ವಿವೇಕಾನಂದದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆ
ಪುತ್ತೂರು: ವಿನಯ ಮತ್ತು ಸೌಜನ್ಯವನ್ನು ರೂಢಿಸಿಕೊಂಡು ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಜೀವನದಲ್ಲಿ ಉತ್ತಮ ಸ್ಥಾನಕ್ಕೆ ತಲಪುವುದು ಸಾಧ್ಯ ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ, ವಿಶ್ರಾಂತ ಪ್ರಾಧ್ಯಾಪಕ ಡಾ.ತಾಳ್ತಜೆ ವಸಂತ ಕುಮಾರ್ ಹೇಳಿದರು.
ಅವರು ವಿವೇಕಾನಂದ ಕಾಲೇಜಿನಲ್ಲಿ ಬುಧವಾರ ಹಿರಿಯ ವಿದ್ಯಾರ್ಥಿ ಸಂಘದ ದಿನಾಚರಣೆಯಂದು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವ್ಯಕ್ತಿಯು ತನ್ನಲ್ಲಿರುವ ಅಹಂಕಾರವನ್ನು ಬಿಟ್ಟಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಹಿರಿಯ ವಿದ್ಯಾರ್ಥಿಗಳು ಸದಾ ಕಿರಿಯ ವಿದ್ಯಾರ್ಥಿಗಳಿಗೆ ಆದರ್ಶಪ್ರಾಯರಾಗಿರಬೇಕು. ಕಿರಿಯ ವಿದ್ಯಾರ್ಥಿಗಳು ತಮ್ಮನ್ನು ಅನುಸರಿಸುವ ರೀತಿಯಲ್ಲಿ ಹಿರಿಯ ವಿದ್ಯಾರ್ಥಿಗಳು ಮಾದರಿಯಾಗಿರಬೇಕು. ವಿವೇಕಾನಂದ ಕಾಲೇಜಿನಲ್ಲಿ ಸಾಮೂಹಿಕ ಪ್ರತಿಭೆಗಳ ಅನಾವರಣಕ್ಕೆ ಅವಕಾಶವಿದೆ. ಇಲ್ಲಿ ಪ್ರಾಧ್ಯಾಪಕ ಮತ್ತು ವಿದ್ಯಾರ್ಥಿಗಳ ನಡುವೆ ಅವಿನಾಭಾವ ಸಂಬಂಧವಿದೆ ಎಂದು ನುಡಿದರು.
ಭಾರತ ಸರ್ಕಾರದ ನಿವೃತ್ತ ಕಾರ್ಯದರ್ಶಿ, ಕಾಲೇಜಿನ ಹಿರಿಯ ವಿದ್ಯಾರ್ಥಿ, ವಿ.ವಿ.ಭಟ್,ಐಎಎಸ್, ಮಾತನಾಡಿ ಪ್ರತಿಯೊಂದು ಶಿಕ್ಷಣ ಸಂಸ್ಥೆಯೂ ಕಾಲ ಕಾಲಕ್ಕೆ ಬದಲಾವಣೆಗೆ ಒಳಗೊಳ್ಳಬೇಕು. ಈ ಹಿನ್ನಲೆಯಲ್ಲಿ ಹಿರಿಯ ವಿದ್ಯಾರ್ಥಿಗಳು ಆರ್ಥಿಕ ಕೊಡುಗೆಯೊಂದಿಗೆ ಮಾತ್ರವಲ್ಲದೆ ಸಂಸ್ಥೆಯ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಭಾಗಿಯಾಗಬೇಕು. ಸಂಸ್ಥೆಯನ್ನು ಆಯಾ ಕಾಲಘಟ್ಟಕ್ಕನುಗುಣವಾಗಿ ಆಕರ್ಷಕಗೊಳಿಸುವುದು ಪ್ರತಿಯೊಬ್ಬ ಹಿರಿಯ ವಿದ್ಯಾರ್ಥಿಯ ಜವಾಬ್ಧಾರಿಯೂ ಹೌದು. ವಿವೇಕಾನಂದ ಕಾಲೇಜು ಸಮಾಜಮುಖಿ ಸಂಸ್ಥೆ. ಸಮಾಜದ ಜನರ ಏಳಿಗೆಗಾಗಿ ಶ್ರಮಿಸುತ್ತಿರುವ ಸಂಸ್ಥೆ ಎಂದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಬೆಳಗಾಂನ ಜಿಲ್ಲಾ ನ್ಯಾಯಾಧೀಶ ಶುಭವೀರ ಜೈನ್, ಮಂಗಳೂರಿನ ಮಂಗಳಾ ಹಾಸ್ಪಿಟಲ್ ಮತ್ತು ಕಿಡ್ನಿ ಪೌಂಡೇಶನ್ ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಗಣಪತಿ ಟಿ, ಬೆಂಗಳೂರಿನ ಕ್ಲೋರಿಸ್ ಎಂಟರ್ಪ್ರೈಸಸ್ನ ನಿರ್ದೇಶಕ ಮನಮೋಹನ್ ಎಚ್.ಜಿ, ಗಾಯಕ ಪುತ್ತೂರು ನರಸಿಂಹ ನಾಯಕ್, ಹಾಗೂ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ ಸೃಜನಿ ರೈ ಎಸ್ ಅನಿಸಿಕೆ ವ್ಯಕ್ತಪಡಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಉರಿಮಜಲು ಕೆ ರಾಮ ಭಟ್, ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ರಾಧಾಕೃಷ್ಣ ಭಕ್ತ, ಹಿರಿಯ ವಿದ್ಯಾರ್ಥಿ ಸಂಘದ ಸಂಘಟನಾ ಕಾರ್ಯದರ್ಶಿ ಸುಭಾಶ್ಚಂದ್ರ ರೈ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಅಕ್ಷತ, ಸುಕನ್ಯ, ಶೃತಿ ಹಾಗೂ ಸ್ಮಿತಾ ಮಾಧವಿ ಪ್ರಾರ್ಥಿಸಿದರು. ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಸಿ.ಪ್ರಭು ಸ್ವಾಗತಿಸಿದರು. ಕಾಲೇಜಿನ ಪ್ರಾಚಾರ್ಯ ಡಾ.ಎಚ್.ಮಾಧವ ಭಟ್ ಪ್ರಸ್ತಾವನೆಗೈದರು. ಅಡ್ಯನಡ್ಕದ ಜನತಾ ವಿದ್ಯಾಸಂಸ್ಥೆಯ ಸಂಚಾಲಕಿ ಡಾ.ಅಶ್ವಿನಿ ಕೃಷ್ಣಮೂರ್ತಿ ವಂದಿಸಿದರು. ಪ್ರಾಧ್ಯಾಪಕ ಡಾ.ಶ್ರೀಧರ ಎಚ್.ಜಿ, ಪ್ರೊ.ವೆಂಕಟರಮಣ ಭಟ್, ಡಾ.ಸುಬ್ರಹ್ಮಣ್ಯ ಭಟ್,ಉಪನ್ಯಾಸಕಿಯರಾದ ವಿದ್ಯಾ ಎಸ್, ಮಲ್ಲಿಕಾ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮ ನಿರ್ವಹಿಸಿದರು.