VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದದಲ್ಲಿ ನಿರಂಜನ ಪ್ರಶಸ್ತಿ ಪ್ರದಾನ ಸಮಾರಂಭ

ಪುತ್ತೂರು: ಮಹನೀಯರ ಬದುಕಿನ ಬಗೆಗಿನ ಅಧ್ಯಯನ, ಅವರು ಗೈದ ಕಾರ್ಯಗಳ ಬಗೆಗಿನ ತಿಳುವಳಿಕೆಯಿಂದ ನಮ್ಮ ವ್ಯಕ್ತಿತ್ವ ಬೆಳಗುತ್ತದೆ. ವ್ಯಕ್ತಿಯೊಬ್ಬ ದೊಡ್ಡವನಾಗುವುದು ಆತ ಎಷ್ಟು ತಿಳಿದಿದ್ದಾನೆ ಎನ್ನುವುದರ ಆಧಾರದ ಮೇಲೆ. ಆದ್ದರಿಂದ ಉಚ್ಛತೆಯ ಬಗೆಗಿನ ಅಧ್ಯಯನ ನಿರಂತರವಾಗಿ ಸಾಗಬೇಕು. ವಿದ್ಯಾರ್ಥಿಗಳು ಕೇವಲ ಪಾಠಕ್ಕೆ ಮಾತ್ರ ಸೀಮಿತರಾಗದೆ ಪ್ರಾಪಂಚಿಕ ಜ್ಞಾನಧಾರೆಗೆ ಮೈಯೊಡ್ಡಬೇಕು ಎಂದು ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಶಿವರಾಮ ಕಾರಂತ ಅಧ್ಯಯನ ಕೇಂದ್ರ ಹಾಗೂ ಕನ್ನಡ ಸಂಘದ ಆಶ್ರಯದಲ್ಲಿ ಕೊಡಮಾಡುವ ನಿರಂಜನ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.

News Photo - Niranjana Prashasthi 1
ಕ್ರಿಕೆಟ್ ಆಟದ ಬಗೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು ಕ್ರಿಕೆಟ್ ಬ್ರಿಟಿಷರ ಪಳೆಯುಳಿಕೆ. ಯಾವ ರಾಷ್ಟ್ರಗಳಲ್ಲಿ ಬ್ರಿಟಿಷ್ ಆಡಳಿತವಿತ್ತೋ ಅಲ್ಲೆಲ್ಲಾ ಕ್ರಿಕೆಟ್ ಉಳಿದುಕೊಂಡಿದೆ. ಹೆಣ್ಣು ಮಕ್ಕಳನ್ನು ಅಶ್ಲೀಲವಾಗಿ ತೋರಿಸುವುದೂ ಕ್ರಿಕೆಟ್ನ ಭಾಗವಾಗಿದೆ. ಇಂತಹ ಆಟವನ್ನು ಪ್ರೋತ್ಸಾಹಿಸುತ್ತಾ ಅವಿವೇಕಿಗಳಾಗಬಾರದು. ಹಾಕಿ, ಫುಟ್ಬಾಲ್ನಂತಹ ವ್ಯಕ್ತಿತ್ವ ವಿಕಸಿಸಬಹುದಾದ ಅನೇಕ ಕ್ರೀಡೆಗಳಿದೆ. ಮತ್ತು ಅವುಗಳಲ್ಲಿ ನಿಜವಾದ ಆಟ ಇದೆ. ಆದರೆ ಕ್ರಿಕೆಟ್ನಲ್ಲಿ ಆಟಕ್ಕಿಂತ ಕೂಟವೇ ಹೆಚ್ಚು ಕಾಣಿಸುತ್ತದೆ ಎಂದರು.
ನಮ್ಮ ಹಿರಿಯ ಸಾಹಿತಿಗಳು, ಸಮಾಜ ಸುಧಾರಕರು ಈ ಸಮಾಜದ ಅಭಿವೃದ್ಧಿಗಾಗಿ ಮಾಡಿದ ತ್ಯಾಗ ಅಮೋಘವಾದದ್ದು. ಪಟ್ಟ ಶ್ರಮ, ಹರಿಸಿದ ಬೆವರು ಸ್ಮರಣೀಯವಾದದ್ದು. ಅಂತಹ ಸುಮಾರು ೧೩ ಶ್ರೇಷ್ಟರ ಶತಮಾನೋತ್ಸವವನ್ನು ಆಚರಿಸುವುದಕ್ಕೆ ತನಗೆ ನೇತೃತ್ವ ಲಭಿಸಿದ್ದು ಜೀವನದ ಸ್ಮರಣೀಯ ಸಂಗತಿ. ಆದರೆ ಆ ತೆರನಾಗಿ ಲಭಿಸಿದ ನೇತೃತ್ವ ಅಪಾರ ಜ್ಞಾನವನ್ನೂ ಒದಗಿಸಿತು ಎಂದು ನುಡಿದರು.
ಮನುಷ್ಯ ಜಾತಿ ತಾನೊಂದೇ ವಲಂ, ಆನೋ ಭದ್ರಾಃ ಕೃತವೋ ಯಂತು ವಿಶ್ವತಃ ಎನ್ನುವ ಮನೋಭಾವವನ್ನು ಹೊಂದಿದ ರಾಷ್ಟ್ರ ನಮ್ಮದು. ಈ ನಮ್ಮ ತನವನ್ನು ಉಳಿಸಿ ಬೆಳೆಸುವ ಕಾಯಕದಲ್ಲಿ ಯುವ ಸಮೂಹ ನಿರತವಾಗಬೇಕು ಎಂದು ಕರೆನೀಡಿದರಲ್ಲದೆ ಗಾಂಧೀಜಿ, ಸುಭಾಷ್ಚಂದ್ರ ಭೋಸ್ರಂತಹವರು ಬಾಳಿ ಬದುಕಿನ ನಾಡಿನಲ್ಲಿ ನೈತಿಕತೆಯ ಅಧಃಪತನವನ್ನು ಕಾಣುವಾಗ ಅಳು ಬರುತ್ತದೆ ಎಂದು ಬೇಸರಿಸಿದರು.
ಅಭಿನಂದನಾ ಭಾಷಣ ಮಾಡಿದ ಬಂಟ್ವಾಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಅಜಕ್ಕಳ ಗಿರೀಶ್ ಭಟ್ ಮಾತನಾಡಿ ೧೯೨೬ರಲ್ಲಿ ಜನಿಸಿದ ಏರ್ಯ ಲಕ್ಷ್ಮೀನಾರಾಯಣ ಆಳ್ವರು ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರದ ಭಾರತದ ಬಗೆಗೆ ಅಧಿಕೃತವಾಗಿ ಹೇಳಬಲ್ಲವರು. ಗಾಂಧೀಜಿಯವರ ಪ್ರಭಾವಕ್ಕೆ ಅಪಾರವಾಗಿ ಒಳಗಾದವರು. ಸುಮಾರು ಏಳು ದಶಕಗಳ ಹಿಂದಿನ ಸಮಾಜದಲ್ಲಿಯೇ ಹರಿಜನರ ಅಭಿವೃದ್ಧಿಗಾಗಿ ಶ್ರಮಿಸಿದವರು. ಇದೇ ಕಾರಣಕ್ಕಾಗಿ ಕೆಲವರು ಅವರನ್ನು ಹರಿಜನ ಆಳ್ವ ಎಂದೂ ಕರೆಯುತ್ತಿದ್ದರು. ಸಾಹಿತ್ಯ ಮಾತ್ರವಲ್ಲದೆ ಅನೇಕ ಸಮಾಜ ಸುಧಾರಕ ಕೈಂಕರ್ಯಗಳಲ್ಲಿ ತೊಡಗಿಕೊಂಡವರು ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಅಧ್ಯಯನ ಕೇಂದ್ರದ ಕಾರ್ಯಾಧ್ಯಕ್ಷ ಡಾ.ತಾಳ್ತಜೆ ವಸಂತ ಕುಮಾರ ಮಾತನಾಡಿ ಇಂದಿನ ಸಾಮಾಜಿಕ ಸನ್ನಿವೇಶ ಹಿಂದಿನ ಕಾಲಕ್ಕಿಂತ ಎಷ್ಟೋ ಭಿನ್ನವಾಗಿರುವುದು ಮತ್ತು ಕಳಪೆಯಾಗಿರುವುದು ದುರದೃಷ್ಟ. ಪಂಜೆಯವರನ್ನು ಪಂಚೆಯವರೆಂದು ಕರೆಯುವ ರಾಜಕಾರಣಿಗಳಿದ್ದಾರೆ. ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದ ಪಾರ್ತಿಸುಬ್ಬನ ಬಗೆಗೆ ತಿಳಿಯದ ಸಂಸ್ಕೃತಿ ಇಲಾಖೆಯವರಿದ್ದಾರೆ. ಬೇಂದ್ರೆಯವರು ಸ್ವರ್ಗಸ್ಥರಾಗಿರುವುದೇ ತಿಳಿಯದ ನೇತಾರರಿದ್ದಾರೆ. ಇದು ದುರಂತ. ಆದರೆ ವಿದ್ಯಾರ್ಥಿಗಳು ಇವೆಲ್ಲವನ್ನೂ ಮೀರಿ ಬೆಳೆಯಬೇಕು ಎಂದು ಕರೆನೀಡಿದರು.
ವೇದಿಕೆಯಲ್ಲಿ ಅಧ್ಯಯನ ಕೇಂದ್ರದ ಗೌರವ ನಿರ್ದೇಶಕ ಕೆ.ರಾಮ ಭಟ್, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಲೇಜಿನ ಕನ್ನಡ ಸಂಘ ಹೊರತಂದ ಕನ್ನಡ ಸಾಹಿತ್ಯಕ್ಕೆ ಎಸ್. ವಿ.ಪರಮೇಶ್ವರ ಭಟ್ಟರ ಕೊಡುಗೆ ಎನ್ನುವ ಕೃತಿಯನ್ನು ಡಾ.ಆಳ್ವ ಲೋಕಾರ್ಪಣೆಗೊಳಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ಅಧ್ಯಯನ ಕೇಂದ್ರದ ಕಾರ್ಯದರ್ಶಿ ಹಾಗೂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಜಿ.ಶ್ರೀಧರ ಪ್ರಸ್ತಾವನೆಗೈದರು. ಕನ್ನಡ ಉಪನ್ಯಾಸಕ ಡಾ.ಮನಮೋಹನ ಎಂ ವಂದಿಸಿದರು. ಕನ್ನಡ ಉಪನ್ಯಾಸಕ ಡಾ.ರೋಹಿಣಾಕ್ಷ ಶಿರ್ಲಾಲು ಕಾರ್ಯಕ್ರಮ ನಿರ್ವಹಿಸಿದರು.