ಪ್ರಸ್ತುತ ವಿದ್ಯಾರ್ಥಿಗಳಿಗೆ ಮಾದರಿಗಳ ಕೊರತೆಯಿದೆ: ಡಾ.ಮಾಧವ ಭಟ್
ಪುತ್ತೂರು: ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳಿಗೆ ಮಾದರಿಗಳ ಕೊರತೆಯಿದೆ. ಆದರ್ಶ ವ್ಯಕ್ತಿಗಳಿಲ್ಲದೆ ತಾವು ಹೇಗಾಗಬೇಕೆಂಬ ಕಲ್ಪನೆಯನ್ನು ಬೆಳೆಸಿಕೊಳ್ಳುವುದಕ್ಕೆ ಮಕ್ಕಳಿಗೆ ಕಷ್ಟವಾಗುತ್ತಿದೆ ಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಮಾಧವ ಭಟ್ ಹೇಳಿದರು.
ಅವರು ಸೋಮವಾರ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಆಯೋಜಿಸುವ ಮಣಿಕರ್ಣಿಕ ಮಾತುಗಾರರ ವೇದಿಕೆಯಲ್ಲಿ ನಾ ಕಂಡ ಶ್ರೇಷ್ಟ ಗುರು ಎಂಬ ವಿಷಯವಾಗಿ ಮಾತನಾಡಿದರು.
ತಾನು ಓದುವ ಸಂದರ್ಭವನ್ನು ನೆನಪಿಸಿಕೊಂಡ ಡಾ.ಮಾಧವ ಭಟ್, ನನಗೆ ಡಾ.ಯು.ಆರ್.ಅನಂತಮೂರ್ತಿಯಂತಹ ಗುರುಗಳು ಬೋಧಿಸಿದ ಪಾಠ ಇಂದಿಗೂ ನೆನಪಿಗೆ ಬರುತ್ತಿದೆ. ಅಂತಹ ಗುರುಗಳಿಗೂ ಅವರದೇ ಆದ ವಿಷಯಗಳಿತ್ತು. ಆ ವಿಷಯಗಳಲ್ಲಿ ಅವರು ಅದ್ಭುತವಾಗಿ ತರಗತಿ ನಡೆಸುತ್ತಿದ್ದರು. ಆದರೆ ಪ್ರತಿಯೊಂದು ವಿಷಯದಲ್ಲಿಯೂ, ಪ್ರತಿಯೊಂದು ದಿನವೂ ಸದಾ ಸ್ಮರಿಸುವಂತಾಗಬೇಕೆಂಬ ಹಠದೊಂದಿಗೆ ನಾನು ವೃತ್ತಿಗಿಳಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಕನ್ನಡ ವಿಭಾಗ ಮುಖ್ಯಸ್ಥ ಡಾ.ಎಚ್.ಜಿ.ಶ್ರೀಧರ್ ಮಾತನಾಡಿ ಶ್ರೇಷ್ಟ ಗುರುವನ್ನು ಪಡೆಯುವುದು ಈಗೀಗ ಅತ್ಯಂತ ದುರ್ಲಭ. ಈ ನಿಟ್ಟಿನಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಪುಣ್ಯವಂತರು. ಡಾ.ಮಾಧವ ಭಟ್ಟರಂತಹ ಅದ್ಭುತ ಗುರುಗಳು ದೊರಕಿದ್ದಾರೆ ಎಂದು ನುಡಿದರು.
ಈ ಸಂದರ್ಭದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕಿ ಹರಿಣಿ ಪುತ್ತೂರಾಯ, ಇಂಗ್ಲಿಷ್ ಉಪನ್ಯಾಸಕ ಗಣೇಶ್ ಪ್ರಸಾದ್, ಮಾಧವ ಭಟ್ ಅವರ ಪುತ್ರ ಹರ್ಷಿತ್, ವಿದ್ಯಾರ್ಥಿನಿಯರಾದ ಭವಿಷ್ಯ ಹಾಗೂ ಶಿಲ್ಪಾ ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಮಂಗಳವಾರ ನಿವೃತ್ತಿಗೊಳ್ಳುತ್ತಿರುವ ಪ್ರಾಚಾರ್ಯ ಡಾ.ಎಚ್ ಮಾಧವ ಭಟ್ ಅವರನ್ನು ಪತ್ರಿಕೋದ್ಯಮ ವಿಭಾಗ, ಕನ್ನಡ ವಿಭಾಗ ಹಾಗೂ ಐ ಟಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗ ಮುಖ್ಯಸ್ಥ ಪ್ರಕಾಶ್ ಕುಮಾರ್ ಉಪಸ್ಥಿತರಿದ್ದರು. ಕಂಪ್ಯೂಟರ್ ಸೈನ್ಸ್ ಉಪನ್ಯಾಸಕಿ ರಮ್ಯಾ ಕಶ್ಯಪ್ ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಡಾ.ಗೀತಾ ಕುಮಾರಿ ಟಿ ವಂದಿಸಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು.