ಪ್ರಾಕೃತಿಕ ಪರಂಪರೆಯ ರಕ್ಷಣೆ ಅಗತ್ಯ: ಡಾ.ಶ್ರೀಶ ಕುಮಾರ್ ಎಂ.ಕೆ
ಪುತ್ತೂರು: ಪ್ರಾಕೃತಿಕ ಪರಂಪರೆ ನಮ್ಮ ದೇಶದ ಸಂಪತ್ತು. ಭಾರತೀಯರು ಮೂಲತಃ ಪ್ರಕೃತಿ ಆರಾಧಕರು. ಪ್ರಕೃತಿಯನ್ನು ರಕ್ಷಿಸಲು ನಮ್ಮ ಹಿರಿಯರು ಅದಕ್ಕೆ ದೈವೀಕ ಶಕ್ತಿಯನ್ನು ಕೊಟ್ಟಿದ್ದಾರೆ. ನಮ್ಮ ಜಗತ್ತು ಸೃಷ್ಟಿಯಾದ ದಿನದಿಂದ ಭೂಮಿಯ ಮೇಲಿನ ಪ್ರತಿಯೊಂದು ಜೀವಿಗಳನ್ನು ದೈವ ಸೃಷ್ಠಿಯೆಂದು ಕರೆಯುತ್ತೇವೆ ಎಂದು ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ.ಶ್ರೀಶ ಕುಮಾರ್ ಎಂ.ಕೆ ಹೇಳಿದರು.
ಅವರು ಇತ್ತೀಚೆಗೆ ವಿವೇಕಾನಂದ ಕಾಲೇಜಿನಲ್ಲಿ ಹೆರಿಟೇಜ್ ಕ್ಲಬ್‌ನ ಆಶ್ರಯದಲ್ಲಿ ನಡೆದ ವಿಶೇಷ ಉಪನ್ಯಾಸ ಮತ್ತು ಹೆರಿಟೇಜ್ ಮಾದರಿ ತಯಾರಿ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ’ಪ್ರಾಕೃತಿಕ ಪರಂಪರೆಯ ಮತ್ತು ಸಂರಕ್ಷಣೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ದೇಶದ ಗಡಿಯನ್ನು ಈ ಪ್ರಾಕೃತಿಕ ಪರಂಪರೆ ಮೂಲಕ ಗುರುತಿಸುತ್ತೇವೆ. ಪ್ರಾಕೃತಿಕ ಪರಂಪರೆಯ ನಡುವೆ ಮನುಷ್ಯ ಬಹಳ ಒಳ್ಳೆಯ ರೀತಿಯಲ್ಲಿ ಬದುಕುತ್ತಿದ್ದಾನೆ. ಆದರೆ ಇಂದು ಅದರ ನಾಶಕ್ಕೆ ಮುಂದಾಗಿರುವುದು ವಿಷಾದನೀಯ. ನಮ್ಮ ಹಿರಿಯರು ಪ್ರಕೃತಿಯನ್ನು ರಕ್ಷಿಸಲು ಕೆಲವು ಸಂಪ್ರದಾಯವನ್ನು ಮಾಡಿಕೊಂಡಿದ್ದರು. ಆದರೆ ನಾವಿಂದು ಆ ಸಂಪ್ರದಾಯವನ್ನು ಮೀರುತ್ತಿದ್ದೇವೆ ಎಂದು ನುಡಿದರು.
ನಾವು ಉಳಿಸಿಕೊಳ್ಳಲೇಬೇಕಾದ ಪರಂಪರೆಗಳಲ್ಲಿ ನದಿ, ಸಮುದ್ರಗಳು ಕೂಡ ಸೇರಿಕೊಂಡಿವೆ. ಅರಬ್ಬಿ ಸಮುದ್ರವೇ ನಮಗೊಂದು ದೊಡ್ಡ ಪ್ರಾಕೃತಿಕ ಪರಂಪರೆಯಾಗಿದೆ. ಯಾವುದಕ್ಕೆ ಚಲನೆಯಿದೆಯೋ ಅದಕ್ಕೆ ಜ್ಞಾನವಿರುತ್ತದೆ ಎಂದು ಭಾರತೀಯರ ನಂಬಿಕೆ. ಆದ್ದರಿಂದ ನದಿಗಳು ಜ್ಞಾನದ ಮೂಲವಾಗಿವೆ. ನೈಸರ್ಗಿಕ ಪರಂಪರೆಯನ್ನು ರಕ್ಷಿಸಲು ಕೆಲವು ಕಟ್ಟು ನಿಟ್ಟಾದ ಕಾನೂನನ್ನು ಜಾರಿಗೊಳಿಸಬೇಕು ಎಂದು ತಿಳಿಸಿದರು.
ಹಲವಾರು ನೈಸರ್ಗಿಕ ಪರಂಪರೆಗಳು ಕಳೆದುಕೊಳ್ಳುತ್ತಿರುವ ಸಂದರ್ಭ ಎದುರಾಗುತ್ತಿದೆ. ಕೆಲವು ಪ್ರಾಕೃತಿಕ ಪರಂಪರೆಗಳು ಇತಿಹಾಸದ ದಾಖಲೆಗೆ ಸೇರುವ ಮೊದಲೇ ನಾಶವಾಗಿ ಹೋಗಿವೆ. ನಮ್ಮಲ್ಲಿ ಇತಿಹಾಸ ಪ್ರಜ್ಞೆಯ ಕೊರತೆಯಿದೆ. ಇದು ನಾವಿಂದು ನಮ್ಮ ಪರಂಪರೆಯನ್ನು ಕಳೆದುಕೊಳ್ಳಲು ಕಾರಣವಾಗಿದೆ. ಹಾಗೆಂದು ಪ್ರಾಕೃತಿಕ ಸಂರಕ್ಷಣೆಯ ಹೆಸರಲ್ಲಿ ವಂಚನೆ ಮಾಡುವುದು ಸರಿಯಲ್ಲ ಎಂದು ತಿಳಿಹೇಳಿದರು.
ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಸ್ವಾಗತಿಸಿದರು. ವಿದ್ಯಾರ್ಥಿನಿ ರಕ್ಷಿತಾ ಕುಮಾರಿ ಪ್ರಾರ್ಥಿಸಿದರು. ವಿದ್ಯಾರ್ಥಿನಿಯರಾದ ಶುತಿ ವಂದಿಸಿ, ಸೃಜನಿ ರೈ.ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು.