ಒಳ್ಳೆಯ ಕೆಲಸಕ್ಕಾಗಿ ಹೇಳುವ ಸುಳ್ಳು ತಪ್ಪಲ್ಲ: ರಿಯಾಂಕ
ಪುತ್ತೂರು: ನಾವು ತಂದೆ ತಾಯಿ, ಗುರುಗಳು ನೀಡುವ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತೇವೆ, ಅದರಲ್ಲೂ ಅಂಕಗಳ ವಿಷಯವಾಗಿ ಸುಳ್ಳುಗಳನ್ನು ಹೇಳುತ್ತೇವೆ. ಆದರೆ ನಮಗೆ ಸುಳ್ಳಿನ ಪರಿಣಾಮ ಗೊತ್ತಾಗುವುದು ನಾವು ಸಿಕ್ಕಿಬಿದ್ದಾಗ. ನಾವು ಒಳ್ಳೆಯ ಕೆಲಸಕ್ಕಾಗಿ ಸುಳ್ಳು ಹೇಳಿದರೆ ಅದು ತಪ್ಪಾಗುವುದಿಲ್ಲ. ಆದರೆ ಕೆಟ್ಟ ವಿಷಯಕ್ಕೆ ಸುಳ್ಳು ಹೇಳಬಾರದು ಎಂದು ವಿವೇಕಾನಂದ ಕಾಲೇಜಿನ ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ರಿಯಾಂಕ ತಿಳಿಸಿದರು.
ಅವರು ಇತ್ತೀಚೆಗೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳು ನಡೆಸಿಕೊಡುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ಸುಳ್ಳಿನ ಮಹಿಮೆ ಎಂಬ ವಿಚಾರದ ಬಗೆಗೆ ಮಾತಾಡಿದರು.
ಸುಳ್ಳು ನಮ್ಮ ಚಾರಿತ್ರ್ಯವನ್ನು ಹಾಳುಮಾಡುತ್ತದೆ. ಅಂತೆಯೇ ಸುಳ್ಳು ಎಂಬುದು ಒಂದು ಹಿಂಸೆ. ಆದರೆ ಸಣ್ಣ ಮಕ್ಕಳು ಹೇಳುವ ಸುಳ್ಳಿನಲ್ಲಿ ಮುಗ್ಧತೆ ಇದೆ. ಹಲವು ಸಂದರ್ಭದಲ್ಲಿ ಅಪ್ರಿಯವಾದ ಸತ್ಯಕ್ಕಿಂತ ಪ್ರಿಯವಾದ ಸುಳ್ಳೇ ಮೇಲು ಎಂದರು. ವಿದ್ಯಾರ್ಥಿಗಳಾದ ಶ್ರೇಯಸ್, ಆಜಾದ್, ರಮ್ಯ ಎಂ, ಶಿಲ್ಪ, ಸುಮಯ್ಯ ವಿ ಕೆ, ರವಿ ಶಣೈ, ಭವಿಷ್ಯ, ದೀಕ್ಷಿತ್, ಪೂಜಾ, ಸ್ವಪ್ನ, ಪ್ರವೀಣ್, ಭುವನ ಬಾಬು ಪುತ್ತೂರು ಹಾಗೂ ವಾಣಿಜ್ಯ ವಿಬಾಗದ ಉಪನ್ಯಾಸಕ ಅತುಲ್ ಶಣೈ, ಕನ್ನಡ ವಿಭಾಗದ ಉಪನ್ಯಾಸಕ ರೋಹಿಣಾಕ್ಷ ಶಿರ್ಲಾಲು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಮಣಿಕರ್ಣಿಕ ಮಾತುಗಾರರ ವೇದಿಕೆಯ ಕಾರ್‍ಯದರ್ಶಿ ಪ್ರೆಸಿಲ್ಲಾ ಒಲಿವಿಯಾ ಡಾಯಸ್ ಸ್ವಾಗತಿಸಿದರು. ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ವಂದಿಸಿದರು. ವಿದ್ಯಾರ್ಥಿ ಧನಂಜಯ ಕಾರ್‍ಯಕ್ರಮ ನಿರೂಪಿಸಿದರು.