ನಿರುದ್ಯೋಗದ ನಿರ್ನಾಮಕ್ಕೆ ಕೃಷಿಯೇ ಮೂಲಮಂತ್ರ: ಡಾ. ಜಯವಂತ ನಾಯಕ್
ಪುತ್ತೂರು: ಕೃಷಿಕರನ್ನು ಸರಕಾರ ಪೋಷಿಸುವುದು ಸಾಲುತ್ತಿಲ್ಲ. ಉತ್ಪಾದನೆ ಹೆಚ್ಚಿದಂತೆ ಬೆಲೆ ಕಡಿಮೆಯಾಗುವುದರಿಂದ ಅದು ನೇರವಾಗಿ ರೈತನ ಮೇಲೆ ಪರಿಣಾಮವನ್ನು ಬೀರುವುದು ಮಾತ್ರವಲ್ಲದೆ ಕೃಷಿ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತವೆ ಎಂದು ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಪಕ ಡಾ. ಜಯವಂತ ನಾಯಕ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಸುವರ್ಣ ಮಹೋತ್ಸವ ವರ್ಷಾಚರಣೆಯ ಅಂಗವಾಗಿ ಅರ್ಥಶಾಸ್ತ್ರ ವಿಭಾಗವು ಆಯೋಜಿಸುತ್ತಿರುವ ಸರಣಿ ಉಪನ್ಯಾಸ ಮಾಲಿಕೆಯಲ್ಲಿ ಪಾಲ್ಗೊಂಡು ಕೃಷಿ ಕ್ಷೇತ್ರದಿಂದ ವಲಸೆಯ ಪರಿಣಾಮ ಎಂಬ ವಿಷಯದ ಕುರಿತಾಗಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ವೃತ್ತಿಯ ಆಯ್ಕೆಯಲ್ಲಿ ಪಲ್ಲಟವಾಗುತ್ತಿದೆ. ಹಾಗಾಗಿ ಕೃಷಿಕ ತನ್ನಲ್ಲಿ ಕೀಳರಿಮೆಯನ್ನು ಬೆಳೆಸಿಕೊಂಡಿದ್ದಾನೆ. ಇದರಿಂದಾಗಿ ಹಿಂದಿನ ಕಾಲದಲ್ಲಿ ರಾಷ್ಟ್ರೀಯ ಆದಾಯಕ್ಕೆ ೫೧ ಶೇಕಡಾ ಪಾಲನ್ನು ನೀಡುತ್ತಿದ್ದ ಕೃಷಿ ಇಂದು ೧೫ ಶೇಕಡಾ ಪಾಲನ್ನು ನೀಡುವುದೂ ಕಷ್ಟಕರವಾಗಿದೆ. ಇಂದು ಕೈಗಾರಿಕಾ ಕ್ಷೇತ್ರ ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆಯನ್ನು ಪಡೆದುಕೊಂಡಿರುವುದೇ ಕೃಷಿ ಹಿಂದುಳಿದಿರಲು ಕಾರಣ ಎಂದರು.
ಅಧಿಕಾರಿಗಳು ಕಛೇರಿಯಲ್ಲಿ ಕುಳಿತು ಪ್ರಯೋಗವನ್ನು ಮಾಡದೇ ಕೃಷಿಕನ ಭೂಮಿಯ ಬಳಿ ಬಂದು ಪ್ರಯೋಗಗಳನ್ನು ಪರೀಕ್ಷೆಗಳನ್ನು ಮಾಡಬೇಕಾಗಿದೆ. ಸರಕಾರದ ನೀತಿ ಕೃಷಿ ಕ್ಷೇತ್ರದ ಅಭಿವೃಧಿಗೆ ಪೂರ್ಣ ಪ್ರಮಾಣದ ಬೆಂಬಲವನ್ನು ಕೊಡುತ್ತಿಲ್ಲ. ಇದ್ದರೂ ರೈತರಿಗೆ ತಲುಪಬೇಕಾದ ಸೌಲಭ್ಯಗಳು ಮಧ್ಯವರ್ತಿಗಳ, ಅಧಿಕಾರಿಗಳ ಖಜಾನೆಯನ್ನು ಸೇರುತ್ತಿದ್ದರೆ ಕೃಷಿ ಮುಂದುವರಿಯುವುದಾದರೂ ಹೇಗೆ ಎಂದು ವಿಷಾಧಿಸಿದರು.
ಕೃಷಿಕರು ಪ್ರಾಮಾಣಿಕರು ಮಾತ್ರವಲ್ಲದೆ ಮುಗ್ಧರೂ ಆಗಿದ್ದಾರೆ. ಇದೇ ಅವರನ್ನು ಮೋಸಹೋಗುವಂತೆ ಮಾಡಿದೆ. ಇದಕ್ಕೆ ಶಿಕ್ಷಣವೊಂದೇ ಪರಿಹಾರ. ಆದರೆ ಶಿಕ್ಷಿತರು ಕೃಷಿಯನ್ನು ಬಯಸುತ್ತಿಲ್ಲ. ಇದಕ್ಕೆ ಕೃಷಿ ಕಾರಣವಲ್ಲ, ಮಾರುಕಟ್ಟೆಯ ಮೌಲ್ಯದ ಏರಿಳಿತವೇ ಮುಖ್ಯ ಕಾರಣ. ಬಡತನದ ನಿರ್ನಾಮಕ್ಕೆ ಕೃಷಿಯೊಂದೇ ಮೂಲ ಮಂತ್ರ. ಇದಕ್ಕಾಗಿಯಾದರೂ ಕೃಷಿಯನ್ನು ಪ್ರೀತಿಸಿ, ಕೃಷಿಕರನ್ನು ಗೌರವಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎಚ್. ಮಾಧವ ಭಟ್ ಮಾತನಾಡಿ ಆಧುನಿಕತೆಯ ಭರಾಟೆಯಲ್ಲಿ ಹಳೆಯ ವೃತ್ತಿಗಳು ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಮಾರುಕಟ್ಟೆಯ ಮನೋಧರ್ಮದಿಂದಲಾಗಿ ಅನೇಕ ಬೆಳೆಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿವೆ. ಸಾಂಪ್ರಾದಾಯಿಕ ಬೆಳೆಗಳನ್ನು ಬೆಳೆಸುವುದು ಅತೀ ಮುಖ್ಯ ಎಂಬ ಜ್ಞಾನವನ್ನು ತುಂಬಿಕೊಳ್ಳುವುದು ಮಾತ್ರವಲ್ಲದೆ ಅದನ್ನು ವೈಯಕ್ತಿಕ ಜೀವನದಲ್ಲಿ ಅಳವಡಿಸಬೇಕಾದ ಅವಶ್ಯಕತೆ ಇದೆ ಎಂಬ ಕಿವಿಮಾತು ನುಡಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ವಿಘ್ನೇಶ್ವರ ವರ್ಮುಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಡಾ. ಅರುಣ್ ಪ್ರಕಾಶ್ ಸ್ವಾಗತಿಸಿದರು. ಉಪನ್ಯಾಸಕಿಯರಾದ ಶ್ವೇತಾ ಕೆ. ವಂದಿಸಿ, ಮಲ್ಲಿಕಾ ವಿ. ಕಾರ್ಯಕ್ರಮ ನಿರ್ವಹಿಸಿದರು.