ಪಾರಂಪರಿಕ ವಿಚಾರಕ್ಕೆ ಆಧುನಿಕತೆಯ ಸ್ಪರ್ಶ ಅಗತ್ಯ: ಕೆ. ಎನ್. ಸುಬ್ರಹ್ಮಣ್ಯ
ಪುತ್ತೂರು : ಜಗತ್ತು ನಮಗೆ ಅನೇಕ ಸುಂದರ ಹೂವುಗಳನ್ನು ನೀಡಿದೆ. ಹೂವುಗಳೇ ಸಂಶೋಧನೆಯ ಸಾಧನವಾಗಿದೆ. ಆದರೆ ಸಂಶೋಧನೆ ವ್ಯವಸ್ಥಿತವಾಗಿರಬೇಕು. ಯಾವುದೇ ಹೂವಿನ ಹುಟ್ಟಿನಿಂದ ಅಂತ್ಯದವರೆಗೆ ಹಾಗೂ ಅದರ ಪ್ರತಿಯೊದು ಭಾಗಗಳ ಕಲಿಕೆ ಅಗತ್ಯ. ಎಂದು ಆಂದ್ರಪ್ರದೇಶದ ssಸಸ್ಯ ತಳಿ ಐಟಿಸಿ ಲಿಮಿಟೆಡ್‌ನ ವ್ಯವಸ್ಥಾಪಕ ಕೆ. ಎನ್. ಸುಬ್ರಹ್ಮಣ್ಯ ತಿಳಿಸಿದರು.
ಅವರು ಶುಕ್ರವಾರ ವಿವೇಕಾನಂದ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ನಡೆದ ಅತಿಥಿ ಉಪನ್ಯಾಸ ಹಾಗೂ ಸಂವಾದ ಕಾರ್‍ಯಕ್ರಮದಲ್ಲಿ ಸಸ್ಯ ತಳಿ-ಮನುಕುಲದ ಪೂರೈಕೆಯ ಸಾಧನ ಎಂಬ ವಿಷಯದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ತಂಬಾಕು ಬೆಳೆಯ ಬಗೆಗೆ ಮಾಹಿತಿ ನೀಡಿದ ಅವರು ತಂಬಾಕು ಬೆಳೆ ವಾರ್ಷಿಕ ಬೆಳೆಯಾಗಿದೆ. ಇದರ ಹೂವು ಬಹಳ ಆಕರ್ಷಣೀಯವಾಗಿದ್ದು ಹಕ್ಕಿಗಳನ್ನು, ಕೀಟಗಳನ್ನು ತನ್ನೆಡೆಗೆ ಸೆಳೆಯುತ್ತದೆ. ಇದರ ಸಾವಿರ ಬೀಜಗಳು ಸೇರಿದರೆ ಒಂದು ಗ್ರಾಂ ಆಗುತ್ತದೆ. ತಂಬಾಕುವಿನಲ್ಲಿ ಅರುವತ್ತನಾಲ್ಕು ತಳಿಯ ಬೀಜಗಳಿವೆ. ತಂಬಾಕು ಕೃಷಿಯನ್ನು ಬದಲಾವಣೆಗೆ ಒಗ್ಗಿಸಿಕೊಂಡಾಗ ಉತ್ತಮ ಬೆಳೆ ಉತ್ಪತ್ತಿಯಾಗಲು ಸಾಧ್ಯ. ತಂಬಾಕು ಬೆಳೆ ಬೆಳೆಯಲು ಎಂಟರಿಂದ ಒಂಭತ್ತು ವರ್ಷಗಳು ಬೇಕು ಎಂದು ಹೇಳಿದರು.
ಇಂದಿನ ಆಧುನಿಕ ಯುಗದಲ್ಲಿ ಹಲವಾರು ಮಾಹಿತಿ ತಾಣಗಳು ಲಭ್ಯವಿರುದರಿಂದ ನಾವು ನಮ್ಮ ಜ್ಞಾನಭಂಡಾರವನ್ನು ವೃದ್ಧಿಸಬಹುದು ಹಾಗೂ ಅಂತರ್ಜಾಲದಲ್ಲಿ ನಾವು ಉದ್ಯೋಗಕ್ಕಾಗಿ ಅರ್ಜಿಸಲ್ಲಿಸಿ, ಕೆಲಸ ಪಡೆಯಬಹುದು. ನಮ್ಮ ಭವಿಷ್ಯಕ್ಕಾಗಿ ಹಾಗೂ ಅಧ್ಯಯನ ಕೌಶಲ್ಯಕ್ಕಾಗಿ ನಾವು ಒಂದು ಉತ್ತಮ ಸೂತ್ರ ಆಯ್ಕೆ ಮಾಡಿಕೊಳ್ಳಬೇಕು. ಹಿರಿಯರು ನಮಗೆ ಒಂದು ತೆರೆನಾದ ಪಾರಂಪರಿಕ ವಿಚಾರಧಾರೆ ನೀಡಿದ್ದಾರೆ. ಅದರ ಬಗೆಗೆ ನಾವು ವಿಚಾರ ಮಾಡಿ ಅದನ್ನು ನಾವು ಆಧುನಿಕತೆಯೆಡೆಗೆ ಕೊಂಡೊಯ್ಯಬೇಕು ಹಾಗೂ ಅದಕ್ಕೆ ಆಧುನಿಕತೆಯ ಸ್ಪರ್ಶ ಅಗತ್ಯವಿದೆ ಎಂದು ತಿಳಿಸಿದರು.
ಉಪನ್ಯಾಸದ ಅನಂತರ ಸಸ್ಯ ತಳಿಯ ಬಗೆಗೆ ಸಂವಾದ ನಡೆಯಿತು. ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಹಾಗೂ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಣಿಶಾಸ್ತ್ರ ವಿಬಾಗದ ಉಪನ್ಯಾಸಕಿ ದಿವ್ಯಾಶ್ರೀ ಜಿ ಸ್ವಾಗತಿಸಿದರು. ವಿಭಾಗದ ಉಪನ್ಯಾಸಕಿ ಮಧುರಾ ಕೆ ವಂದಿಸಿದರು. ವಿದಾರ್ಥಿನಿ ಮಿಲನ ಕಾರ್ಯಕ್ರಮ ನಿರೂಪಿಸಿದರು.