ಅಹಂ ದೂರವಾಗದೆ ಶಿಕ್ಷಣ ಸಾರ್ಥಕವಾಗದು: ಡಾ. ತಾಳ್ತಜೆ
ಪುತ್ತೂರು: ಬದುಕಿನಲ್ಲಿ ಬವಣೆ, ತೊಂದರೆಗಳು ಅನೇಕ. ಅದನ್ನು ಮೀರಿ ಸಾಧನೆ ಅಚ್ಚೊತ್ತಬೇಕು. ಸುಶಿಕ್ಷಿತರೆಲ್ಲರೂ ಸುಸಂಸ್ಕೃತರಾಗಿರಬೇಕಾಗಿಲ್ಲ. ನಾನು ನನ್ನದು ಎಂಬ ಅಹಂ ಬಿಟ್ಟಾಗ ಸುಶಿಕ್ಷಿತ ಸುಸಂಸ್ಕೃತನಾಗುತ್ತಾನೆ. ವ್ಯಾಸಂಗ, ಅಭ್ಯಾಸದೊಡನೆ ಒಳ್ಳೆಯ ಮಾನವರಾಗುವ ಕಡೆಗೆ ಮುನ್ನಡೆಯಬೇಕು. ಎಂದು ಸಾಹಿತಿ, ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಡಾ. ತಾಳ್ತಜೆ ವಸಂತ ಕುಮಾರ್ ಹೇಳಿದರು.
ಅವರು ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಲೇಜಿನ ಹಿರಿಯ ವಿದ್ಯಾರ್ಥಿ, ನ್ಯಾಯವಾದಿ ಮುರಳೀಕೃಷ್ಣ ಕೆ.ಎನ್. ಕಲ್ಮಡ್ಕ ಮಾತನಾಡಿ ಬದುಕನ್ನು ಕಟ್ಟಿಕೊಡುವ ಶಿಕ್ಷಣದ ಅಗತ್ಯವಿದೆ. ಅಂಕ, ಫಲಿತಾಂಶ, ಉನ್ನತಿ ಕೇವಲ ಇವುಗಳ ಬಗೆಗೆ ಯೋಚಿಸುತ್ತಾ ಅದರ ಹೊರಗಿನ ಪ್ರಪಂಚವನ್ನು ಮರೆಯುತ್ತಿದ್ದೇವೆ. ಮಾನವೀಯತೆ ಕಣ್ಮರೆಯಾಗುತ್ತಿದೆ. ಉದ್ಯೋಗ ಪಡೆಯುವುದೇ ಅಂತಿಮವಾಗಬಾರದು. ವೃತ್ತಿ ಬದುಕಿನ ಜೊತೆ ಸಾಮಾಜಿಕ ಜೀವನದಲ್ಲೂ ತೊಡಗಿಸಿಕೊಂಡಾಗ ಬದುಕುವ ಬದುಕಿಗೆ ಒಂದು ಸಾರ್ಥಕತೆ ದೊರಕುತ್ತದೆ ಎಂದರು
ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಪ್ರತಿಭೆ ಕೇವಲ ಅಂಕಕ್ಕೆ ಸೀಮಿತಗೊಳ್ಳದೆ, ಇತರ ಜ್ಞಾನ ಪಡೆಯಲೂ ಉಪಯುಕ್ತವಾಗಲಿ. ಒಳ್ಳೆಯ ಜೀವನ ಪಡೆಯುವಲ್ಲಿ ಅಂಕ ಒಂದು ಮೆಟ್ಟಿಲು ಅಷ್ಟೇ. ಪ್ರತಿಭೆಯೊಂದಿಗೆ ಜೀವನ ಮೌಲ್ಯ, ಪ್ರಾಪಂಚಿಕ ತಿಳುವಳಿಕೆಯೂ ಮುಖ್ಯವಾಗುತ್ತದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ. ವಿಘ್ನೇಶ್ವರ ವರ್ಮುಡಿ ಉಪಸ್ಥಿತರಿದ್ದರು. ಕಾಲೇಜಿನ ಶೈಕ್ಷಣಿಕ ಪ್ರತಿಭೆಗಳನ್ನು ಗುರುತಿಸಿ ಗೌರವಿಸಲಾಯಿತು. ಹಳೆಯ ವಿದ್ಯಾರ್ಥಿನಿಯರಾದ ಪ್ರಜ್ಞಶ್ರೀ ಹಾಗೂ ದೀಕ್ಷಾ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಸ್ನಾತ್ತಕೋತ್ತರ ವಾಣಿಜ್ಯ ವಿಭಾದ ಉಪನ್ಯಾಸಕ ಹರಿಪ್ರಸಾದ್ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ದೀಕ್ಷಿತ್ ವಂದಿಸಿದರು. ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕಿ ಜೀವಿತಾ ನಿರ್ವಹಿಸಿದರು.