ರಾಜವಾಡೆಯವರದ್ದು ಗಟ್ಟಿತನದ ಸಾಹಿತ್ಯ: ಡಾ. ಶ್ರೀವಳ್ಳಿ
ಪುತ್ತೂರು: ದುಡ್ಡಿಗಿಂತ ಕಲೆ ಮತ್ತು ಸಂಸ್ಕಾರ ಮುಖ್ಯವೆಂದು ತಿಳಿದು ಸಾಧನೆ ಮಾಡಬೇಕು. ಒಬ್ಬರೇ ಸಾಧನೆ ಮಾಡುವುದಕ್ಕಿಂತ ಒಟ್ಟಾಗಿ ಸಾಧಿಸಬೇಕು. ಈ ಸಾಧನೆಗಾಗಿ ಬಲವಾದ ಸಂಘಟನೆಯನ್ನು ಕಟ್ಟಿಕೊಳ್ಳಬೇಕೆಂದು ತಿಳಿದವರು ಸರಸ್ವತಿ ಬಾಯಿ ರಾಜವಾಡೆ ಎಂದು ಮೈಸೂರು ನವರಸ ನಾಟ್ಯಾಲಯದ ಅಧ್ಯಕ್ಷೆ ಡಾ. ಶ್ರೀವಳ್ಳಿ ಟಿ. ಎಸ್ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಕನ್ನಡ ಸಂಘ, ಹಿಂದಿ ವಿಭಾಗ, ಹಿಂದಿ ಸಂಘ ಮತ್ತು ಮಹಿಳಾ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಸರಸ್ವತಿ ಬಾಯಿ ರಾಜವಾಡೆ ಎಂಬ ವಿಷಯದ ಕುರಿತಾಗಿ ಇತ್ತೀಚೆಗೆ ಮಾತನಾಡಿದರು.
ಯಾವುದೇ ಸಾಹಿತಿಯ ಸಾಹಿತ್ಯದ ಮುಂದೆ ರಾಜವಾಡೆಯ ಸಾಹಿತ್ಯ ಸಮಾನ ಯೋಗ್ಯತೆಯನ್ನು ಹೊಂದಿದೆ. ರಾಜವಾಡೆ ಎಲೆಮರೆಯ ಕಾಯಿಯಾಗಿರದೇ ಅಂದಿನ ಕಾಲದಲ್ಲಿ ಬಹುತೇಕ ಪತ್ರಿಕೆಗಳಲ್ಲಿ ತನ್ನ ಲೇಖನಗಳನ್ನು ಪ್ರಕಟಿಸಿದವರು. ಲೇಖನಿ ಖಡ್ಗಕ್ಕಿಂತ ಹರಿತ ಎಂಬುದರೊಂದಿಗೆ ಸ್ತ್ರೀ ಪುರುಷ ಸಮಾನರು ಎಂಬ ಮನೋಭಾವವನ್ನು ಬೆಳೆಸುವ ಮಹತ್ತರವಾದ ಗುರಿಯನ್ನು ಹೊಂದಿದವರು ಎಂದರು.
ನಮಗೆ ನಾವು ಶಿಕ್ಷಕರಾಗಬೇಕೇ ಹೊರತು ಬೇರವರಿಗಲ್ಲ ಆ ಮೂಲಕ ಸಮಾಜವನ್ನು ಆರೋಗ್ಯ ಪೂರ್ಣ ಸಮಾಜವಾಗಿ ಮಾರ್ಪಡಿಸಲು ಸಾಧ್ಯ. ಇದರಿಂದಾಗಿ ಸಮಾನತೆಯ ಸಮಾಜದ ಜೊತೆಗೆ ಸಮಾನತೆಯ ಸಂಸಾರವನ್ನು ಹೊಂದಬಹುದೆಂದು ತಿಳಿದದ್ದು ಮಾತ್ರವಲ್ಲದೆ ಪ್ರೇಮದ ವಿವಿಧ ಮುಖಗಳು, ಸ್ತ್ರೀ ಸಮಾನತೆ, ಬಡತನ, ಜೀತ ಪದ್ದತಿ ಇವುಗಳನ್ನು ನಾಟಕದ ವಸ್ತುವಾಗಿಟ್ಟುಕೊಂಡು ಆ ಮೂಲಕ ಸ್ತ್ರೀಪರ ನಿಲುವನ್ನು ವ್ಯಕ್ತ ಪಡಿಸಿದವರು ರಾಜವಾಡೆ ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ. ಎಚ್. ಮಾಧವ ಭಟ್ ದಿಟ್ಟತನಕ್ಕೆ, ಶುಭ್ರತೆಗೆ ಮತ್ತೊಂದು ಹೆಸರು ರಾಜವಾಡೆ. ತನ್ನ ಮೂವತ್ತೈನೇ ವಯಸ್ಸಿಗೆ ತಲುಪುವಷ್ಟರಲ್ಲಿ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಬರೆಯಲಾರಂಭಿಸದವರು. ಕಡುಬಡತನದಲ್ಲಿ ಹುಟ್ಟಿ ಬೆಳೆದು ನಂತರ ಪತಿಯ ಮನೆಯನ್ನು ಸೇರಿ ಶ್ರೀಮಂತಿಕೆಯನ್ನು ಪಡೆದದ್ದು ಮಾತ್ರವಲ್ಲದೇ ಅದನ್ನು ಸಮರ್ಥವಾಗಿ ಬಳಸಿಕೊಂಡವರೆಂದು ಹೇಳಿದರು.
ಜೀವನದ ವಿವಿಧ ಘಟ್ಟಗಳನ್ನು ಸಮಾನವಾಗಿ ಅಲ್ಲವಾದರೂ ಸನ್ಯಾಸಿನಿಯಾಗಿ ಬಹುಕಾಲ ಕಳೆದವರು. ಅಂದಿನ ಪುರುಷ ಪ್ರಧಾನ ವ್ಯವಸ್ಥೆಯ ಮತ್ತು ಜಾತೀಯತೆಯ ಬಿಗಿಯನ್ನು ಒದ್ದು ಇಷ್ಟಕ್ಕೂ ಕೂಡ ಹೊಲೆಯನಾರು? ಎಂದು ಪ್ರಶ್ನಿಸಿದ ಧೀಮಂತ ಹೆಣ್ಣು ಸರಸ್ವತಿ ಬಾಯಿ ರಾಜವಾಡೆ ಎಂದು ನುಡಿದರು.
ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ದುರ್ಗಾರತ್ನ.ಸಿ ನಡೆಸಿಕೊಟ್ಟರು. ಡಾ. ಶ್ರೀವಳ್ಳಿ ಟಿ.ಎಸ್. ನೃತ್ಯ ಪ್ರಾತ್ಯಕ್ಷಿಕೆಯನ್ನು ನಡೆಸಿದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್. ಜಿ. ಶ್ರೀಧರ್ ಸ್ವಾಗತಿಸಿ, ವಿದ್ಯಾರ್ಥಿ ಸಂಘದ ಜತೆ ಕಾರ್ಯದರ್ಶಿ ಸ್ವಾತಿ ಆಚಾರ್ಯ ವಂದಿಸಿದರು. ವಿದ್ಯಾರ್ಥಿನಿ ಭುವನೇಶ್ವರಿ ಮತ್ತು ಪೂಜಾ ನಿರೂಪಿಸಿದರು.