ಕೈಯಾರ ಕಿಞ್ಞಣ್ಣ ರೈ ಯವರಿಗೆ ವಿವೇಕಾನಂದದಲ್ಲಿ ಗೌರವ ನಮನ
ಪುತ್ತೂರು: ಶತಮಾನದ ಕೊಂಡಿಯಾಗಿ ಬದುಕಿದ ಕೈಯಾರ ಕಿಞ್ಞಣ್ಣ ರೈಯವರ ಅಗಲುವಿಕೆ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಸಾಧ್ಯವಾದ ನಷ್ಟವಾಗಿದೆ. ಅಖಂಡ ಕರ್ನಾಟಕಕ್ಕಾಗಿ ಹಂಬಲಿಸಿದ ಕೈಯಾರರ ಕನಸು ಕನಸಾಗಿಯೇ ಉಳಿದಿದ್ದುಅದನ್ನು ನನಸಾಗಿಸುವುದು ಕನ್ನಡಿಗರ ಕರ್ತವ್ಯ. ಬಹು ಭಾಷಾ ಸಾಹಿತಿಯಾಗಿ ಮಾತ್ರವಲ್ಲದೇ ಸ್ವಾತಂತ್ರ್ಯ ಹೋರಾಟಗಾರರಾಗಿ, ಕೃಷಿಕರಾಗಿಯೂ ಅಮೋಘ ಸಾಧನೆಯನ್ನು ಮಾಡಿದ್ದಾರೆ ಎಂದು ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ವಿಭಾಗ ಮುಖ್ಯಸ್ಥ ಡಾ. ಎಚ್.ಜಿ. ಶ್ರೀಧರ್ ಹೇಳಿದರು.
ಅವರು ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ಕೈಯಾರ ಕಿಞ್ಞಣ್ಣ ರೈಯವರ ಗೌರವಾರ್ಥ ನಡೆದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಕರ್ನಾಟಕದ ಭಾಗವಾಗಿದ್ದ ಕಾಸರಗೋಡು ಕೇರಳಕ್ಕೆ ಸೇರಿದ ಸಂದರ್ಭದಲ್ಲಿ ಮಹತ್ತರವಾಗಿ ಹೋರಾಟ ನಡೆಸಿದ ಕೈಯಾರರು ಸಮಷ್ಠಿಯ ಹಿತಕ್ಕಾಗಿ ಬದುಕಿದವರು. ಮಹಾತ್ಮ ಗಾಂಧೀಜಿಯವರ ಪ್ರಭಾವದಿಂದ ಚಿಂತನ ಶೀಲರಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ನುಡಿದರು.
ಕನ್ನಡ ವಿಭಾಗದ ಪ್ರಾಧ್ಯಾಪಕ ಕ್ಯಾಪ್ಟನ್ ಡಿ. ಮಹೇಶ್ ರೈ ಕೈಯಾರರ ಕವನವನ್ನು ವಾಚಿಸಿದರು. ನಂತರ ಅಗಲಿದ ಹಿರಿಯಕವಿಗೆ ಗೌರವ ನಮನವನ್ನು ಸಲ್ಲಿಸಲಾಯಿತು.