ಜ್ಞಾನ ಸಂಪತ್ತನ್ನು ತೆರೆದಿಡುವ ಕಾರ್ಯ ನಿತ್ಯ ನಡೆಯುತ್ತಿದೆ: ಡಾ.ಪೀಟರ್
ಪುತ್ತೂರು: ವಿವೇಕಾನಂದ ವಿದ್ಯಾಸಂಸ್ಥೆ ಹಲವು ವರ್ಷಗಳಿಂದ ಅತ್ಯಂತ ಅದ್ಭುತವಾಗಿ ಬೆಳೆದುನಿಂತಿದೆ. ಹಲವಾರು ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸುವ ಕಾರ್ಯವನ್ನು ಶಿಕ್ಷಕ-ರಕ್ಷಕ ಸಂಘ ಮಾಡುತ್ತಿದೆಎಂದು ವಿವೇಕಾನಂದ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಶಿಕ್ಷಕ-ರಕ್ಷಕ ಸಂಘದ ವತಿಯಿಂದ ಆಯೋಜಿಸಿದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಶನಿವಾರ ಮಾಡಿದರು.
ಕಾಲೇಜಿನ ಶಿಕ್ಷಕ-ರಕ್ಷಕ ಸಂಘ ಸದಾ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಪೂರಕವಾದ ಕಾರ್ಯಕ್ರಮವನ್ನು ನಡೆಸುತ್ತಿದೆ. ಇದರಿಂದ ವರ್ಷದಿಂದ- ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಉತ್ತಮ ಗುಣಮಟ್ಟದ ಬೋಧಕರು, ಪೂರಕವಾಗಿ ಸ್ಪಂದಿಸುವ ಹೆತ್ತವರು, ಸಹಕಾರ ನೀಡುವ ಆಡಳಿತ ಮಂಡಳಿಯ ಮೂಲಕ ಜ್ಞಾನದ ಸಂಪತ್ತನ್ನು ತೆರೆದಿಡುವ ಕಾರ್ಯಕ್ರಮ ದಿನನಿತ್ಯ ನಡೆಯುತ್ತಿದೆ ಎಂದರು.
ಕ್ರಾರ್ಯಕ್ರಮದಲ್ಲಿ ಪಾಲ್ಗೊಂಡ ವಿವೇಕಾನಂದ ವಿದ್ಯಾವರ್ಧಕ ಸಂಘದ ಮಾಜಿ ಗೌರವಾಧ್ಯಕ್ಷ ಕೆ.ರಾಮಭಟ್ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ತಮ್ಮ ಭವಿಷ್ಯಕ್ಕಾಗಿ ಕನಸು ಕಾಣಬೇಕು. ಪೋಷಕರು ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಚಿಂತನೆ ಮಾಡಬೇಕು. ಉತ್ತಮ ವಿದ್ಯಾರ್ಥಿಗಳ ನಿರ್ಮಾಣ ಮಾಡುವುದು ನಮ್ಮ ವಿದ್ಯಾಸಂಸ್ಥೆಯ ಸಂಕಲ್ಪವಾಗಿದೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ವೆಂಕಟೇಶ್ ವಿ. ಮಾತನಾಡಿ ಶಿಕ್ಷಕ-ರಕ್ಷಕ ಸಂಘದ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾದ ಕಾರ್ಯಕ್ರಮ ಮಾಡುವುದು ಉದ್ದೇಶವಾಗಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಸೌಕರ್ಯವನ್ನು ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಕಾಲೇಜಿನ ಪ್ರತಿಯೊಂದು ಕಾರ್ಯ ಚಟುವಟಿಕೆಯಲ್ಲಿ ಶಿಕ್ಷಕ-ರಕ್ಷಕ ಸಂಘ, ಆಡಳಿತ ಮಂಡಳಿ ಹಾಗೂ ಅಧ್ಯಾಪಕರ ಸಲಹೆಯ ಮೇರೆಗೆ ಸಕ್ರಿಯವಾಗಿ ತೊಡಗುತ್ತಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ವಾರ್ಷಿಕ ವರದಿ, ಲೆಕ್ಕ ಪತ್ರ ಮಂಡನೆ, ವಿದ್ಯಾರ್ಥಿ ವೇತನ ವಿತರಣೆ, ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಪ್ರೊ.ಎ.ವಿ.ನಾರಾಯಣ, ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳಾದ ವಸಂತ ಭಟ್, ಶ್ರೀಕೃಷ್ಣ ಗಣರಾಜ ಭಟ್ ಮತ್ತಿತರರು ಉಪಸ್ಥಿತರಿದ್ದರು. ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಕೆ.ಶಂಕರನಾರಾಯಣ ಭಟ್ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮ ಪಾಲಕ ಪ್ರೊ.ಕೃಷ್ಣ ಕಾರಂತ ವಂದಿದರು. ಉಪನ್ಯಾಸಕಿ ವಿಜಯ ಸರಸ್ವತಿ ಕಾರ್ಯಕ್ರಮ ನಿರ್ವಹಿದರು.