ವೈ.ಎಂ.ಸಿ.ಎಯ ರಾಜ್ಯಾಧ್ಯಕ್ಷರಾಗಿ ಡಾ.ಪೀಟರ್ ವಿಲ್ಸನ್ ಪ್ರಭಾಕರ್
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್‌ರವರು ಯಂಗ್ ಮೆನ್ಸ್ ಕ್ರಿಶ್ಚಿಯನ್ ಎಸೋಸಿಯೇಶನ್‌ನ (ವೈ.ಎಂ.ಸಿ.ಎ) ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ (ಭಾರತ ವೈ.ಎಂ.ಸಿ.ಎ. ಒಕ್ಕೂಟದ ದಕ್ಷಿಣ ಕೇಂದ್ರ ವಲಯ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜು.21ರಂದು ಸುದಾನ ರೆಸಿಡೆನ್ಸಿಯಲ್ ಶಾಲೆಯ ಸಂಭಾಗಣದಲ್ಲಿ ನಡೆದ ವೈ.ಎಂ.ಸಿ.ಎಯ 32 ನೇ ರಾಜ್ಯ ಮಹಾಧಿವೇಶನದಲ್ಲಿ ಈ ಆಯ್ಕೆ ನಡೆಯಿತು.
1844 ರಲ್ಲಿ ಇಂಗ್ಲೆಡ್‌ನಲ್ಲಿ ಆರಂಭಗೊಂಡ ವೈ.ಎಂ.ಸಿ.ಎ ಸಂಘಟನೆಯು ಯುವಜನತೆಗಾಗಿ ವಿಶ್ವದಲ್ಲಿ ಆರಂಭಗೊಂಡ ಅತ್ಯಂತ ಹಳೆಯ ಮತ್ತು ದೊಡ್ಡ ಸಂಘಟನೆಯಾಗಿದೆ. ಪ್ರಸ್ತುತ ವಿಶ್ವದ 140 ರಾಷ್ಟ್ರಗಳಲ್ಲಿ ವೈ.ಎಂ.ಸಿ.ಎಯ 12000ಕ್ಕಿಂತಲೂ ಹೆಚ್ಚಿನ ಸ್ಥಳೀಯ ಘಟಕಗಳಿದ್ದು 60 ಮಿಲಿಯನ್ ಸದಸ್ಯರಿದ್ದಾರೆ.
ಭಾರತದಲ್ಲಿ ವೈ.ಎಂ.ಸಿ.ಎ.ಯ ಪ್ರಥಮ ಕೇಂದ್ರವನ್ನು 1854ರಲ್ಲಿ ಕಲ್ಕತ್ತಾದಲ್ಲಿ ಆರಂಭಿಸಲಾಗಿದ್ದು, ಪ್ರಸ್ತುತ 9 ವಲಯಗಳಲ್ಲಿ 1038 ಸ್ಥಳೀಯ ಘಟಕಗಳಿದ್ದು, ಅದರಲ್ಲಿ 2 ಲಕ್ಷದಷ್ಟು ಸದಸ್ಯರಿದ್ದಾರೆ. ಭಾರತದ ವೈ.ಎಂ.ಸಿ.ಎ ಗಳಲ್ಲಿ ಎಲ್ಲಾ ಜಾತಿ, ಧರ್ಮ, ವರ್ಗ ಮತ್ತು ವರ್ಣದ ಸದಸ್ಯರಿದ್ದಾರೆ. ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಈ ಹಿಂದೆ ವೈ.ಎಂ.ಸಿ.ಎ ಯ ಪುತ್ತೂರು ಘಟಕಕ್ಕೆ ಅಧ್ಯಕ್ಷರಾಗಿದ್ದರು.