು, ಚಿಂತನೆ ಉತ್ತಮವಾಗಿರಬೇಕು. ಆಗ ಮಾತ್ರ ಜೀವನದಲ್ಲಿ ಉತ್ತುಂಗಕ್ಕೇರಲು ಸಾಧ್ಯ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಹಿರಿಯ ವಿದ್ಯಾರ್ಥಿ, ಭಾರತ ಸರ್ಕಾರದ ನಿವೃತ್ತ ಕಾರ್ಯದರ್ಶಿ ವಿ.ವಿ.ಭಟ್ ಮಾತನಾಡಿ ಸಂಸ್ಕೃತಿ, ಸಂಸ್ಕೃತ ಹಾಗೂ ಸಂಸ್ಕಾರಭರಿತ ಶಿಕ್ಷಣದ ಅಗತ್ಯವಿದೆ. ನಮ್ಮ ಎಲ್ಲಾ ವಿಚಾರ, ನೈತಿಕತೆಗಳೂ ಸಂಸ್ಕೃತದಲ್ಲಿ ಉಕ್ತವಾಗಿವೆ. ಇದನ್ನು ಅರಿಯದೆ ಭಾರತೀಯ ನೆಲೆಗಟ್ಟಿನ ಶಿಕ್ಷಣ ದೊರಕುವುದಕ್ಕೆ ಸಾಧ್ಯವಿಲ್ಲ. ತಿಳಿದವರು ಮತ್ತು ತಿಳಿಯದವರೆಂಬ ಎರಡು ವರ್ಗಗಳು ಅನಾದಿ ಕಾಲದಿಂದಲೂ ಬೆಳೆದು ಬಂದಿದೆ. ಇದು ಸರ್ವಜ್ಞಾನ ಸಂಗಮಕ್ಕೆ ಅಡ್ಡಿಯಾಗುತ್ತಿದೆ ಎಂದರು.
ವೇದಗಳಲ್ಲಿರುವ ವೈಜ್ಞಾನಿಕ ಸಂಗತಿಗಳನ್ನು ಒಪ್ಪುವ ಹಾಗೂ ಅಧ್ಯಯನ ನಡೆಸುವ ಮನೋಭಾವ ನಮ್ಮಲ್ಲಿರಬೇಕು. ಕೇವಲ ಖಂಡಿಸುವ ಪ್ರವೃತ್ತಿಯನ್ನಷ್ಟೇ ಬೆಳೆಸಿಕೊಳ್ಳಬಾರದು. ವಿಚಾರಗಳನ್ನು ಮಂಡಿಸುವವರ ಮಾತನ್ನೂ ಕೇಳಿಸಿಕೊಳ್ಳುವ ತಾಳ್ಮೆ ಇರಬೇಕು. ಅನೇಕಾನೇಕ ವಿಜ್ಞಾನ ಸಂಬಂಧಿ ವಿಚಾರಗಳನ್ನು ವೇದಗಳಲ್ಲಿ ಕಾಣುವುದಕ್ಕೆ ಸಾಧ್ಯವಿದೆ ಎಂದಲ್ಲದೆ ನಮ್ಮ ಪುರಾತನ ಜ್ಞಾನ ಸಂಸ್ಕೃತಿಯ ಬಗೆಗೆ ಹೆಚ್ಚಿನ ಅಧ್ಯಯನ ನಡೆಸಬೇಕು. ಟೀಕೆಗಳಿಗೆ ಜಗ್ಗಿ ಕೀಳರಿಮೆ ಬೆಳೆಸಿಕೊಳ್ಳಬೇಕಿಲ್ಲ ಎಂದು ಅಭಿಪ್ರಾಯಿಸಿದರು.
ಈ ಸಂದರ್ಭದಲ್ಲಿ ವಿವಿಧ ಪ್ರತಿನಿಧಿಗಳು ಪ್ರಬಂಧ ಮಂಡಿಸಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಅಖಿಲಾ, ತನ್ವಿ, ಸುಶ್ಮಿತಾ, ಶಮಾ ಪ್ರಣಮ್ಯ ಹಾಗೂ ವಾಣಿಶ್ರೀ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಸ್ವಾಗತಿಸಿದರು. ಇತಿಹಾಸ ಪ್ರಾಧ್ಯಾಪಕ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಪ್ರಸ್ತಾವನೆಗೈದರು. ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಕೃಷ್ಣ ಕಾರಂತ್ ವಂದಿಸಿದರು. ಉಪನ್ಯಾಸಕರಾದ ಡಾ.ಶ್ರೀಶ ಕುಮಾರ್ ಎಂ.ಕೆ ಹಾಗೂ ಹರಿಣಿ ಕಾರ್ಯಕ್ರಮವನ್ನು ಸಂಯೋಜಿಸಿದರು.