ಪ್ರಕೃತಿಯ ಸಮತೋಲನಕ್ಕೆ ಮನುಷ್ಯನಷ್ಟೇ ಪ್ರಾಣಿಗಳೂ ಮುಖ್ಯ: ಗೀತಾ
ಪುತ್ತೂರು: ಪ್ರಾಕೃತಿಕ ಸಮತೋಲನಕ್ಕೆ ಮನುಷ್ಯ ಹೇಗೆ ಮುಖ್ಯವೋ, ಹಾಗೆಯೇ ಪ್ರಾಣಿಗಳೂ ಕೂಡ ಬಹಳ ಮುಖ್ಯ. ಪ್ರಾಣಿಗಳನ್ನು ರಕ್ಷಿಸುವ ಮೂಲಕ ಸ್ವಸ್ಥ ಸಮಾಜವನ್ನು ನಿರ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ. ನಾವು ಪ್ರಕೃತಿಯ ವೈಚಿತ್ರ್ಯವನ್ನು ಅರ್ಥಮಾಡಿಕೊಂಡಾಗ ಪ್ರಾಣಿಗಳಿಂದಾಗುವ ಪಜೀತಿಗಳಿಂದ ಮಾನವೀಯ ಸಂಬಂಧಗಳು ಹಾಳಾಗುವುದನ್ನು ತಪ್ಪಿಸಬಹುದು ಎಂದು ವಿವೇಕಾನಂದ ಕಾಲೇಜಿನ ಕನ್ನಡ ಉಪನ್ಯಾಸಕಿ ಗೀತಾ ಕುಮಾರಿ.ಟಿ ಹೇಳಿದರು.
ಅವರು ಇತ್ತೀಚೆಗೆ ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ನಡೆದ ಮಣಿಕರ್ಣಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಪ್ರಾಣಿಗಳಿಂದ ಪಜೀತಿ’ಎಂಬ ವಿಷಯದ ಕುರಿತು ಮಾತನಾಡಿದರು.
ಪ್ರಾಣ ಇರುವವರೆಲ್ಲಾ ಪ್ರಾಣಿಗಳೆಂದು ವಿಜ್ಞಾನ ಹೇಳುತ್ತದೆ. ಶಿವರಾಮ ಕಾರಂತರ ಮಾತಿನಂತೆ ಮನುಷ್ಯ ಬುದ್ಧಿಶಾಲಿಯಾದ ಪಶು. ಪಶುತ್ವವನ್ನು ಬಿಟ್ಟ ಮನುಷ್ಯನಿಲ್ಲ. ನಿತ್ಯ ಜೀವನದಲ್ಲಿ ಪ್ರಾಣಿಗಳಿಂದ ಪಜೀತಿಗೊಳಗಾಗುವುದು ಸಹಜ. ಅದು ಪ್ರಕೃತಿ ಸಹಜವೂ ಹೌದು ಎಂದರು.
ಕೆಲವೊಮ್ಮೆ ಸಾಕು ಪ್ರಾಣಿಗಳ ಪಜೀತಿಯಿಂದ ಸಂಬಂಧಗಳು ಹಾಳಾಗುತ್ತವೆ. ಮನುಷ್ಯ ಪ್ರಕೃತಿಯ ಮೇಲೆ ಸದಾ ನಿಯಂತ್ರಣ ಹೇರಲು ಪ್ರಯತ್ನಿಸುತ್ತಿರುತ್ತಾನೆ. ಪ್ರಾಣಿಗಳು ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಮನುಷ್ಯನನ್ನು ಎದುರಿಸಲು ಪ್ರಾರಂಭಿಸುತ್ತವೆ. ಆಗ ಮನುಷ್ಯ ಪಜೀತಿಗೊಳಗಾಗುತ್ತಾನೆ ಎಂದು ನುಡಿದರು.
ಪ್ರಾಣಿಗಳು ಬುದ್ಧಿ ಇಲ್ಲದೇ ಪಜೀತಿಗೊಳಪಡಿಸುತ್ತಿರುತ್ತವೆ. ಆದರೆ ಮನುಷ್ಯ ಬುದ್ಧಿವಂತ ಪ್ರಾಣಿ. ಅವನಿಂದಾಗುವ ಪಜೀತಿ ಕೆಲವೊಮ್ಮೆ ಅಪಾಯಕಾರಿ ಪರಿಣಾಮವನ್ನೇ ಬೀರುತ್ತವೆ. ಕೆಲವೊಮ್ಮೆ ಪ್ರಾಣಿಗಳ ಚಟುವಟಿಕೆಯನ್ನು ಗಮನಿಸಿದರೆ ಬಹಳ ಮಜವಾಗಿರುತ್ತದೆ. ಪ್ರಾಣಿಗಳಿಂದ ನಾವು ಪಜೀತಿಗೊಳಗಾದರೂ ಅವುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿರುತ್ತದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಮಣಿಕರ್ಣಿಕ ಮಾತುಗಾರರ ವೇದಿಕೆಯ ಕಾರ್ಯದರ್ಶಿ ಜಯಶ್ರೀ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿಷಯದ ಕುರಿತು ವಿದ್ಯಾರ್ಥಿಗಳಾದ ಸುಮಯಾ, ರಕ್ಷಿತಾ, ರಕ್ಷಿತಾ.ಎಚ್, ಹರಿಣಾಕ್ಷಿ, ಭುವನೇಶ್ವರಿ, ಪೂಜಾ ಪಕ್ಕಳ, ಜಯಶ್ರೀ, ರಶ್ಮಿತಾ ರೈ, ವೈಷ್ಣವಿ ಹಾಗೂ ಸ್ವಪ್ನ ಮಾತನಾಡಿದರು.
ವಿದ್ಯಾರ್ಥಿ ಪ್ರಸಾದ್ ಆಚಾರ್ಯ.ಕೆ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಪತ್ರಿಕೋದ್ಯಮ ಉಪನ್ಯಾಸಕಿ ಭವ್ಯ.ಆರ್ ನಿಡ್ಪಳ್ಳಿ ವಂದಿಸಿದರು.