VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದ ಕಾಲೇಜಿನಲ್ಲಿ ನಿರಂಜನ ಪ್ರಶಸ್ತಿ ಪ್ರದಾನ- ಪ್ರಶಸ್ತಿಯಿಂದ ಅಪೂರ್ವ ಭಾವನೆ ಮೂಡಿದೆ : ಸುಬ್ರಾಯ ಚೊಕ್ಕಾಡಿ

ಪುತ್ತೂರು: ನಿರಂಜನರ ಕೃತಿಯಾದ ಬನಶಂಕರಿ ಹಾಗೂ ಸೌಭಾಗ್ಯವನ್ನು ಹಾಗೂ ಮತ್ತೂ ಅನೇಕ ಬರಹಗಳನ್ನು ಓದುತ್ತಾ ಬೆರಗಾದವನು ತಾನು. ಹಾಗಾಗಿಯೇ ಅವರನ್ನು ನೋಡುವ ತವಕವೂ ಅಂತರಂಗದಲ್ಲಿ ಮೂಡಲಾರಂಭಿಸಿತು. ಹೀಗೆ ಮುಂದುವರಿದ ಆಸಕ್ತಿ ನಿರಂಜನರೊಂದಿಗೆ ಒಡನಾಡುವ ಅವಕಾಶವನ್ನು ಕಲ್ಪಿಸಿತು. ಇದೀಗ ಅವರ ಹೆಸರಿನಲ್ಲೇ ಕೊಡಮಾಡುವ ಪ್ರಶಸ್ತಿಗೆ ತಾನು ಭಾಜನನಾಗಿರುವುದು ಇನ್ನಿಲ್ಲದ ಭಾವನೆಯನ್ನು ಮೂಡಿಸಿದೆ ಎಂದು ಹಿರಿಯ ಕವಿ ಸುಬ್ರಾಯ ಚೊಕ್ಕಾಡಿ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಕನ್ನಡ ಸಂಘ ಹಾಗೂ ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ವಾರ್ಷಿಕವಾಗಿ ಕೊಡಮಾಡುವ ನಿರಂಜನ ಪ್ರಶಸ್ತಿಯನ್ನು ಸ್ವೀಕರಿಸಿ ಮಂಗಳವಾರ ಮಾತನಾಡಿದರು.

News Photo - Niranjana Prashasthi

ಯಾವುದೇ ಚಿಂತನೆ, ಆಲೋಚನೆಗಳ ಮೂಲವನ್ನು ಗಮನಿಸಿದರೆ ಅಲ್ಲಿರುವುದು ಸಿದ್ಧಾಂತದ ಕಾರಣದ ಬರವಣಿಗೆಯಲ್ಲ. ಬದಲಾಗಿ ಬರವಣಿಗೆಯಿಂದ ಸಿದ್ಧಾಂತವೊಂದು ಸೃಷ್ಟಿಗೊಳ್ಳುತ್ತದೆ. ಹಾಗಾಗಿ ಯಾವುದೋ ಸಿದ್ಧಾಂತಕ್ಕೆ ಕಟ್ಟುಬಿದ್ದು ಬರೆಯುವುದರಲ್ಲಿ ನನಗೆ ನಂಬಿಕೆಯಿಲ್ಲ. ಈ ಹಿನ್ನಲೆಯಲ್ಲೇ ತನಗೂ ನಿರಂಜನರಿಗೂ ಸಾಕಷ್ಟು ವಾಗ್ವಾದಗಳಾದದ್ದೂ ಇದೆ. ಆದರೆ ಅದರಾಚೆಗೂ ಅವರೊಂದಿಗೆ ಅತ್ಯುತ್ತಮವಾದ ಸಂಬಂಧ ಕೊನೆಯವರೆಗೂ ಕಾಯ್ದುಕೊಂಡು ಬಂದಿದ್ದೇನೆ. ವಾದದ ನಂತರವೂ ಅತ್ಯುತ್ತಮ ಸ್ನೇಹ ನಮ್ಮದಾಗಿತ್ತು. ಹಾಗಾಗಿಯೇ ನಿರಂಜನ ಪ್ರಶಸ್ತಿ ರೋಮಾಂಚನ ತರಿಸುತ್ತದೆ ಎಂದು ಅಭಿಪ್ರಾಯಿಸಿದರು.

ಅಭಿನಂದನಾ ಭಾಷಣ ಮಾಡಿದ ಕಾಸರಗೋಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು ಮಾತನಾಡಿ ಸಾಹಿತ್ಯ ಕೆಲವೊಮ್ಮೆ ಕಲೆಯಾಗಿಯೂ, ಮತ್ತೊಮ್ಮೆ ಕಲೆಗೆ ಹೊರತಾಗಿಯೂ ಗೋಚರಿಸುತ್ತದೆ. ಅಂತೆಯೇ ಸಾಹಿತ್ಯ ವಿವಿಧ ಕಾಲಘಟ್ಟದೊಂದಿಗೆ ಮಿಳಿತಗೊಂಡು ಧರ್ಮದ ವಕ್ತಾರನಾಗಿಯೂ, ಸಮಾಜದ ಧ್ವನಿಯಾಗಿಯೂ ಮೂಡಿಬರುತ್ತದೆ. ಹೀಗೆ ಸಾಹಿತ್ಯವನ್ನು ವಿವಿಧ ನೆಲೆಗಟ್ಟಿನಲ್ಲಿ ಪ್ರಸ್ತುತಪಡಿಸಿದ, ಕಲೆಯಾಗಿ ಮಾರ್ಪಡಿಸಿದ ಕವಿ ಸುಬ್ರಾಯ ಚೊಕ್ಕಾಡಿಯವರು. ಅವರ ಕಾವ್ಯದ ಆಳದಲ್ಲಿ ನೋವು ಢಾಳಾಗಿ ಕಾಣಿಸುತ್ತದೆ. ಅಂತೆಯೇ ಒಂದು ತೆರನಾದ ಧ್ಯಾನಸ್ಥ ಸ್ಥಿತಿಯೂ ಅವರ ಕಾವ್ಯದಲ್ಲಿ ಕಾಣಬಹುದು ಎಂದರು.

ನವ್ಯದ ಕಾಲಘಟ್ಟದಲ್ಲಿ ಬೆಳೆದ ಕವಿಯಾಗಿಯೂ ಅದಕ್ಕಿಂತ ಭಿನ್ನ ಹಾದಿಯನ್ನು ಅನುಸರಿಸಿಮೊತ್ತಮೊದಲ ನವ್ಯೋತ್ತರ ಕವಿಯಾಗಿ ಜನಮಾನಸದಲ್ಲಿ ಸ್ಥಾಯಿಯಾಗಿ ಉಳಿದವರು ಚೊಕ್ಕಾಡಿ. ನವ್ಯ ಪರಂಪರೆಯಲ್ಲಿ ಆದೇಶ, ಉಪದೇಶವನ್ನು ಓದುಗನಿಗೆ ಕವಿ ನೀಡುವುದು ಸಾಮಾನ್ಯ ಸಂಗತಿ. ಆದರೆ ಚೊಕ್ಕಾಡಿಯವರ ಕಾವ್ಯದಲ್ಲೆಲ್ಲೂ ಉಪದೇಶಾತ್ಮಕತೆ ಇಲ್ಲ. ಹಾಗಾಗಿಯೇ ಚೊಕ್ಕಾಡಿಯವರು ವಿಶೇಷವಾಗಿ ಕಾಣಿಸುತ್ತಾರೆ. ವಾಸ್ತವತೆಯ ನೆಲೆಗಟ್ಟಿನಲ್ಲಿ ಕಾವ್ಯಕೃಷಿ ನಡೆಸಿದವರು ಚೊಕ್ಕಾಡಿ ಎಂದು ನುಡಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ.ಎಂ.ಕೃಷ್ಣ ಭಟ್ ಮಾತನಾಡಿ, ಕೃಷಿ ಮತ್ತು ಸಾಹಿತ್ಯಕ್ಕೆ ಈ ದೇಶದಲ್ಲಿ ಬಹುದೊಡ್ಡ ಇತಿಹಾಸವಿದೆ. ಅವೆರಡೂ ಅವರಷ್ಟಕ್ಕೇ ನಿಸರ್ಗ ಸಹಜವಾಗಿ ಬೆಳೆದರೆ ಮನಸ್ಸಿಗೆ ಮುದ ನೀಡುತ್ತವೆ. ಆದರೆ ಯಾವಾಗ ಪಟ್ಟಭದ್ರ ಹಿತಾಸಕ್ತಿಗಳು ಈ ಎರಡೂ ಕ್ಷೇತ್ರಗಳಿಗೆ ಅಡಿಯಿಡಲಾರಂಭಿಸಿದವೋ ಆಗ ಅವೆರಡರ ಬಗೆಗೆ ನಂಬಿಕೆ ಕಡಿಮೆಯಾಗತೊಡಗಿತು. ಆಧುನಿಕತೆಯ ಭರಾಟೆಯಲ್ಲಿ ಕೃಷಿ ಸಹಜತೆಯನ್ನು ಕಳೆದುಕೊಂಡರೆ, ಸಿದ್ಧಾಂತದ ಕಾರಣಕ್ಕಾಗಿ ಸಾಹಿತ್ಯ ಶಿಥಿಲವಾಗಲಾರಂಭಿಸಿತು. ಹಾಗಾಗಿ ಸಾಹಿತ್ಯ ಕ್ಷೇತ್ರ ಚೌಕಟ್ಟಿನಲ್ಲಿ ಬಂಧಿಯಾಗದೆ ಅದರಿಂದ ಹೊರಬಂದು ಬೆಳೆಯಬೇಕು ಎಂದು ನುಡಿದರು.

ಅಧ್ಯಕ್ಷತೆ ವಹಿಸಿದ್ದ ಶಿವರಾಮ ಕಾರಂತ ಅಧ್ಯಯನ ಕೇಂದ್ರದ ಕಾರ್ಯಾಧ್ಯಕ್ಷ ಡಾ.ತಾಳ್ತಜೆ ವಸಂತ ಕುಮಾರ್ ಮಾತನಾಡಿ ಗೇಯತೆಯ ಗುಣ ಇರುವ ಕವಿತೆಗಳು ಮಾತ್ರ ಜನಮಾನಸವನ್ನು ತಲುಪುತ್ತವೆ ಎಂಬ ದೃಢನಂಬಿಕೆ ಹೊಂದಿದವರು ಸುಬ್ರಾಯ ಚೊಕ್ಕಾಡಿ. ಒಂದು ಭಾವುಕ ನೆಲೆಗೆ ಜನರನ್ನು ಒಯ್ಯುವ ಯೋಗ್ಯತೆ ಅವರಿಗಿದೆ. ಈ ಪ್ರದೇಶದ ಸಾಹಿತ್ತಿಕ, ಸಾಂಸ್ಕೃತಿಕ ಸಂಗತಿಗಳಿಗೆ ಚೊಕ್ಕಾಡಿಯವರು ಸಾಕ್ಷಿಯಾಗಿದ್ದಾರೆ ಮತ್ತು ಕಾರಣರೂ ಆಗಿದ್ದಾರೆ ಎಂದು ನುಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಸ್ಥಾಪಕ ಸಂಚಾಲಕ ಕೆ.ರಾಮ ಭಟ್, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ, ವಿಶ್ರಾಂತ ಪ್ರಾಚಾರ್ಯರುಗಳಾದ ಪ್ರೊ.ಎ.ವಿ.ನಾರಾಯಣ, ಡಾ.ಬಿ.ಶ್ರೀಧರ ಭಟ್, ವಿಶ್ರಾಂತ ಪ್ರಾಧ್ಯಾಪಕ ಪ್ರೊ.ವಿ.ಬಿ.ಅರ್ತಿಕಜೆ, ಪುತ್ತೂರಿನ ಸಾಹಿತ್ಯ ಪರಿಷತ್ ಅಧ್ಯಕ್ಷ ಐತ್ತಪ್ಪ ನಾಯ್ಕ್, ಹಿರಿಯ ಪತ್ರಕರ್ತ ಬಿ.ಟಿ.ರಂಜನ್ ಮತ್ತಿತರರು ಹಾಜರಿದ್ದರು.

ವಿದ್ಯಾರ್ಥಿನಿಯೃಆದ ಪ್ರಥಮಾ ಉಪಾಧ್ಯಾಯ ಹಾಗೂ ಅಖಿಲಾ ಪಜಿಮಣ್ಣು ಚೊಕ್ಕಾಡಿಯವರ ಕಾವ್ಯಗಳನ್ನು ಹಾಡಿದರು. ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ಕನ್ನಡ ವಿಭಾಗ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ ಪ್ರಸ್ಥಾವನೆಗೈದರು. ಕನ್ನಡ ಉಪನ್ಯಾಸಕ ಡಾ.ರೋಹಿಣಾಕ್ಷ ಶಿರ್ಲಾಲು ವಂದಿಸಿದರು. ಕನ್ನಡ ಉಪನ್ಯಾಸಕಿ ಡಾ.ಗೀತಾ ಕುಮಾರಿ ಕಾರ್ಯಕ್ರಮ ನಿರ್ವಹಿಸಿದರು.