ವಿವೇಕಾನಂದದಲ್ಲಿ ರಕ್ಷಕ ಶಿಕ್ಷಕ ಸಂಘದ ವಾರ್ಷಿಕ ಮಹಾ ಸಭೆ
ಪುತ್ತೂರು: ಇಂದು ಶಿಕ್ಷಣ ವ್ಯಾಪಾರವೆನಿಸಿದೆ. ಜೀವನೋಪಾಯಕ್ಕೆ ಉದ್ಯಮವೆಂಬಂತೆ ಶಿಕ್ಷಣ ಕ್ಷೇತ್ರ ಬಿಂಬಿತವಾಗುತ್ತಿದೆ. ಹಾಗಾಗಿಯೇ ಶಿಕ್ಷಣವೂ ತನ್ನ ಮಹತ್ವವನ್ನು ಕಳೆದುಕೊಂಡು ಅತ್ಯುತ್ತಮ ನೈತಿಕ ವಿಚಾರಗಳಿಂದ ಮಾಗಿದ ಯುವ ಪೀಳಿಗೆಯನ್ನು ಸಮಾಜಕ್ಕೆ ಕೊಡುವಲ್ಲಿ ವಿಫಲವಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬರೂ ಚಿಂತಿತರಾಗಬೇಕು. ನವ ಭಾರತ ನಿರ್ಮಾಣಕ್ಕೆ ನಮ್ಮ ನಮ್ಮ ಯೋಚನಾ ಶಕ್ತಿಯ ಕೊಡುಗೆಗಳನ್ನು ನೀಡಬೇಕು ಎಂದು ವಿವೇಕಾನಂದ ಕಾಲೇಜಿನ ಸ್ಥಾಪಕ ಸಂಚಾಲಕ ಉರಿಮಜಲು ರಾಮ ಭಟ್ ಹೇಳಿದರು.
ಅವರು ಕಾಲೇಜಿನಲ್ಲಿ ಶನಿವಾರ ರಕ್ಷಕ ಶಿಕ್ಷಕ ಸಂಘದ ಮಹಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತ ಸರ್ವ ಧರ್ಮವನ್ನೂ, ಜಾತಿಗಳನ್ನೂ ಒಳಗೊಂಡ ಭಾವ ತೀವ್ರತೆಯ ರಾಷ್ಟ್ರ. ಇಲ್ಲಿ ಮನುಷ್ಯ ಸಂಬಂಧ, ಭಾವನೆಗಳಿಗೆ ಮಹತ್ವವಿದೆ. ಹಾಗಾಗಿಯೇ ಸ್ವಾಮೀ ವಿವೇಕಾನಂದರು ಚಿಕಾಗೋದಲ್ಲಿ ಸಹೋದರ ಸಹೋದರಿಯರೇ ಎಂದು ಸಂಬೋಧಿಸುವುದಕ್ಕೆ ಸಾಧ್ಯವಾಯಿತು. ಆದರೆ ಇಂತಹ ರಾಷ್ಟ್ರದಲ್ಲಿ ಭ್ರಷ್ಟತೆಗೆ ಅವಕಾಶ ಮಾಡಿಕೊಡಬಾರದು. ವಿದ್ಯಾವಂತರೇ ಹೆಚ್ಚೆಚ್ಚು ಭ್ರಷ್ಟರಾಗುತ್ತಿರುವಾಗ ಶಿಕ್ಷಣದ ವೈಫಲ್ಯ ಎದ್ದು ಕಾಣುತ್ತದೆ ಎಂದು ನುಡಿದರು.
ಅತಿಥಿಯಾಗಿ ಆಗಮಿಸಿದ್ದ ಕಾಲೇಜಿನ ಸಂಚಾಲಕ ಜಯರಾಮ ಭಟ್ ಎಂ.ಟಿ ಮಾತನಾಡಿ ಪೋಷಕರು ತಮ್ಮ ಮಕ್ಕಳ ಬಗೆಗೆ ಆಗಿಂದಾಗ್ಗೆ ವಿಚಾರಿಸಿಕೊಳ್ಳಬೇಕು. ಮಕ್ಕಳಲ್ಲಿ ಪ್ರತಿ ನಿತ್ಯ ಮಾತನಾಡುವುದು ಅತ್ಯಂತ ಅಗತ್ಯ. ನಮ್ಮ ಮಕ್ಕಳನ್ನು ನಾವೇ ಸರಿಯಾಗಿ ನಡಿಕೊಳ್ಳದಿದ್ದರೆ ಮತ್ಯಾರು ತಾನೇ ನೋಡಲು ಸಾಧ್ಯ ಎಂದು ಪ್ರಶ್ನಿಸಿದರು.
ಅಧ್ಯಕ್ಷತೆ ವಹಿಸಿದ್ದ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಈಶ್ವರ ಭಟ್ ಮಾತನಾಡಿ ನಮ್ಮ ಮಕ್ಕಳಿಗೆ ನಾವೇ ಮಾದರಿಯಾಗಬೇಕು. ಮಕ್ಕಳು ಮುಂದೆ ಬರಬೇಕೆಂದು ಬಯಸುವ ನಾವು ಅವಕಾಶ ಇದ್ದಾಗಲೂ ಹಿಂದೆಯೇ ಉಳಿಯಲು ಯತ್ನಿಸುತ್ತೇವೆ. ಹಾಗಾಗಿ ಮೊದಲು ಹೆತ್ತವರು ಬದಲಾಗಬೇಕು. ತನ್ಮೂಲಕ ಮಕ್ಕಳಿಗೆ ಮಾರ್ಗದರ್ಶಕರೆನಿಸಬೇಕು ಎಂದು ನುಡಿದರು.
ಈ ಸಂದರ್ಭದಲ್ಲಿ ವಾರ್ಷಿಕ ವರದಿ, ಲೆಕ್ಕಪತ್ರ ಮಂಡನೆ, ವಿದ್ಯಾರ್ಥಿ ವೇತನ ವಿತರಣೆ ಹಾಗೂ ರಕ್ಷಕ ಶಿಕ್ಷಕ ಸಂಘಕ್ಕೆ ನೂತನ ಸದಸ್ಯರುಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ವೇದಿಕೆಯಲ್ಲಿ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷರುಗಳಾದ ನಾರಾಯಣ ಜೋಯಿಸ, ರವೀಂದ್ರ, ಕಾರ್ಯದರ್ಶಿ ಶ್ರೀಕೃಷ್ಣ ಗಣರಾಜ ಭಟ್ ಹಾಗೂ ಖಜಾಂಜಿ ಆನಂದ ಗೌಡ ಮೂವಪ್ಪು ಅಲ್ಲದೆ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು.
ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶಂಕರನಾರಾಯಣ ಭಟ್ ಸ್ವಾಗತಿಸಿದರು. ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಪ್ರಸ್ತಾವನೆಗೈದರು. ಉಪನ್ಯಾಸಕಿ ರವಿಕಲಾ ವಂದಿಸಿದರು. ಉಪನ್ಯಾಸಕಿಯರಾದ ಹರಿಣಿ ಹಾಗೂ ಡಾ.ಆಶಾ ಸಾವಿತ್ರಿ ಕಾರ್ಯಕ್ರಮ ನಿರ್ವಹಿಸಿದರು.