’ಪರಂಪರೆ ಮುಂದಿನ ಪೀಳಿಗೆಗೆ ಲಭ್ಯವಾಗಬೇಕು’
ಪುತ್ತೂರು: ಪರಂಪರೆ ಅಂದರೆ ಮ್ಯೂಸಿಯಮ್‌ನೊಳಗೆ ಸಂಗ್ರಹಿಸಿಟ್ಟ ವಸ್ತುಗಳು ಮಾತ್ರವಲ್ಲ ನಾವಾಡುವ ಭಾಷೆ, ಪದ್ಧತಿ, ಕಲೆ ಮರಗಿಡಗಳು ಎಲ್ಲವೂ ನಮ್ಮ ಪರಂಪರೆಗೆ ಸೇರಿವೆ. ಅವು ನಮ್ಮ ಅವಧಿಯೊಳಗೆ ನಶಿಸಿ ಹೋಗಬಾರದು. ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ಸಂರಕ್ಷಿಸುವ ಜವಾಬ್ದಾರಿ ನಮ್ಮ ಯುವಜನರ ಮೇಲಿದೆ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ಎಚ್ ಮಾಧವ ಭಟ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿವೇಕಾನಂದ ಕಾಲೇಜಿನ ಇತಿಹಾಸ ವಿಭಾಗ, ಪರಂಪರ ಕೂಟ ಮತ್ತು ಇತಿಹಾಸ-ಸಂಸ್ಕೃತಿ ಅಧ್ಯಯನ ಕೇಂದ್ರಗಳು ಜಂಟಿಯಾಗಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಪರಂಪರಾ ವಸ್ತುಗಳ ಮಾದರಿ ತಯಾರಿ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ವಹಿಸಿ ಇಂದಿನ ಆಧುನಿಕ ಜಗತ್ತಿನಲ್ಲಿ ಪರಂಪರೆಯನ್ನು ಉಳಿಸಿಕೊಳ್ಳುವ ಅಗತ್ಯತೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಇದೇ ಸಂದರ್ಭದಲ್ಲಿ ಈ ಹಿಂದೆ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ವಿಜೇತ ವಿದ್ಯಾರ್ಥಿಗಳಾದ ಅನುಶ್ರೀ, ಯೋಗೇಶ್, ಕಾವ್ಯ ಮತ್ತು ಅನುಪಮರವರಿಗೆ ಬಹುಮಾನ ವಿತರಿಸಲಾಯಿತು.
ಇತಿಹಾಸ ವಿಭಾಗದ ಉಪನ್ಯಾಸಕ ಡಾ| ಶ್ರೀಧರ್ ನಾಯ್ಕ್ ಸ್ವಾಗತಿಸಿದರು. ವಿದ್ಯಾರ್ಥಿನಿ ಭುವನ ಬಾಬು ಪುತ್ತೂರು ವಂದಿಸಿದರು. ಉಪನ್ಯಾಸಕಿ ಶ್ರೀಮತಿ ವಿಜಯಲಕ್ಷ್ಮಿ ನಿರೂಪಿಸಿದರು.