ಹಿರಿಯ ವಿದ್ಯಾರ್ಥಿ ಸಂಘ ಕಾಲೇಜಿಗೆ ಮುಕುಟಪ್ರಾಯವಾದದ್ದು : ಡಾ. ಜ್ಞಾನೇಶ್ ಎನ್. ಎ.
ಪುತ್ತೂರು: ಹಿಂದಿನ ಕಾಲಘಟ್ಟದ ಅಧ್ಯಾಪಕರ ಅಧ್ಯಾಪನ ಕೌಶಲ್ಯ ಪ್ರಸ್ತುತ ಕಾಲಘಟ್ಟದಲ್ಲಿ ತೀರಾ ವಿರಳವಾಗುತ್ತಿದೆ. ತಾನು ಅಳವಡಿಸದ ಜೀವನ ಮೌಲ್ಯವನ್ನು ವಿದ್ಯಾರ್ಥಿಗಳಿಗೆ ಬೋಧಿಸುವವನು ಉತ್ತಮ ಅಧ್ಯಾಪಕನಾಗಲಾರನು. ಬದಲಾಗಿ ತಾನು ಅಳವಡಿಸಿಕೊಂಡ ಆದರ್ಶಗಳನ್ನು ವಿದ್ಯಾರ್ಥಿಗಳ ಮುಂದೆ ಪ್ರಸ್ತುತ ಪಡಿಸುವುದರಿಂದ ಉತ್ತಮ ಅಧ್ಯಾಪಕನಾಗಲು ಸಾಧ್ಯ ಎಂದು ಸುಳ್ಯದ ಕೆ.ವಿ.ಜಿ. ಕಾಲೇಜ್ ಆಫ್ ಇಂಜಿನಿಯರಿಂಗ್ನ ಪ್ರಾಂಶುಪಾಲ ಡಾ. ಜ್ಞಾನೇಶ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶನಿವಾರ ಮಾತನಾಡಿದರು.
ವಿವೇಕಾನಂದ ಮಹಾವಿದ್ಯಾಲಯವು ಜನರಿಂದ, ಜನರಿಗಾಗಿ ಎಂಬ ತತ್ವವನ್ನು ಆಧರಿಸಿ ಮುನ್ನಡೆಯುತ್ತಿದೆ. ಕಲಿಕೆಗೆ ಪೂರಕವಾದ ವಾತವರಣ ಕಾಲೇಜಿನ ಪರಿಸರದಲ್ಲಿ ಹಿಂದಿನಿಂದಲೂ ಇದೆ. ಮಾತ್ರವಲ್ಲದೇ ಕಾಲೇಜಿನ ಬೆಳವಣೆಗೆಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಸ್ಮರಣೀಯವಾದದ್ದು, ಶ್ಲಾಘನೀಯವಾದದ್ದು ಎಂದು ಹೇಳಿದರು.
ಇನ್ನೊರ್ವ ಮುಖ್ಯ ಅತಿಥಿ ಅಡ್ಯನಡ್ಕದ ವಾರಣಾಶಿ ಫಾರ್ಮ್ಸನ ಡಾ. ಅಶ್ವಿನಿ ಕೃಷ್ಣಮೂರ್ತಿ ಮಾತನಾಡಿ ಕೃಷಿಯು ನಾಗರೀಕತೆ ಬೆಳೆದಂತೆ ಭಿನ್ನ ದಿಕ್ಕನ್ನು ಹಿಡಿದಿರುವುದನ್ನು ಕಾಣಬಹುದು. ಇಳುವರಿಯೇ ಮುಖ್ಯವೆಂದು ಭಾವಿಸಿದ ಕೃಷಿಕ ವರ್ಗ ವಿವಿಧ ರಾಸಾಯನಿಕವನ್ನು ಬಳಸುವ ಮೂಲಕ ಕೃಷಿಯ ವಿನಾಶಕ್ಕೆ ಕಾರಣವಾಗುತ್ತಿದ್ದಾರೆ. ಹಾಗೆ ಮಾಡದೇ ಕೃಷಿಯನ್ನು ಉಳಿಸುವಂತವರಾಗಬೇಕಾಗಿದೆ. ಯುವ ಪೀಳಿಗೆ ಕೃಷಿಯಲ್ಲಿ ಆಸಕ್ತಿ ತಾಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿವೃತ್ತ ಪ್ರಾಧ್ಯಾಪಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ತಾಳ್ತಜೆ ವಸಂತ ಕುಮಾರ್ ಮಾತನಾಡಿ ಆರೋಗ್ಯಕರವಾದ ಹಾಸ್ಯಪ್ರಜ್ಞೆಯನ್ನು ಮೈಗೂಡಿಸಿಕೊಂಡರೆ ಬದುಕು ಸುಖಮಯವಾಗುತ್ತದೆ. ಬದುಕನ್ನು ನೋಡುವ, ಅನುಭವಿಸುವ, ಎದುರಿಸುವ ಕಲೆಯನ್ನು ಕಾಲೇಜಿನ ಪರಿಸರವು ನೀಡುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು, ಅಧ್ಯಾಪಕರೂ ಒಂದೇ ಮನೆಯವರ ಹಾಗೆ ಬದುಕಿದ ದಿವ್ಯ ಕ್ಷಣವನ್ನು ನೀಡದ ವಾತಾವರಣ ಈ ವಿದ್ಯಾಲಯದ್ದು. ಅಷ್ಟೇಅಲ್ಲದೇ ನಾವು ಆರ್ಧಿಕ ನೆಲೆಯಲ್ಲಿ ಬೆಳೆಯುವುದರ ಜೊತೆಗೆ ನಮ್ಮ ಸುತ್ತ ಮುತ್ತಲಿನವರನ್ನು ಬೆಳೆಸುವ ಕೈಕರ್ಯವನ್ನು ಮಾಡುವಂತವರಾಗಬೇಕು. ಚಿಂತನೆ ರೂಪುಗೊಳ್ಳುವ ಅವಧಿಯಲ್ಲಿ ಎಡವಿದರೆ ಅದು ವಿಪರೀತವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪಿ. ಶ್ರೀನಿವಾಸ ಪೈ, ಹಾಗೂ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ವಿಲ್ಸನ್ ಪ್ರಭಾಕರ್ ತಮ್ಮ ಅನಿಸಿಕೆ ಹಂಚಿಕೊಂಡರು.
ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹರಿಪ್ರಸಾದ್ ಎಸ್. ಸ್ವಾಗತಿಸಿದರು. ಹಿರಿಯ ವಿದ್ಯಾರ್ಥಿನಿ ಸರಸ್ವತಿ ಸಿ. ಕೆ. ವಂದಿಸಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿಯರಾದ ಸ್ಮೃತಿ ಹೆಬ್ಬಾರ್ ಹಾಗೂ ಜೀವಿತಾ ಅತಿಥಿಗಳ ಪರಿಚಯವನ್ನು ಮಾಡಿದರು.