VIVEKANANDA COLLEGE, PUTTUR

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ವಿವೇಕಾನಂದ ಪದವಿಪೂರ್ವ ಕಾಲೇಜು ವಾರ್ಷಿಕೋತ್ಸವ – ವಿದ್ಯೆ ದೇಶ ಪ್ರೇಮವನ್ನು ತುಂಬಬೇಕು: ಡಿ.ಎಚ್.ಶಂಕರಮೂರ್ತಿ

ಪುತ್ತೂರು: ಭಾರತಕ್ಕೆ ಸ್ವಾತಂತ್ರ್ಯ ಯಾವಾಗ ಬಂತು ಅನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೆ ಯಾವಾಗ ಮತ್ತು ಯಾಕೆ ಸ್ವಾತಂತ್ರ್ಯವನ್ನು ಕಳೆದುಕೊಂಡೆವು ಗೊತ್ತಿದೆಯಾ? ಹೀಗಂತ ಪ್ರಶ್ನಿಸಿದವರು  ಕರ್ನಾಟಕ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರ ಮೂರ್ತಿ. ಸಂದರ್ಭ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ.

          ಅವರು ಗುರುವಾರ ಇಲ್ಲಿನ ವಿವೇಕಾನಂದ ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ಸುವರ್ಣ ಮಹೋತ್ಸವ ಸಂದರ್ಭದಲ್ಲಿ ಎರಡನೇ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

NEWS PHOTO - SHANKARAMURTHY

ನಾವೆಲ್ಲ ಭಾರತೀಯರು ಎಂಬ ಭಾವನೆ ಇಲ್ಲದಿದ್ದದ್ದಕ್ಕೇ ನಾವು ಸ್ವಾತಂತ್ರ್ಯ ಕಳೆದುಕೊಂಡೆವು. ಹಾಗಾಗಿ ನಾವೆಲ್ಲ ಒಂದು ಎನ್ನುವ ಭಾವ ಇದ್ದರೆ ಮಾತ್ರ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬಹುದು. ವಿದ್ಯೆ ಕೇವಲ ಹಣ ಸಂಪಾದನೆಗೆ ಮೀಸಲಾಗಿರಬಾರದು. ವಿದ್ಯೆ ಜ್ಞಾನವೃದ್ಧಿಗೆ ಸಹಾಯಕವಾಗಬೇಕು. ದೇಶ ಪ್ರೇಮವನ್ನು ವೃದ್ಧಿಸಬೇಕು. ಸಮಾಜ ನನ್ನದು ಅನ್ನುವ ಪ್ರೀತಿ ಬೆಳೆಸಬೇಕು ಎಂದು ನುಡಿದರು.

          ಭಾರತದ ಬಹಳ ಹಳೆಯ ಚರಿತ್ರೆಯನ್ನು ಗಮನಿಸಿದರೆ ನಮ್ಮ ಎದೆ ಉಬ್ಬುತ್ತದೆ. ಅಂದಿನ ಕಾಲದಲ್ಲೇ ಭಾರತೀಯರು ವಿಮಾನ ಕಂಡು ಹಿಡಿದರು, ವೈದ್ಯಶಾಸ್ತ್ರದಲ್ಲಿ ಸಾಧನೆ ಮೆರೆದಿದ್ದರು, ಅಪಾರ ಜ್ಞಾನ ಭಂಡಾರ ಹೊಂದಿದ್ದರು ಎಂಬುದನ್ನು ಓದುವಾಗ ಆಶ್ಚರ್ಯವಾಗುತ್ತದೆ. ಆದರೆ ಅದೇ ಭಾರತದ ಕಳೆದ ಕೆಲವು ನೂರು ವರ್ಷಗಳ ಹಿಂದಿನ ಇತಿಹಾಸ ನೋಡಿದರೆ ಭಾರತದ ಶೈಕ್ಷಣಿಕ ಕ್ಷೇತ್ರ ತೀರಾ ಬಡವಾಗಿತ್ತು ಎಂಬುದು ಗೊತ್ತಾಗುತ್ತದೆ. ಇದು ಬಹುದೊಡ್ಡ ವಿರೋಧಾಭಾಸ  ಎಂದರು.

          ಭಾರತೀಯರನ್ನು ವಿದ್ಯಾವಂತರನ್ನಾಗಿಸಿದರೆ ಅವರ ಸಾಧನೆಯನ್ನು ತಡೆಯಲು ಸಾಧ್ಯವಿಲ್ಲ ಎಂಬ ಅರಿವಿನಿಂದಲೇ ಈ ದೇಶದ ಮೇಲೆ ಆಕ್ರಮಣ ಮಾಡಿದವರೆಲ್ಲಾ ಇಲ್ಲಿನ ಜ್ಞಾನ ಸಂಪತ್ತನ್ನು ನಾಶಗೈಯುತ್ತಾ ಬಂದರು. ಹಾಗಾಗಿಯೇ ನಳಂದದಂತಹ ಬಹುದೊಡ್ಡ ಜ್ಞಾನ ಕೇಂದ್ರಕ್ಕೆ ಬೆಂಕಿ ಹಚ್ಚುವಂತಹ ಕಾರ್ಯ ನಡೆಯಿತು ಎಂದು ಹೇಳಿದರು.

          ಅತಿಥಿಯಾಗಿ ಆಗಮಿಸಿದ್ದ ಕೆನರಾ ಬ್ಯಾಂಕ್ ಡೆಪ್ಯುಟಿ ಜನರಲ್ ಮೆನೇಜರ್ ಸುಜಾತಾ ಕರುಣಾಕರನ್ ಮಾತನಾಡಿ, ಭಾರತದಷ್ಟು ಅಗಾಧವಾದ ಯುವ ಶಕ್ತಿಯನ್ನು ಹೊಂದಿದ ರಾಷ್ಟ್ರ ಇನ್ನೊಂದಿಲ್ಲ. ಈಗಿನ ಯುವ ಜನತೆ ನಿಜಕ್ಕೂ ಅದೃಷ್ಟವಂತರು. ಸಾಧನೆಗಳಿಗೆ ಅಪಾರ ಅವಕಾಶ ಲಭ್ಯವಾಗುತ್ತಿದೆ. ಹಿಂದಿನ ಸಂಗತಿಗಳನ್ನು ಮರೆತು ಇಂದಿನ ದಿನಕ್ಕಾಗಿ ಬದುಕಿದಾಗ ಭವಿಷ್ಯ ಸುಂದರಗೊಳ್ಳುತ್ತದೆ ಎಂದು ನುಡಿದರು.

          ಮತ್ತೋರ್ವ ಅತಿಥಿ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಸ್ವಾತಂತ್ರ್ಯ ಎಂದರೆ ಬೇಕಾಬಿಟ್ಟಿ ಇರುವುದಲ್ಲ. ಬದಲಾಗಿ ಮೌಲ್ಯಗಳೊಂದಿಗೆ ಬದುಕುವುದು. ಶಿಕ್ಷಣ ಅಂತಹ ಮೌಲ್ಯಗಳನ್ನು ತುಂಬಬೇಕು. ಹಿರಿಯರೆಲ್ಲ ಸೇರಿ ಅಂತಹ ಉದಾತ್ತ ಕಾರಣಕ್ಕಾಗಿಯೇ ಈ ವಿದ್ಯಾ ಸಂಸ್ಥೆಯನ್ನು ಆರಂಭಿಸಿದ್ದಾರೆಂಬುದನ್ನು ಮರೆಯಬಾರದು  ಎಂದರು.

          ಈ ಸಂದರ್ಭದಲ್ಲಿ ಸಾಂಸ್ಕೃತಿಕ ಸ್ಪಧೆಗಳಲ್ಲಿ ವಿಜೇತರಾದವರಿಗೆ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಜಯರಾಮ ಭಟ್ ಎಂ.ಟಿ ಬಹುಮಾನ ವಿತರಿಸಿದರು. ಅಂತೆಯೇ ಕ್ರೀಡಾ ಮತ್ತು ರಾಷ್ಟ್ರೀಯ ಸೇನಾ ದಳದ ವಿಜೇತರನ್ನು ಪುರಸ್ಕರಿಸಲಾಯಿತು. ೨೦೧೩-೧೪ನೇ ಸಾಲಿನಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾಥಿಗಳನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ರವೀಂದ್ರ ಎಚ್., ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಅನುಪಮ್ ಶೆಟ್ಟಿ, ವಿನುತ್ ಶೆಟ್ಟಿ ಹಾಗೂ ಪ್ರೇಕ್ಷಾ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿನಿಯರಾದ ತನ್ವಿ ಡಿ.ಐ, ಸುಶ್ಮಿತ ಎನ್.ಜಿ, ಅಖಿಲ, ಈಶ್ವರ್ ಸಂದೇಶ್ ಹಾಗೂ ರವಿತೇಜ ಪ್ರಾರ್ಥಿಸಿದರು. ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಸ್ವಾಗತಿಸಿದರು. ಪ್ರಾಂಶುಪಾಲ ಜೀವನ್‌ದಾಸ್ ಎ ವರದಿ ವಾಚಿಸಿದರು. ಇಂಗ್ಲಿಷ್ ವಿಭಾಗ ಮುಖ್ಯಸ್ಥ ಪರಮೇಶ್ವರ ಶರ್ಮ ವಂದಿಸಿದರು. ಉಪನ್ಯಾಸಕಿಯರಾದ ಡಾ.ನಿವೇದಿತಾ ಹಾಗೂ ಅಕ್ಷತಾ ಕಾರ್ಯಕ್ರಮ ನಿರ್ವಹಿಸಿದರು.