ಪ್ರತಿ ವಿದ್ಯಾರ್ಥಿಯಲ್ಲೂ ದೈವತ್ವವಿದೆ: ಡಾ.ಮಾಧವ ಭಟ್
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ೩೩ ವರ್ಷ ೧ ತಿಂಗಳು ಪ್ರಾಧ್ಯಾಪಕರಾಗಿ ೪ ವರ್ಷ ೧೧ತಿಂಗಳುಗಳ ಕಾಲ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ಜೂನ್ ೩೦ರಂದು ನಿವೃತ್ತರಾದ ಡಾ.ಎಚ್.ಮಾಧವ ಭಟ್ ಅವರನ್ನು ಪತ್ನಿ ಉಷಾ ಭಟ್ ಸಮೇತವಾಗಿ ಕಾಲೇಜು ಆಡಳಿತ ಮಂಡಳಿ, ಉಪನ್ಯಾಸಕ ಹಾಗೂ ಉಪನ್ಯಾಸಕೇತರ ವೃಂದದ ಪರವಾಗಿ ಮಂಗಳವಾರ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಮಾಧವ ಭಟ್ ಈ ವರೆಗಿನ ತನ್ನ ವೃತ್ತಿ ಜೀವನದಲ್ಲಿ ಪ್ರತಿ ಮಗುವಿನಲ್ಲೂ ಇರುವ ದೈವತ್ವವನ್ನು ಕಾಣಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಎಂದು ನುಡಿದರು.
ಶಿಲ್ಪಿಯೊಬ್ಬ ನಿರ್ಜೀವ ಕಲ್ಲಿನಲ್ಲಿ ಅಡಗಿರುವ ದೇವರನ್ನು ಗುರುತಿಸುತ್ತಾನೆ ಎಂದಾದರೆ ಸಜೀವ ಮಗುವಿನಲ್ಲಿರುವ ದೇವರನ್ನು ಗುರುತಿಸುವುದಕ್ಕೆ ಅದೇಕೆ ಸಾಧ್ಯವಿಲ್ಲ? ಅಧ್ಯಯನದ ಸುಖವನ್ನು ವಿದ್ಯಾರ್ಥಿಗಳಿಗೆ ಅರ್ಥ ಮಾಡಿಸುವ ಗುರುತರ ಹೊಣೆ ಅಧ್ಯಾಪಕರದ್ದು. ಆಗ ಮಾತ್ರ ವಿದ್ಯಾರ್ಥಿಗಳ ಅಂತಃಸತ್ವ ಹೊರಜಗತ್ತಿಗೆ ಕಾಣಿಸಿಕೊಳ್ಳಲು ಸಾಧ್ಯ ಎಂದು ನುಡಿದರು.
ಮನುಷ್ಯನ ಧೈರ್ಯ ಅನ್ನುವುದು ಬೊಬ್ಬೆ ಹೊಡೆಯುವುದರಲ್ಲಿ ವ್ಯಕ್ತಗೊಳ್ಳುವುದಿಲ್ಲ. ಬದಲಾಗಿ ಸೋತ ಮೇಲೂ ನಾಳೆ ಮತ್ತೆ ಪ್ರಯತ್ನಿಸುತ್ತೇನೆ ಅನ್ನುವ ಪುಟ್ಟ ಧ್ವನಿಯಲ್ಲಿರುತ್ತದೆ. ಅಂತೆಯೇ ನಾವು ಸರಿಯಾದ ಹಾದಿಯಲ್ಲಿದ್ದರೆ ಕೋಪಗೊಳ್ಳಬೇಕಿಲ್ಲ ಮತ್ತು ತಪ್ಪು ಹಾದಿಯಲ್ಲಿದ್ದರೆ ಕೋಪಗೊಳ್ಳುವಂತಿಲ್ಲ ಎಂಬ ಆದರ್ಶವನ್ನು ಇಟ್ಟುಕೊಂಡು ನಾನು ಶಾಂತವಾಗಿ ಕಾರ್ಯನಿರ್ವಹಿಸಿದೆ ಎಂದರು.
ಅಭಿನಂದನಾ ಭಾಷಣ ಮಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಪ್ರೊ.ಎ.ವಿ.ನಾರಾಯಣ ಮಾತನಾಡಿ ಪ್ರಾಂಶುಪಾಲರಾಗುವುದೆಂದರೆ ಒತ್ತಡವನ್ನು ಮೇಲೆಳೆದುಕೊಂಡಂತೆ. ಅದನ್ನು ನಿಭಾಯಿಸುವುದು ವಿಶೇಷ ಕಲೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಡಾ.ಮಾಧವ ಭಟ್ ಕರ್ತವ್ಯ ನಿಷ್ಟೆಗೆ ಹೆಸರಾದವರು. ಅವರು ಈ ಸಂಸ್ಥೆಯನ್ನು ಅಪಾರವಾಗಿ ಪ್ರೀತಿಸುತ್ತಾರೆ ಎಂಬುದು ಸುಸ್ಪಷ್ಟ ಎಂದು ಅಭಿಪ್ರಾಯ ಹಂಚಿಕೊಂಡರು. ಈ ಸಂದರ್ಭದಲ್ಲಿ ಉಪಪ್ರಾಂಶುಪಾಲ ಡಾ.ಪೀಟರ್ ವಿಲ್ಸನ್ ಪ್ರಭಾಕರ್, ಉಪನ್ಯಾಸಕರುಗಳಾದ ಎಚ್.ಬಾಲಕೃಷ್ಣ, ವಿಜಯ ಸರಸ್ವತಿ, ಸರಸ್ವತಿ, ಕಛೇರಿ ಅಧೀಕ್ಷಕ ಜಗನ್ನಾಥ ಎ, ಕಛೇರಿ ಉದ್ಯೋಗಿಗಳಾದ ಮುರಳೀಧರ, ಮೋಹನ, ಪುನೀತ್, ಫೆಡರಲ್ ಬ್ಯಾಂಕ್ ಮೆನೇಜರ್ ವಿಷ್ಣುಪ್ರಸಾದ್ ನಿಡ್ಡಾಜೆ, ನಿವೃತ್ತರಾದ ಪ್ರಾಧ್ಯಾಪಕ ಎಂ.ಎನ್.ಚೆಟ್ಟಿಯಾರ್ ಹಾಗೂ ಕಛೇರಿ ವಿಭಾಗದ ಸೀತಾರಾಮ ಶೆಣೈ ಅನಿಸಿಕೆ ಹಂಚಿಕೊಂಡರು.
ವೇದಿಕೆಯಲ್ಲಿ ಕಾಲೇಜಿನ ಸಂಚಾಲಕ ಎಂ.ಟಿ.ಜಯರಾಮ ಭಟ್ ಉಪಸ್ಥಿತರಿದ್ದರು. ಉಪನ್ಯಾಸಕಿ ನಿವೇದಿತಾ ಪ್ರಾರ್ಥಿಸಿದರು. ಅಧ್ಯಾಪಕ ಸಂಘದ ಅಧ್ಯಕ್ಷ ಶಂಕರನಾರಾಯಣ ಭಟ್ ಸ್ವಾಗತಿಸಿದರು. ಉಪನ್ಯಾಸಕಿ ಹರಿಣಿ ಪುತ್ತೂರಾಯ ವಂದಿಸಿದರು. ಪ್ರಾಧ್ಯಾಪಕ ವೆಂಕಟರಮಣ ಭಟ್ ಕಾರ್ಯಕ್ರಮ ನಿರ್ವಹಿಸಿದರು.