ಉತ್ತಮ ಯೋಚನೆಗಳಿಂದ ಯಶಸ್ಸು ಸಾಧ್ಯ : ಪ್ರೊ. ಕೃಷ್ಣಪ್ರಸಾದ್.ಎಂ.ಎಸ್
ಪುತ್ತೂರು: ನಮ್ಮ ವ್ಯಕ್ತಿತ್ವವನ್ನು ನಮ್ಮ ಆಂತರ್‍ಯದ ಕನ್ನಡಿಯಿಂದ ನೋಡಿಕೊಳ್ಳಬೇಕು. ಯುವಜನರ ಮನಸ್ಸೇ ಆಯುಧ. ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಮನಸ್ಸಿನಿಂದ ವ್ಯಕ್ತಿತ್ವ ರೂಪಿಸಲು ಸಾಧ್ಯ. ಮಾತ್ರವಲ್ಲದೇ ಮನಸ್ಸಿನಿಂದಲೇ ಕಲ್ಪನೆಯನ್ನು ಸಾಕಾರಗೊಳಿಸುವ ಶಕ್ತಿಯನ್ನು ಪಡೆದುಕೊಳ್ಳಬೇಕು. ಒಳಿತು ಕೆಡುಕು ಸಮಾಜದ ಒಂದು ಭಾಗ ಅದನ್ನು ಯುವಜನರು ವಿಮರ್ಶಿಸಿ ಸರಿಯಾದ ದಾರಿಯಲ್ಲಿ ನಡೆಯಬೇಕು ಎಂದು ಸುಳ್ಯದ ಕೆವಿಜಿ ಕಾಲೇಜಿನ ಮೈಕ್ರೋಬಯೋಲಜಿ ಪ್ರಾಧ್ಯಾಪಕ ಡಾ.ಕೃಷ್ಣಪ್ರಸಾದ್.ಎಂ.ಎಸ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ಪದವಿ ವತಿಯಿಂದ ಆಯೋಜಿಸಲಾದ ಸ್ನಾತಕೋತ್ತರ ದಿನ ಮತ್ತು ಸಾಂಸ್ಕೃತಿಕ ದಿನವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯನಿಗೆ ತನ್ನ ವ್ಯಕ್ತಿತ್ವ ಏನು ಎಂಬ ಕಲ್ಪನೆಯಿರಬೇಕು. ತನ್ನ ಬಗ್ಗೆ ತನಗೇ ಕೀಳರಿಮೆಯಿರಬಾರದು. ಅಲ್ಲದೆ ಜೀವನವನ್ನು ಉತ್ತಮವಾದ ರೀತಿಯಲ್ಲಿ ನಡೆಸಲು ಉತ್ತಮ ಯೋಚನೆಯಿರಬೇಕು. ಜೀವನದಲ್ಲಿ ಯಶಸ್ಸು ಪಡೆಯಲು ಯೋಚನೆಯಿಂದ ಮಾತ್ರ ಸಾಧ್ಯ. ಯೋಚನೆಗಳ ಸರಮಾಲೆ ಸರಿಯಿದ್ದರೆ ವ್ಯಕ್ತಿತ್ವದ ಉನ್ನತಿ ಸಾಧ್ಯ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ವಿದ್ಯಾರ್ಥಿಗಳು ಜೀವನದಲ್ಲಿ ಮುಂದೆ ಬರಲು ಪ್ರಯತ್ನಿಸಬೇಕು. ಏಳುಬೀಳುಗಳು ಜೀವನದ ಅವಿಭಾಜ್ಯ ಅಂಗ. ಯುವಜನರು ಜೀವನದ ಅಡೆತಡೆಗಳಿಗೆ ಕುಗ್ಗಬಾರದು. ಬದಲಾಗಿ ಯಶಸ್ಸು ಪಡೆಯಲು ಪ್ರಯತ್ನಿಸಬೇಕು. ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾಲೇಜಿನ ಸಂಚಾಲಕ ಎಂ.ಟಿ. ಜಯರಾ0 ಭಟ್ ಮಾತನಾಡಿ, ಸಮಾಜವು ವಿದ್ಯಾರ್ಥಿಗಳ ನಡವಳಿಕೆಯನ್ನು ವೀಕ್ಷಿಸುತ್ತಿರುತ್ತದೆ. ಔದ್ಯೋಗಿಕ ರಂಗಕ್ಕೆ ಅಡಿಯಿಡುತ್ತಿರುವ ವಿದ್ಯಾರ್ಥಿಗಳು ಸಮಾಜದೊಂದಿಗೆ ವ್ಯವಹರಿಸುವ ಜಾಣ್ಮೆಯನ್ನು ಪಡೆದುಕೊಳ್ಳಬೇಕು. ಔದ್ಯೋಗಿಕ ರಂಗದಲ್ಲಿ ಎದುರಾಗುವ ತೊಂದರೆಗಳನ್ನು ಸಮರ್ಥವಾಗಿ ಎದುರಿಸಲು ಸಿದ್ಧರಾಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಎಂ.ಎಸ್ಸಿ ವಿಭಾಗದ ಸಂಯೋಜಕಿ ಸವಿತಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವಿಜಯಶ್ರೀ ಪ್ರಾರ್ಥಿಸಿದರು. ಎಂ.ಕಾಂ ವಿಭಾಗ ಮುಖ್ಯಸ್ಥೆ ವಿಜಯಸರಸ್ವತಿ ಸ್ವಾಗತಿಸಿದರು, ಕಾರ್ಯಕ್ರಮದ ಸಂಯೋಜಕಿ ರಕ್ಷಾ ವಂದಿಸಿದರು. ವಿದ್ಯಾರ್ಥಿನಿಯರಾದ ಶ್ರುತಿ ವಾಸುದೇವ.ಕೆ ಮತ್ತು ಅಪರ್ಣಾ ಭಟ್ ನಿರ್ವಹಿಸಿದರು,