ವಿವೇಕಾನಂದ ಕಾಲೇಜಿನ ಪ್ರಾಚಾರ್ಯರಾಗಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್
ಪುತ್ತೂರು: ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ನೂತನ ಪ್ರಾಂಶುಪಾಲರಾಗಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಂಗಳವಾರ ಸಂಜೆ ಅಧಿಕಾರ ವಹಿಸಿಕೊಂಡರು. ಮೂಲತಃ ಕೊಣಾಜೆಯವರಾದ ಇವರು ಜನಿಸಿದ್ದು ೨೫.೦೧.೧೯೬೦ರಂದು. ೧೯೮೬ ರಲ್ಲಿ ವಿವೇಕಾನಂದ ಕಾಲೇಜಿನ ಇತಿಹಾಸ ಉಪನ್ಯಾಸಕರಾಗಿ ಕರ್ತವ್ಯ ಆರಂಭಿಸಿದರು. ಅದಕ್ಕೂ ಮೊದಲು ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲೂ ಎರಡು ವರ್ಷಗಳ ಅವಧಿಗೆ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.
ಕೊಣಾಜೆಯ ಯು.ಬಿ.ಎಂ.ಎಸ್ ಪ್ರಾಥಮಿಕ ಶಾಲೆಯಲ್ಲಿ ಆರಂಭಿಕ ಶಿಕ್ಷಣ, ಈಗಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಬಿ.ಎ ಪದವಿ ಹಾಗೂ ಮಂಳೂರು ವಿಶ್ವವಿದ್ಯಾನಿಲಯದ ಮೊತ್ತಮೊದಲನೆಯ ಬ್ಯಾಚ್‌ನ ವಿದ್ಯಾರ್ಥಿಯಾಗಿ ಇತಿಹಾಸದಲ್ಲಿ ಎಂ.ಎ ಪದವಿಯನ್ನೂ ಪಡೆದ ಇವರಿಗೆ ಸಂಶೋಧನೆ, ಬೋಧನೆಯೆಂದರೆ ಅಪಾರ ಒಲವು. ಡಾ.ಸುರೇಂದ್ರ ರಾವ್ ಮಾರ್ಗದರ್ಶನದಲ್ಲಿ ಬಾಸೆಲ್ ಮಿಶನ್ ಇನ್ ಸೌತ್ ಕೆನರಾ ಎನ್ನುವ ವಿಚಾರವಾಗಿ ಪ್ರೌಢ ಪ್ರಬಂಧವನ್ನು ಮಂಡಿಸಿ ೧೯೮೮ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪಿ.ಎಚ್.ಡಿ ಪದವಿಯನ್ನೂ ಗಳಿಸಿದ ಇವರು ಬರವಣಿಗೆಯನ್ನು ತಮ್ಮ ವೃತ್ತಿಯ ಭಾಗವಾಗಿ ಕಂಡವರು.
ವಿಟ್ಲದ ಕ್ರಾಂತಿ, ಪುತ್ತೂರು ತಾಲೂಕು ಇತಿಹಾಸ ದರ್ಪಣ, ಕಂದಾಯ ಶಬ್ದಗಳ ಪದಕೋಶ, ಮಂಗಳೂರು ಹಂಚು ಹೀಗೆ ಈವರೆಗೆ ಸುಮಾರು ೧೭ ಕೃತಿಗಳನ್ನು ರಚಿಸಿದ್ದಾರೆ. ಅದರಲ್ಲೂ ಇವರ ವಾರ್‍ಸ್ – ಪ್ರಾಕ್ಸೀ ವಾರ್‍ಸ್ ಅಂಡ್ ಟೆರರಿಸಂ – ಪೋಸ್ಟ್ ಇಚಿಡಿಪೆಂಡೆಂಟ್ ಇಂಡಿಯಾ ಕೃತಿ ಜಾಗತಿಕವಾಗಿ ಮನ್ನಣೆ ಪಡೆದು ಪ್ರಪಂಚದ ಐವತ್ತಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಪರಾಮರ್ಶನ ಗ್ರಂಥವಾಗಿ ಹಾಗೂ ನೂರೆಪ್ಪತ್ತಕ್ಕೂ ಮಿಕ್ಕ ರಾಷ್ಟ್ರಗಳ ಆನ್‌ಲೈನ್ ಗ್ರಂಥಾಲಯದಲ್ಲೂ ಪರಾಮರ್ಶನ ಗ್ರಂಥವಾಗಿ ಸ್ವೀಕರಿಸಲ್ಪಟ್ಟಿದೆ.
ಈ ಹಿಂದೆ ಆಂಧ್ರದ ತಿರುಪತಿ ವೆಂಕಟೇಶ್ವರ ವಿಶ್ವವಿದ್ಯಾನಿಲಯ ಹಾಗೂ ಪ್ರಸ್ತುತ ಹಂಪಿ ವಿಶ್ವವಿದ್ಯಾನಿಲಯದ ಸಂಶೋಧನಾ ಮಾರ್ಗದರ್ಶಕರಾಗಿದ್ದಾರೆ. ಪಿ.ಎಚ್.ಡಿ. ಹಾಗೂ ಎಂ.ಫಿಲ್ ಪದವಿಗೂ ಮಾರ್ಗದರ್ಶನ ನೀಡುತ್ತಿರುವ ಇವರು ಕೊಣಾಜೆಯ ಡಿ.ಎಸ್.ಕೋಟ್ಯಾನ್ ಹಾಗೂ ಲೇಡಿ ಲಿಲ್ಲಿ ಇವರುಗಳ ಪುತ್ರ.